ಬೆಂಗಳೂರು: ಪಟಾಕಿ ಸಿಡಿದು 70 ಮಂದಿ ಕಣ್ಣಿಗೆ ಗಂಭೀರ ಗಾಯ..!

Published : Oct 26, 2022, 06:42 AM IST
ಬೆಂಗಳೂರು: ಪಟಾಕಿ ಸಿಡಿದು 70 ಮಂದಿ ಕಣ್ಣಿಗೆ ಗಂಭೀರ ಗಾಯ..!

ಸಾರಾಂಶ

ದೀಪಾವಳಿ ಎರಡನೇ ದಿನ: 10 ಮಂದಿಗೆ ತೀವ್ರ ಹಾನಿ, ಐವರಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ

ಬೆಂಗಳೂರು(ಅ.26):  ದೀಪಾವಳಿಯ ಎರಡನೇ ದಿನವಾದ ಮಂಗಳವಾರ ಪಟಾಕಿ ಸಿಡಿತದಿಂದ ನಗರದಲ್ಲಿ 70 ಮಂದಿ ಕಣ್ಣಿಗೆ ಹಾನಿಯಾಗಿವೆ, ಈ ಪೈಕಿ 10 ಮಂದಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಐದು ಜನರ ದೃಷ್ಟಿಮರಳುವ ಸಾಧ್ಯತೆ ಕಡಿಮೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸೋಮವಾರ ತಡರಾತ್ರಿ ಹಾಗೂ ಮಂಗಳವಾರದಂದು ನಗರದ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆ, ಆಸ್ಟರ್‌ ಸಿಎಂಐ ಆಸ್ಪತ್ರೆ, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿಯಿಂದ ಹಾನಿಗೊಳಗಾದವರು ಚಿಕಿತ್ಸೆ ಪಡೆದಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮಂಗಳವಾರ 10 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಕೆಪಿ ಅಗ್ರಹಾರದಲ್ಲಿ ನೆರೆಮನೆಯವರು ಹಚ್ಚಿದ ಪಟಾಕಿ ಸಿಡಿದು ಅರ್ಜುನ್‌ (21) ಎಂಬ ಯುವಕನ ಕಣ್ಣುಗಳ ಒಳಭಾಗಕ್ಕೆ ಗಾಯವಾಗಿದೆ. ಆರ್‌ಟಿ ನಗರದ ವಶಿತ್‌ (10) ಬೇರೆಯವರು ಹಚ್ಚಿದ ಪಟಾಕಿ ಸಿಡಿದು ಮುಖ ಹಾಗೂ ಕಣ್ಣಿಗೆ ಸುಟ್ಟಗಾಯಗಳಾಗಿವೆ. ಜೆಜೆ ನಗರದ ಕಾರ್ತಿಕ್‌ (11) ಪಟಾಕಿ ಸಿಡಿಸುತ್ತಿದ್ದಾಗ ಎರಡೂ ಕಣ್ಣಿಗೆ ಗಾಯವಾಗಿದೆ. ಎನ್‌ಜಿಎಫ್‌ ಲೇಔಟ್‌ನ ಸುರಭಿ ಎಂಬ 4 ವರ್ಷದ ಮಗು ಹೂ ಕುಂಡದ ಸಿಡಿತದಿಂದ, ಅನ್ನಪೂರ್ಣೇಶ್ವರಿನಗರದ ಮಮತಾ (39), ಸರ್ಜಾಪುರ ರಸ್ತೆಯ ಸಂಗೀತ ವರ್ಮಾ (49) ಎಂಬುವರಿಗೆ ಪಟಾಕಿ ಸಿಡಿತದಿಂದ ಎರಡೂ ಕಣ್ಣುಗಳಿಗೆ ಗಂಭೀರ ಗಾಯವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪಟಾಕಿ ಅವಾಂತರ, ಬೆಂಗಳೂರಿನ ವಿವಿಧೆಡೆ 9 ಮಂದಿ ಆಸ್ಪತ್ರೆಗೆ ದಾಖಲು

ಚಿಕ್ಕ ಪ್ರಮಾಣದ ಹಾನಿಯಾಗಿದ್ದ 9 ಮಂದಿ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಹೆಚ್ಚಿನ ಹಾನಿಯಾಗಿದ್ದ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಐದು ಮಂದಿಗೆ ದೃಷ್ಟಿಹಾನಿಯಾಗಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತದೆ. ಒಬ್ಬರಿಗೆ ದೃಷ್ಟಿಮರಳುವ ಸಾಧ್ಯತೆ ಕಡಿಮೆ. ಭಾನುವಾರ ಮತ್ತು ಸೋಮವಾರ ಏಳು ಮಂದಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರದ ಅಂತ್ಯಕ್ಕೆ 17 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್‌ ತಿಳಿಸಿದ್ದಾರೆ.

ನಾರಾಯಣದಲ್ಲಿ 18 ಮಂದಿ ಚಿಕಿತ್ಸೆ: ನಾಲ್ವರ ಕಣ್ಣಿಗೆ ಹೆಚ್ಚಿನ ಹಾನಿ

ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ಒಂದೇ ದಿನ 18 ಮಂದಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಆರು ಮಂದಿ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದು, ದೃಷ್ಟಿಹಾನಿಯಾಗಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ. ಮೂವರ ಕಣ್ಣುಗಳ ಕಾರ್ನಿಯಾ ಭಾಗಕ್ಕೆ ಸಾಕಷ್ಟುಹಾನಿಯಾಗಿದ್ದು, ದೃಷ್ಟಿಮರಳುವ ಸಾಧ್ಯತೆ ಕಡಿಮೆ ಇದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥರಾದ ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ಈ ಬಾರಿ ದೀಪಾವಳಿಯಲ್ಲಿ ಅಂಕಿ- ಅಂಶ (ಅ.23-25)

ಮಿಂಟೋ ಕಣ್ಣಿನ ಆಸ್ಪತ್ರೆ - 17
ನಾರಾಯಣ ನೇತ್ರಾಲಯ - 23
ನೇತ್ರಧಾಮ - 20
ಶಂಕರ ಕಣ್ಣಿನ ಆಸ್ಪತ್ರೆ - 13
ಆಸ್ಟರ್‌ ಸಿಎಂಐ - 3
ಮೋದಿಕಣ್ಣಿನ ಆಸ್ಪತ್ರೆ - 1
ವಿಕ್ಟೋರಿಯಾ ಸುಟ್ಟಗಾಯ ಆಸ್ಪತ್ರೆ - 1
ಒಟ್ಟು - 78
 

PREV
Read more Articles on
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?