ರೈತರಿದ್ದಲ್ಲಿಗೇ ಬರುತ್ತೆ ಕೃಷಿ ಆರೋಗ್ಯ ವಾಹನ: ದೇಶದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಜಾರಿ

By Kannadaprabha News  |  First Published Aug 16, 2020, 10:46 AM IST

ಕೃಷಿ ಸಚಿವರ ಅನುದಾನದಲ್ಲಿ ಅನುಷ್ಠಾನ| ಹೊಲಗಳಿಗೂ ಸುತ್ತಾಡಲಿದೆ ವಾಹನ| ಕೃಷಿ ಆರೋಗ್ಯ ವಾಹನ ದೇಶದಲ್ಲಿಯೇ ಮೊದಲಾಗಿದ್ದು, ರಾಜ್ಯದಲ್ಲಿಯೂ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಜಾರಿ ಮಾಡಲಾಗಿದೆ, ರೈತರಿದ್ದಲ್ಲಿಗೆ ಮಾಹಿತಿ ನೀಡಲಿದೆ ಎಂದ ಕೃಷಿ ಸಚಿವ ಬಿ.ಸಿ. ಪಾಟೀಲ|


ಕೊಪ್ಪಳ(ಆ.16): ರೈತರು ಹೊಲದಲ್ಲಿರಲಿ, ಮನೆಯಲ್ಲಿರಲಿ, ಅವರು ಇದ್ದಲ್ಲಿಗೆ ಸರ್ಕಾರ ಕೃಷಿ ಯೋಜನೆ ಸೇರಿದಂತೆ ರೈತರಿಗೆ ತಲಪುಬೇಕಾದ ಮಾಹಿತಿಯನ್ನು ಕೃಷಿ ಆರೋಗ್ಯ ವಾಹನ ಹೊತ್ತು ತರಲಿದೆ. ಇಂಥದ್ದೊಂದು ಪ್ರಯತ್ನವನ್ನು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಜಾರಿ ಮಾಡಿದ್ದಾರೆ. ಸ್ವಯಂ ಆಸಕ್ತಿಯಿಂದ ಮತ್ತು ತಮ್ಮ ಅನುದಾನದಲ್ಲಿ ಈ ಪ್ರಯೋಗಾತ್ಮಕ ಯೋಜನೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಜಾರಿ ಮಾಡಿದ್ದಾರೆ. ಇದು ದೇಶದಲ್ಲಿಯೇ ಮೊದಲು ಎಂದು ಅವರು ಹೇಳಿಕೊಂಡರು.

ಏನಿದು ಕೃಷಿ ಆರೋಗ್ಯ ವಾಹನ?

Tap to resize

Latest Videos

ಕೃಷಿ ಆರೋಗ್ಯ ವಾಹನ ಬೆಳೆ ಆರೋಗ್ಯ ಕಾಪಾಡಲು ರೈತರಿದ್ದಲ್ಲಿಗೆ ಮಾಹಿತಿಯನ್ನು ರವಾನೆ ಮಾಡುವುದು. ಸರ್ಕಾರದಿಂದ ಘೋಷಣೆಯಾಗುವ ಯೋಜನೆಗಳು, ಸಹಾಯಧನ ಸೇರಿದಂತೆ ಬೆಳೆಗಳ ಮಾಹಿತಿ, ಬೀಜಗಳ ಮಾಹಿತಿ, ಅಷ್ಟೇ ಯಾಕೆ ರೋಗಗಳ ಮಾಹಿತಿ ಹಾಗೂ ಅದಕ್ಕೆ ಪರಿಹಾರಗಳನ್ನು ಸೂಚಿಸಲಾಗುತ್ತದೆ. ತನ್ನೆಲ್ಲ ಮಾಹಿತಿಯನ್ನು ಹೊತ್ತ ಕೃಷಿ ಆರೋಗ್ಯ ವಾಹನ ರೈತರು ಊರಿನಲ್ಲಿದ್ದಾಗ ಅಲ್ಲಿಯೇ ಮೈಕ್‌ ಮೂಲಕ ವಿವರಣೆ ನೀಡಲಾಗುತ್ತದೆ. ಅಲ್ಲದೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಅವರು ಇರುವಲ್ಲಿಗೆ ಹೋಗಿ ಮಾಹಿತಿ ನೀಡಲಾಗುತ್ತದೆ. ಹೊಲಗಳ ರಸ್ತೆಗಳಲ್ಲಿಯೂ ಈ ವಾಹನಗಳು ಸಂಚಾರ ಮಾಡಿ, ಸುತ್ತಮುತ್ತಲ ಹೊಲದ ರೈತರನ್ನು ಒಂದೆಡೆ ಸೇರಿಸಿ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ.

ಗೃಹ ಸಚಿವ, ಸಿಎಂ ಯಾರೆಂದು ಗೊತ್ತಿಲ್ಲದೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೇ?

