5 ಕೊರೋನಾ ಸೋಂಕಿತ ವಿದ್ಯಾರ್ಥಿಗಳು ಸಿಇಟಿಗೆ ಹಾಜರು

By Kannadaprabha NewsFirst Published Jul 31, 2020, 10:51 AM IST
Highlights

ಕೋವಿಡ್‌-19 ಸೋಂಕಿತ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಈ ಮೊದಲೇ ಸೂಚಿಸಿದಂತೆ ಪ್ರತ್ಯೇಕ ಹಾಗೂ ಸುರಕ್ಷಿತ ಕೊಠಡಿಗಳ ವ್ಯವಸ್ಥೆ ಮಾಡಿತ್ತು. ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ತೆರೆದ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ.

ಉಡುಪಿ(ಜು.31): ಕೋವಿಡ್‌-19 ಸೋಂಕಿತ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಈ ಮೊದಲೇ ಸೂಚಿಸಿದಂತೆ ಪ್ರತ್ಯೇಕ ಹಾಗೂ ಸುರಕ್ಷಿತ ಕೊಠಡಿಗಳ ವ್ಯವಸ್ಥೆ ಮಾಡಿತ್ತು. ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ತೆರೆದ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ.

ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತರಲಾಯಿತು. ಸ್ವತಃ ತಜ್ಞ ವೈದ್ಯರೇ ಈ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದರು. ಬೆಳಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ ನಾಲ್ವರು ಸೋಂಕಿತ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದರೂ ಪರೀಕ್ಷೆ ಬರೆದಿಲ್ಲ ಎಂದು ಡಿಡಿಪಿಯು ತಿಳಿಸಿದ್ದಾರೆ.

ಇನ್ನು ಸರ್ಕಾರಿ ಶಾಲೆ ಮಕ್ಕಳ ಸಮವಸ್ತ್ರ ಒಂದೇ ರೀತಿ ಇರಲ್ಲ!

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ದ.ಕ. ಜಿಲ್ಲೆಯ 17 ಕೇಂದ್ರಗಳಲ್ಲಿ ಸೂಸೂತ್ರವಾಗಿ ನೆರವೇರಿದ್ದು, ಗುರುವಾರ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆದಿದೆ. ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು 2,988 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಜೀವಶಾಸ್ತ್ರ ಪರೀಕ್ಷೆಗೆ 7,634 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 2988 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು. 6,482 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರೆ, 1,152 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಂಚಾಯತ್ ಚುನಾವಣೆ: ಬಹುಮತ ಕಾಂಗ್ರೆಸಿಗೆ, ಅಧ್ಯಕ್ಷತೆ ಬಿಜೆಪಿಗೆ !

ಪರೀಕ್ಷೆ ಬರೆಯಲು 456 ಮಂದಿ ಕಾಸರಗೋಡಿನ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅವರಲ್ಲಿ ಅನೇಕರು ಗೈರು ಹಾಜರಾಗಿದ್ದಾರೆ. ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಗೆ ಯಾರು ಹಾಜರಾಗುತ್ತಾರೋ ಅವರು ವಾರದ ಮನೆ ಕ್ಯಾರೆಂಟೈನ್‌ ಮಾಡಿ ತ್ವರಿತ ಆಂಟಿಜೆನ್‌ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಕಾಸರಗೋಡು ಜಿಲ್ಲಾಡಳಿತ ನಿಯಮ ರೂಪಿಸಿದ್ದು, ಇದಕ್ಕೆ ಹೆದರಿ, ಅನೇಕರು ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ತಲಪಾಡಿ ಗಡಿಯಿಂದ ಒಟ್ಟು 425 ಅಭ್ಯರ್ಥಿಗಳಿಗೆ 17 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೇವಲ 270 ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದು, ಅವರನ್ನು 10 ಬಸ್ಸುಗಳಲ್ಲಿ ಕರೆತರಲಾಗಿದೆ. ಕೆಲವು ಅಭ್ಯರ್ಥಿಗಳು ಇ-ಪಾಸ್‌ಗೆ ಅರ್ಜಿ ಸಲ್ಲಿಸಿದ್ದರಿಂದ ನೇರವಾಗಿ ಖಾಸಗಿ ವಾಹನಗಳಲ್ಲಿ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡಿನ ವಿದ್ಯಾರ್ಥಿಗಳನ್ನು ಕೇರಳ ಗಡಿಯಿಂದ ಪರೀಕ್ಷಾ ಕೇಂದ್ರಗಳಿಗೆ ಕರೆತರಲು ದ.ಕ. ಜಿಲ್ಲಾಡಳಿತವು ವಿಶೇಷ ಬಸ್ಸುಗಳನ್ನು ಏರ್ಪಾಡು ಮಾಡಿದ್ದರೆ, ಕಾಸರಗೋಡಿನಿಂದ ಗಡಿ ಭಾಗದವರೆಗೆ ಅಲ್ಲಿನ ಜಿಲ್ಲಾಡಳಿತ ಕರೆತಂದು ಬಿಟ್ಟಿತ್ತು. ಒಟ್ಟು ಮೂರು ಗಡಿ ಕೇಂದ್ರಗಳಿಂದ (ತಲಪಾಡಿ, ಸಾರಡ್ಕ, ಪಂಜಿಕಲ್ಲು) ವಿದ್ಯಾರ್ಥಿಗಳನ್ನು ಕರೆತರಲಾಯಿತು.

ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳಿಲ್ಲದೆ ಖಾಲಿ ಬೆಡ್‌ ನೀಡಿದರೇನು ಪ್ರಯೋಜನ..? ಖಾದರ್ ಕಿಡಿ

ಪಿಯುಸಿ ಪರೀಕ್ಷೆಗೆ ಹೋಲಿಸಿದರೆ ಸಿಇಟಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಕೊರೋನಾ ನಿಯಂತ್ರಣದ ಸರ್ವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್ಸುಗಳಲ್ಲಿ ಕೂಡ ಸಾಮಾಜಿಕ ಅಂತರ ಪಾಲನೆಯೊಂದಿಗೆ ಕರೆತರಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಾಗ ದೇಹದ ಉಷ್ಣತೆಯ ತಪಾಸಣೆ ಮಾಡಲಾಗಿದೆ. ಪರೀಕ್ಷಾ ಕೊಠಡಿಯೊಳಗೂ ಸಾಮಾಜಿಕ ಅಂತರ ಪಾಲನೆಯಿತ್ತು. ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೋಂಕು ನಿವಾರಕ ವ್ಯವಸ್ಥೆಯ ಮೂಲಕ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಿದರು.

ಪರೀಕ್ಷೆ ಬರೆದ ‘ಪಾಸಿಟಿವ್‌’ ವಿದ್ಯಾರ್ಥಿ

ಕೋವಿಡ್‌ -19 ಪಾಸಿಟಿವ್‌ ವಿದ್ಯಾರ್ಥಿಯು ಗುರುವಾರ ಸುರತ್ಕಲ್‌ ಎನ್‌ಐಟಿಕೆ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಸಿಇಟಿಗೆ ನೋಂದಾಯಿತ ವಿದ್ಯಾರ್ಥಿಗಳಲ್ಲಿ ನಾಲ್ವರಿಗೆ ಈ ಹಿಂದೆ ಪಾಸಿಟಿವ್‌ ಬಂದಿತ್ತು. ನಂತರ ಅವರಲ್ಲಿ ಮೂವರಿಗೆ ನೆಗೆಟಿವ್‌ ರಿಪೋರ್ಟ್‌ ಬಂದಿತ್ತು. ಒಬ್ಬ ವಿದ್ಯಾರ್ಥಿಗೆ ಮಾತ್ರ ಪಾಸಿಟಿವ್‌ ಇದ್ದು, ಪರೀಕ್ಷೆ ಬರೆಯಲು ಸರ್ವ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥೆ ಮಾಡಲಾಗಿತ್ತು.

ವಿದ್ಯಾರ್ಥಿಯನ್ನು ಆಂಬ್ಯುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಪಿಪಿಇ ಕಿಟ್‌ ಧರಿಸಿದ ಸಿಬ್ಬಂದಿ ಪ್ರಶ್ನೆ ಪತ್ರಿಕೆಯನ್ನು ಹಸ್ತಾಂತರಿಸಿದರು. ಪರೀಕ್ಷೆ ಮುಗಿದ ಬಳಿಕ ಆಂಬ್ಯುಲೆನ್ಸ್‌ನಲ್ಲಿ ಮನೆಗೆ ತಲುಪಿಸಲಾಗಿದೆ. ಎಲ್ಲ ಮುನ್ನೆಚ್ಚರಿಕಾ ವಿಧಾನಗಳನ್ನು ಅನುಸರಿಸಲಾಗಿದೆ ಎಂದು ಎನ್‌ಐಟಿಕೆ ಅಧಿಕಾರಿಗಳು ತಿಳಿಸಿದ್ದಾರೆ.

click me!