ಆ. 14ರ ಮಧ್ಯ ರಾತ್ರಿ ನೆಟ್ಟ ಅಶ್ವಥ ಗಿಡ ಇದೀಗ ಬೃಹದಾಕಾರವಾಗಿ ಬೆಳೆದು ಸುತ್ತಮುತ್ತಲಿನ ಜನರಿಗೆ ವಿಶ್ರಾಂತಿ ತಾಣವಾಗಿದೆ.
ಕಾರವಾರ(ಆ.16): 75ನೇ ಸ್ವಾತಂತ್ರ್ಯೋತ್ಸವದ ಈ ಸವಿ ನೆನಪಿನ ಸಂಭ್ರಮದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಅನೇಕ ರಾಷ್ಟ್ರಭಕ್ತರನ್ನು ಸ್ಮರಿಸಲಾಗುತ್ತಿದೆ. ಅಲ್ಲದೇ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ. ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಪಡೆದ ಸ್ವಾತಂತ್ರ್ಯದ ಗಾಥೆಗಳನ್ನು ನಾವು ಹಲವರಿಂದ ಕೇಳಿದ್ದರೆ, ಸಾಕಷ್ಟು ಜನರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಮನುಷ್ಯರ ನಡುವೆ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸುಂಕೇರಿಯಲ್ಲಿರುವ ಈ ಹೆಮ್ಮರ.
ಸುಂಕೇರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಹನುಮಂತರಾವ್ ಮಾಂಜ್ರೇಕರ್ ಸೇರಿದಂತೆ ಹಲವರು ಸೇರಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ಆಗಸ್ಟ್ 14ರ ಮಧ್ಯ ರಾತ್ರಿ ನೆಟ್ಟ ಅಶ್ವಥ ಗಿಡ ಇದೀಗ ಬೃಹದಾಕಾರವಾಗಿ ಬೆಳೆದು ಸುತ್ತಮುತ್ತಲಿನ ಜನರಿಗೆ ವಿಶ್ರಾಂತಿ ತಾಣವಾಗಿದೆ.
undefined
24 ಲಕ್ಷ ಎಸ್ಸಿ-ಎಸ್ಟಿಗೆ 75 ಯುನಿಟ್ ಉಚಿತ ವಿದ್ಯುತ್: ಸಚಿವ ಕೋಟ
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರಕನ್ನಡ ಜಿಲ್ಲೆಯ ಅತ್ಯದ್ಭುತ ಕೊಡುಗೆ ನೀಡಿದ್ದು, ಈ ಜಿಲ್ಲೆಯ ಜನರು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕರಬಂಧಿ ಚಳುವಳಿ ಮುಂತಾದ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು. ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದವರ ಪೈಕಿ ಕಾರವಾರ ಸುಂಕೇರಿಯ ದಿ. ಹನುಮಂತರಾವ್ ಮಾಂಜ್ರೇಕರ್ ಕೂಡಾ ಒಬ್ಬರಾಗಿದ್ದು, ಅಂದು ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನು ಕೂಡಾ ಅನುಭವಿಸಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ದಿ. ಹನುಮಂತರಾವ್ ಮಾಂಜ್ರೇಕರ್ ಅವರು ಗಾಂಧೀಜಿಯವರ ಅನುಯಾಯಿಯಾಗಿದ್ದರು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಖಾದಿ ಪ್ರಸಾರದಲ್ಲಿ ಪಾಲ್ಗೊಂಡಿದ್ದ ಅವರು, 1930ರ ವೇಳೆ 15 ತಿಂಗಳ ಜೈಲು ಶಿಕ್ಷೆಗೂ ಗುರಿಯಾದರೂ ಅಪ್ರತಿಮ ದೇಶಭಕ್ತಿ ಮೈಗೂಡಿಸಿಕೊಂಡಿದ್ದರು.
Uttara Kannada: ವೃಕ್ಷಮಾತೆಗೆ ಕೊಟ್ಟ ಮಾತು ಉಳಿಸಿದ ಶಾಸಕಿ ರೂಪಾಲಿ ನಾಯ್ಕ್
ಸ್ವಾತಂತ್ರ್ಯಾ ನಂತರ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಅವರು, 1925ರಲ್ಲಿ ರಹೀಂ ಖಾನ್ ಯುನಿಟಿ ಹೈಸ್ಕೂಲ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸ್ವಾತಂತ್ರ್ಯ ದೊರಕಿದ ಆಗಸ್ಟ್ 14ರ ರಾತ್ರಿಯೇ ಕಾರವಾರದಲ್ಲಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು. ಈ ಮೂಲಕ ಸ್ವಾತಂತ್ರ್ಯದ ಮಾಹಿತಿ ಪಡೆದ ದಿ.ಹನುಮಂತರಾವ್ ಮಾಂಜ್ರೇಕರ್, ಗೋವಿಂದರಾವ್ ಮಾಂಜ್ರೇಕರ್ ಸೇರಿದಂತೆ ಹಲವರು ಸ್ವಾತಂತ್ರ್ಯೊತ್ಸವದ ಸವಿ ನೆನಪಿಗಾಗಿ ಕಾರವಾರದ ಸುಂಕೇರಿಯಲ್ಲಿ ಅಶ್ವಥ ಗಿಡ ನೆಟ್ಟಿದ್ದರು.
ಈ ಗಿಡವೀಗ ಬೆಳೆದು ಹೆಮ್ಮರವಾಗಿದೆ ಅಂತಾರೆ ದಿ. ಹನುಮಂತರಾಯ್ ಅವರ ಹಿರಿಯ ಪುತ್ರ ನಿವೃತ್ತ ಶಿಕ್ಷಕ ಕಮಲಾಕ್ಷ ಮಾಂಜ್ರೇಕರ್. ದಷ್ಟಪುಷ್ಟವಾಗಿ ಬೆಳೆದಿರುವ ಈ ಮರದಿಂದ ಸುತ್ತಮುತ್ತಲಿನ ಜನರಿಗೆ ನೆರಳು ದೊರಕುತ್ತಿದ್ದು, ಜನರು ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಿದ್ದ ಕಾರಣ ಕಳೆದ ಕೆಲವು ವರ್ಷದ ಹಿಂದೆ ಇಲ್ಲಿ ವಿಶ್ರಾಂತಿಗಾಗಿ ಕಟ್ಟಡ ಕೂಡ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ಅಂದು ನೆಟ್ಟಿದ್ದ ಗಿಡ ಇದೀಗ ದೊಡ್ಡ ಮರವಾಗಿ ಬೆಳೆದಿರುವುದನ್ನು ಕಂಡರೆ ಖುಷಿಯಾಗುತ್ತದೆ ಅಂತಾರೆ ದಿ. ಹನುಮಂತರಾವ್ ಅವರ ಇನ್ನೋರ್ವ ಮಗ ಶ್ರೀರಂಗ ಮಾಂಜ್ರೇಕರ್.