
ಬೆಂಗಳೂರು (ಆ.16): ತಮ್ಮ ಮನೆ ಮೇಲೆ ದುಷ್ಕರ್ಮಿಗಳು ನಡೆಸಿದ ಗಲಭೆಯಲ್ಲಿ ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಕಳೆದುಕೊಂಡಿದ್ದ 3 ಕೋಟಿ ರು.ಮೌಲ್ಯದ ಆಸ್ತಿ-ಪಾಸ್ತಿ ನಷ್ಟದ ವಿವರ ಬಹಿರಂಗವಾಗಿದೆ.
ಕಾವಲ್‌ಬೈರಸಂದ್ರದಲ್ಲಿರುವ ಶಾಸಕರ ಮನೆ ಮತ್ತು ಕಚೇರಿ ಹಾಗೂ ಸೋದರರ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಈ ವೇಳೆ ಚಿನ್ನಾಭರಣ, ವಾಹನಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ .3 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ.
ಡಿಜೆ ಹಳ್ಳಿ ಗಲಭೆ: ಪ್ರಮುಖ ಆರೋಪಿ, ಎಸ್‌ಡಿಪಿಐ ಮುಖಂಡ ಅರೆಸ್ಟ್.
ಚಿನ್ನಾಭರಣ, ಹಣ ಮತ್ತು ವಾಹನಗಳು ಸೇರಿ ಶಾಸಕರ 70 ಲಕ್ಷ ರು. ಬೆಲೆಬಾಳುವ ವಸ್ತುಗಳು ನಾಶವಾಗಿದ್ದರೆ, ಇಬ್ಬರು ಸೋದರರ ಪೈಕಿ ಮಹೇಶ್ ಅವರ 18 ಲಕ್ಷ ರು. ಹಾಗೂ ಚಂದ್ರಶೇಖರ್ ಅವರಿಗೆ ಸೇರಿದ 23 ಲಕ್ಷ ವಸ್ತುಗಳು ಕಳವಾಗಿವೆ. ಇನ್ನುಳಿದ 1.8 ಕೋಟಿ ರು. ಮೌಲ್ಯದ ಮನೆಗಳು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಲಾಗಿದೆ. ಅದರ ವಿವರ ಹೀಗಿದೆ.
ಅಖಂಡ ಶ್ರೀನಿವಾಸ್ ಮನೆ, ಕಚೇರಿ:
20 ಲಕ್ಷ ರು. ಮೌಲ್ಯದ 500 ಗ್ರಾಂ ಚಿನ್ನಾಭರಣ, ಶ್ಯಾಂಪುರ ಮುಖ್ಯರಸ್ತೆಯಲ್ಲಿರುವ ವಾಸದ ಮನೆಗಳು ಮತ್ತು ವಾಣಿಜ್ಯ ಕಟ್ಟಡದ ಮೂಲಪತ್ರಗಳು, ಸಾದಹಳ್ಳಿ ಜಮೀನು ಮೂಲ ಪತ್ರಗಳು, ವಾಹನಗಳಿಗೆ ಸಂಬಂಧಪಟ್ಟದಾಖಲೆಗಳು, ಕಚೇರಿಯಲ್ಲಿ ಆರು ಬೀರುಗಳು, 2 ಕಂಪ್ಯೂಟರ್, 2 ಲ್ಯಾಪ್‌ಟಾಪ್, 2 ಟಿವಿ, ಟೆಲಿಫೋನ್ ಸೇರಿ ಒಟ್ಟು 50 ಲಕ್ಷ ರು. ಮೌಲ್ಯದ ವಸ್ತುಗಳು ಹಾನಿಯಾಗಿವೆ. ಮೂರು ಬೈಕ್‌ಗಳು ಹಾಗೂ 1 ಕಾರು ಸೇರಿ 20 ಲಕ್ಷ ಮೌಲ್ಯದ ವಾಹನಗಳು ಬೆಂಕಿ ಬೆಂದು ಹೋಗಿವೆ.
ಗಲಭೆಯಲ್ಲಿ ಮನೆ ಕಳೆದುಕೊಂಡ ಶಾಸಕ ಅಖಂಡ ಹೋಟೆಲ್‌ನಲ್ಲಿ!...
ಶಾಸಕರ ಸೋದರರು:
ಮಹೇಶ್ ಕುಮಾರ್ ಸೇರಿದ 10 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ, ಬೀರುವಿನಲ್ಲಿಟ್ಟಿದ್ದ 8 ರಿಂದ 8.5 ಲಕ್ಷ ನಗದು, ಕಾರಿನ ನೊಂದಣಿ ಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಭೂ ದಾಖಲೆಗಳು ನಾಶವಾಗಿವೆ. ಮತ್ತೊಬ್ಬ ಸೋದರ ಚಂದ್ರಶೇಖರ್ ಸೇರಿದ 20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ, 3 ಲಕ್ಷ ನಗದು ಹಾಗೂ ಭೂ ದಾಖಲೆಗಳು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳು ನಾಶವಾಗಿವೆ.