ಡಿಕೆಶಿ ಹೇಳುವುದೆಲ್ಲಾ ವೇದವಾಕ್ಯವೇ?| ಕಾಂಗ್ರೆಸ್ ಶಾಸಕನ ರಕ್ಷಣೆಗೂ ಯಾಕೆ ಬರುತ್ತಿಲ್ಲ ಕಾಂಗ್ರೆಸ್?| ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಓಲೈಕೆ| ಶ್ರೀರಾಮಮಂದಿರಕ್ಕೆ ಅಡಿಗಲ್ಲು ಹಾಕಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಇಂಥ ಗಲಾಟೆ ಮಾಡುತ್ತಾರೆ: ಬಿ.ಸಿ.ಪಾಟೀಲ್|
ಕೊಪ್ಪಳ(ಆ.16): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಅವರಿಗೆ ಗೃಹ ಸಚಿವರು, ಮುಖ್ಯಮಂತ್ರಿಗಳು ಯಾರು ಎನ್ನುವುದು ಗೊತ್ತಿಲ್ಲವೆ? ಅವರು ಹೇಳಿದ್ದೆಲ್ಲ ವೇದವಾಕ್ಯವೇ? ಇದು ಡಿ.ಕೆ. ಶಿವಕುಮಾರ್ ಅವರು ಬಸವರಾಜ ಬೊಮ್ಮಾಯಿ ಯಾರು ಎಂದು ಪ್ರಶ್ನೆ ಮಾಡಿರುವುದಕ್ಕೆ ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಮಾಡಿದ ತೀಕ್ಷ್ಣ ಪ್ರಶ್ನೆ.
undefined
ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಹೇಳಿದ್ದೆಲ್ಲ ವೇದವಾಕ್ಯವೇ ಎಂದು ಪ್ರಶ್ನಿಸಿದ್ದಲ್ಲದೇ ಏಕ ವಚನದಲ್ಲಿ ಮಾತನಾಡಿದ್ದರೆ ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸರ್ಕಾರಕ್ಕೆ ಯಾರೂ ಧಮ್ಕಿ ಹಾಕಲು ಆಗುವುದಿಲ್ಲ. ಗೃಹ ಸಚಿವರನ್ನೇ ಯಾರು ಎಂದು ಪ್ರಶ್ನೆ ಮಾಡುವ, ಏಕವಚನದಲ್ಲಿ ಮಾತನಾಡುವುದೆಂದರೆ ಏನರ್ಥ. ಅವರಿಗೆ ಅಷ್ಟು ಜ್ಞಾನ ಇಲ್ಲವಾ? ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಬಿಜೆಪಿಯ ಒಳತಂತ್ರವೇ ಕಾರಣ ಎಂದು ಡಿಕೆಶಿ ಶಿವಕುಮಾರ ಅವರು ಆರೋಪಿಸಿದ್ದನ್ನು ತಳ್ಳಿ ಹಾಕಿದರು.
ಸಿದ್ದರಾಮಯ್ಯ ಭಯೋತ್ಪಾದಕರನ್ನು ಬೆಂಬಲಿಸುತ್ತಾರಾ?: ಕಟೀಲ್
ಹಿಂದೆ ಗೃಹ ಮಂತ್ರಿಯಾಗಿದ್ದವರು (ಕೆ.ಜೆ. ಜಾರ್ಜ್) ಗಲಾಟೆ ಮಾಡಿದವರ ಮನೆಗೆ ಸಾಂತ್ವನ ಹೇಳಲು ಹೋಗಿದ್ದನ್ನು ನೋಡಿದರೆ ಗೊತ್ತಾಗುತ್ತದೆ ಗಲಾಟೆ ಬಿಜೆಪಿಯವರದ್ದೋ? ಕಾಂಗ್ರೆಸ್‌ನವರದ್ದೋ ಎಂದು. ತಮ್ಮದೇ ಪಕ್ಷದ ಶಾಸಕರ ರಕ್ಷಣೆಗೆ ಬರುತ್ತಿಲ್ಲ ಕಾಂಗ್ರೆಸ್ ನಾಯಕರು, ಅದು ಬಿಟ್ಟು ಇಲ್ಲಿಯೂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಪಕ್ಷದ ಶಾಸಕರೊಬ್ಬರ ಮನೆಯ ಮೇಲೆ ದಾಳಿಯಾಗಿದೆ, ಬೆಂಕಿ ಹಚ್ಚಿದ್ದಾರೆ. ಇಷ್ಟಾದರೂ ಶಾಸಕರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಅದು ಬಿಟ್ಟು, ಇದರಲ್ಲಿಯೂ ಏನೇನೋ ಹೇಳುತ್ತಿದ್ದಾರೆ. ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅಖಂಡ ಶ್ರೀನಿವಾಸ ಅವರು ಬೇರೆ ಪಕ್ಷದವರಾಗಿದ್ದರೆ ಇಷ್ಟೊತ್ತಿಗೆ ರಾಜ್ಯವೇ ಹೊತ್ತಿ ಉರಿಯುತ್ತಿತ್ತು. ತಮ್ಮ ಪಕ್ಷದ ಶಾಸಕನಿಗೆ ಅನ್ಯಾಯವಾಗಿದ್ದರೂ ಧ್ವನಿ ಎತ್ತುತ್ತಲೇ ಇಲ್ಲ.
ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಗಟ್ಟಿನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದಾರೆ. ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ. ದೇಶದಲ್ಲಿ ಶಾಂತಿ ಕದಡುವ ಹಾಗೂ ಮುಖ್ಯಮಂತ್ರಿಗಳಿಗೆ ಕೆಟ್ಟಹೆಸರು ತರುವುದಕ್ಕಾಗಿಯೇ ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆಸಲಾಗಿದೆ. ಶ್ರೀರಾಮಮಂದಿರಕ್ಕೆ ಅಡಿಗಲ್ಲು ಹಾಕಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಇಂಥ ಗಲಾಟೆ ಮಾಡುತ್ತಾರೆ.