ಬಳ್ಳಾರಿ ನಗರದ ಅಭಿವೃದ್ಧಿಗಾಗಿ 50 ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿದೆ: ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು
ಬಳ್ಳಾರಿ(ಆ.16): ಬಜೆಟ್‌ನಲ್ಲಿ ಘೋಷಣೆಯಂತೆ ನಗರದಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ಆರಂಭಿಸಲು 50 ಎಕರೆ ಭೂಮಿಯನ್ನು ಮಂಜೂರು ಮಾಡಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳ ಜಾರಿಗೆ ಮುಂದಾಗಿದ್ದೇವೆ. ಕೃಷಿ ಕಾಲೇಜು ಸ್ಥಾಪನೆಗೆ .25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ .40 ಕೋಟಿ ಮಂಜೂರು ಮಾಡಿಸಲಾಗಿದೆ. .100 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಆಲದಹಳ್ಳಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಕಂಪ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು .79.93 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬಳ್ಳಾರಿ ಗಡಗಿ ಚೆನ್ನಪ್ಪ ವೃತ್ತದಲ್ಲಿ .7 ಕೋಟಿ ವೆಚ್ಚದಲ್ಲಿ 140 ಅಡಿಯ ಟವರ್‌ಕ್ಲಾಕ್ ನಿರ್ಮಿಸಲಾಗುತ್ತಿದೆ. .4 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣವನ್ನು .6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ನಗರದ ಅಭಿವೃದ್ಧಿಗಾಗಿ .50 ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
undefined
ಶ್ರೀರಾಮುಲು ಹಂಗಿನಲ್ಲಿ ನಾನಿಲ್ಲ, ಅವರಿಗೆ ಸಂಸ್ಕಾರ ಇಲ್ಲ: ನಾಗೇಂದ್ರ
ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಡಿಸಿ ಪಿ.ಎಸ್. ಮಂಜುನಾಥ್, ಎಸ್ಪಿ ಸೈದಲು ಅಡಾವತ್, ಬುಡಾ ಅಧ್ಯಕ್ಷ ಪಾಲಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರೆಸ್‌ನೋಟ್ ಓದಿದ ಶ್ರೀರಾಮುಲು
ಧ್ವಜಾರೋಹಣ ಬಳಿಕ ಜರುಗಿದ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಿದ್ಧಪಡಿಸಿಕೊಟ್ಟಿದ್ದ ಪ್ರೆಸ್‌ನೋಟ್‌ನ್ನು ಜಿಲ್ಲಾ ಸಚಿವರು ಸುದೀರ್ಘವಾಗಿ ಓದಿದರು. ಪ್ರೆಸ್‌ನೋಟ್‌ನಲ್ಲಿ ಈಗಾಗಲೇ ಅನೇಕ ಬಾರಿ ಪ್ರಸ್ತಾಪವಾಗಿದ್ದ ಅಂಶಗಳು ಕೂಡಿದ್ದವು. ಗಮನಾರ್ಹ ಸಂಗತಿ ಎಂದರೆ ಇದು ಧ್ವಜಾರೋಹಣ ಆನಂತರ ಭಾಷಣಕ್ಕೆ ನೀಡಲಾಗಿದ್ದ ಪ್ರೆಸ್‌ನೋಟ್ ಆಗಿತ್ತು. ‘ಪ್ರೆಸ್‌ನೋಟ್‌ನಲ್ಲಿ 25ಕ್ಕೂ ಹೆಚ್ಚು ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ್ದೀರಿ. ನಿಮ್ಮ ಅವಧಿಯಲ್ಲಿ ಈ ಕೆಲಸಗಳು ಆಗುತ್ತವೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ‘ನನಗಿರುವ ಕಡಿಮೆ ಅವಧಿಯಲ್ಲಿ ಸಾಧ್ಯವಾದಷ್ಟು ಎಲ್ಲ ಯೋಜನೆಗಳ ಜಾರಿಗೆ ಶ್ರಮಿಸುವೆ. ಕೆಲವೊಂದು ಉಳಿದುಕೊಂಡರೆ ಮುಂದೆ ಬರುವವರು ಅದನ್ನು ಪೂರ್ಣಗೊಳಿಸುತ್ತಾರೆ’ ಎಂದರು. ಹಾಗಾದರೆ ನಿಮಗೆ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಾನು ಪ್ರಾಕ್ಟಿಕಲ್ ಮಾತನಾಡುತ್ತೇನೆ. ಸುಮ್ಮನೆ ಏನೋ ಮಾತನಾಡೋಲ್ಲ. ಮುಂದಿನದು ಯಾರು ನೋಡಿದ್ದಾರಾ? ಎಂದು ಕೇಳಿದರು.