ಉದಾಹರಣೆ ಈಗ ಬೆಳೆ ಸಮಿಕ್ಷೆ ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ರೈತರೇ ತಾವು ಬೆಳೆದ ಬೆಳೆಯ ಮಾಹಿತಿಯನ್ನು ತಾವೇ ಅಪ್‌ಲೋಡ್‌ ಮಾಡಬಹುದು. ಇದರಿಂದ ಬೆಳೆ ಸ​ಮೀಕ್ಷೆಗೂ ಅನುಕೂಲ ಮತ್ತು ಬೆಳೆ ಹೊಂದಾಣಿಕೆ ಸಮಸ್ಯೆಯಾಗುವುದಿಲ್ಲ. ತಾವು ಬೆಳೆದ ಬೆಳೆಯನ್ನು ತಾವೇ ಭರ್ತಿ ಮಾಡುವುದರಿಂದ ನಿಖರ ಮಾಹಿತಿ ದೊರೆಯುತ್ತದೆ. ಇಲ್ಲದಿದ್ದರೆ ರೈತ ಅನುವುಗಾರರು ಅದನ್ನು ಅಪ್‌ಲೋಡ್‌ ಮಾಡಬೇಕಾಗುತ್ತಿತ್ತು. ಆಗ ಆಗುವ ಸಮಸ್ಯೆಯನ್ನು ತಪ್ಪಿಸಲು ರೈತರಿಗೆ ಈ ಅವಕಾಶ ನೀಡಲಾಗಿದೆ. ಇದರ ಕುರಿತು ಎಷ್ಟೇ ಪ್ರಚಾರ ಮಾಡಿದರೂ ಕಟ್ಟಕಡೆಯ ಭಾಗದಲ್ಲಿರುವ ರೈತರಿಗೆ ತಲುಪುವುದೇ ಇಲ್ಲ. ಹೀಗಾಗಿ, ಕೃಷಿ ಆರೋಗ್ಯ ವಾಹನ ಇಂಥ ಮಾಹಿತಿಯನ್ನು ರೈತರು ಇದ್ದಲ್ಲಿಯೇ ನೀಡುತ್ತದೆ.

20 ವಾಹನಗಳು:

ಪ್ರಾಯೋಗಿಕವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಾರಿ ಮಾಡಿರುವ ಕೃಷಿ ಆರೋಗ್ಯ ವಾಹನ ಯೋಜನೆಗಾಗಿ ಜಿಲ್ಲೆಯಲ್ಲಿ 20 ವಾಹನಗಳನ್ನು ಬಿಡಲಾಗಿದೆ. ಸ್ವಾತಂತ್ರ್ಯ ದಿನಚಾರಣೆಯಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಚಾಲನೆ ನೀಡಿದರು.

ಪ್ರತಿ ತಾಲೂಕಿಗೆ ಮೂರರಂತೆ ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಾರಂಭಿಕವಾಗಿ ಹೀಗೆ ಹಂಚಿಕೆ ಮಾಡಲಾಗಿದ್ದು, ಹಂತ ಹಂತವಾಗಿ ಇದನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಕೃಷಿ ಚಟುವಟಿಕೆಯನ್ನಾಧರಿಸಿ ಆ ಭಾಗಕ್ಕೆ ಮಾಹಿತಿಯನ್ನು ಕೃಷಿ ಆರೋಗ್ಯ ವಾಹನ ಹೊತ್ತು ತರಲಿದೆ.

ರೈತರಿಗೆ ಇದರ ಮೂಲಕ ಸರ್ಕಾರಿ ಯೋಜನೆಗಳ ಮಾಹಿತಿಯ ಜೊತೆಗೆ ಅವರ ಸಮಸ್ಯೆಗಳಿಗೂ ಪರಿಹಾರ ನೀಡಲಾಗುತ್ತದೆ. ರೈತರು ಸಮಸ್ಯೆಗಳನ್ನು ನಿವೇದಿಸಿಕೊಂಡಲ್ಲಿ ಇಲಾಖೆಯ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡುವ ಉದ್ದೇಶವನ್ನು ಮುಂದಿನ ದಿನಗಳಲ್ಲಿ ಹೊಂದಲಾಗಿದೆ.

ಕೃಷಿ ಆರೋಗ್ಯ ವಾಹನ ದೇಶದಲ್ಲಿಯೇ ಮೊದಲಾಗಿದ್ದು, ರಾಜ್ಯದಲ್ಲಿಯೂ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಜಾರಿ ಮಾಡಲಾಗಿದೆ. ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದ್ದು, ರೈತರಿದ್ದಲ್ಲಿಗೆ ಮಾಹಿತಿ ನೀಡಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ತಿಳಿಸಿದ್ದಾರೆ. 
 

click me!