ಕೋವಿಡ್‌ನಿಂದ ಮೃತರಾದವರ ಸಂಸ್ಕಾರಕ್ಕೆ ತಾಲೂಕುವಾರು ಪ್ರತ್ಯೇಕ ಭೂಮಿ| ಜಿಪಂ ಸಾಮಾನ್ಯ ಸಭೆಯಲ್ಲಿ ಕೊರೋನಾ ಬಗ್ಗೆ ಚರ್ಚೆ| ಕೋವಿಡ್ ಕಾರ್ಯಪಡೆಗಳನ್ನು ರಚಿಸಲಾಗಿದೆ| ಗ್ರಾಮಗಳಲ್ಲಿ ಸೋಂಕು ನಿವಾರಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ| ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ|
ಹಾವೇರಿ(ಜು.31): ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹದಿಂದ ಬೇರೊಬ್ಬರಿಗೆ ಸೋಂಕು ಹರಡುವುದಿಲ್ಲ. ತಪ್ಪು ಕಲ್ಪನೆಯಿಂದ ಶವ ಸಂಸ್ಕಾರಕ್ಕೆ ಅಡ್ಡಿ ಮಾಡುವುದು ಬೇಡ. ಸೋಂಕಿನಿಂದ ಮೃತರಾದ ಶವವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ ಸ್ಪಷ್ಟೀಕರಣ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಗುರುವಾರ ಬಸವನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದವರ ಶವ ಸಂಸ್ಕಾರಕ್ಕೆ ಅಲ್ಲಲ್ಲಿ ಗ್ರಾಮಸ್ಥರು ಅಡ್ಡಿಪಡಿಸುತ್ತಿರುವ ಕುರಿತಂತೆ ಗಂಭೀರ ಚರ್ಚೆ ನಡೆಯಿತು. ಸೋಂಕಿನಿಂದ ಸತ್ತವರ ದೇಹದಿಂದ ಮತ್ತೊಬ್ಬರಿಗೆ ಕೊರೋನಾ ವೈರಸ್ ಹರಡುತ್ತಿದ್ದೆಯೋ ಇಲ್ಲವೋ ಎಂಬುದನ್ನು ವೈಜ್ಞಾನಿಕವಾಗಿ ವೈದ್ಯರು ಸಭೆಯಲ್ಲಿ ಸ್ಪಷ್ಟಪಡಿಸಬೇಕು. ಈ ಕುರಿತಂತೆ ಜನರಲ್ಲಿ ಮೂಡಿರುವ ಆತಂಕ ದೂರ ಮಾಡಬೇಕು. ಜನರಲ್ಲಿ ಈ ಕುರಿತಂತೆ ಮೂಡಿರುವ ತಪ್ಪು ಕಲ್ಪನೆ, ಮೂಢನಂಬಿಕೆಯನ್ನು ನಿವಾರಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಸಂಸ್ಕಾರಕ್ಕಾಗಿ ಪ್ರತ್ಯೇಕ ಸರ್ಕಾರಿ ಜಾಗವನ್ನು ಗುರುತಿಸಿ ಗೌರವಯುತವಾಗಿ ಸಂಸ್ಕಾರ ಕ್ರಿಯೆ ಕೈಗೊಳ್ಳಿ ಎಂದು ಸದಸ್ಯರು ಮನವಿ ಮಾಡಿಕೊಂಡರು.
undefined
ರಾಣಿಬೆನ್ನೂರು: ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ, ಪ್ರತಿಭಟನೆ
ಸಭೆಗೆ ಮಾಹಿತಿ ನೀಡಿದ ಡಿಎಚ್‌ಒ ಡಾ. ರಾಜೇಂದ್ರ ದೊಡ್ಮನಿ, ಕೊರೋನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ಜೀವಹೋದ ನಾಲ್ಕು ತಾಸಿನವರೆಗೆ ವೈರಸ್ ಜೀವಂತವಾಗಿರುತ್ತದೆ. ನಂತರ ವೈರಸ್ ನಾಶವಾಗುತ್ತದೆ. ಈ ವೈರಸ್ ಪರಾವಲಂಬಿ ಜೀವಿಯಾಗಿರುವುದರಿಂದ ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ. ಕೋವಿಡ್ ಪ್ರಮಾಣಿಕೃತ ನಿಯಮಾವಳಿ ಅನುಸಾರ ಸುರಕ್ಷತಾ ಸಾಧನ ಬಳಸಿ ಸರ್ಕಾರದ ವತಿಯಿಂದಲೇ ಸಂಸ್ಕಾರ ಮಾಡಲಾಗುತ್ತದೆ. ಮೃತದೇಹದಿಂದ ಕೋವಿಡ್ ವೈರಸ್ ಹರಡುತ್ತದೆ ಎಂಬುದು ಕೇವಲ ತಪ್ಪು ಕಲ್ಪನೆ, ತಪ್ಪು ತಿಳಿವಳಿಕೆ ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಕೋವಿಡ್ ಸೋಂಕಿನಿಂದ ಮೃತರಾದ ವ್ಯಕ್ತಿಯ ಸಂಸ್ಕಾರದ ಸಾಂಪ್ರದಾಯಿಕ ವಿಧಿ-ವಿಧಾನ ಕುರಿತಂತೆ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಲಾಗುತ್ತದೆ. ಮೃತ ದೇಹವನ್ನು ಪೂಜೆ ಹಾಗೂ ಸ್ನಾನಮಾಡಿಸುವ ಹಾಗಿಲ್ಲ. ಮಾರ್ಗಸೂಚಿಯ ಅನುಸಾರ ಕುಟುಂಬದ ಐದು ಸದಸ್ಯರನ್ನು ಕೋವಿಡ್ ಸುರಕ್ಷಾ ಕವಚ ಧರಿಸಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಸಂಸ್ಕಾರ ಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಅತ್ಯಂತ ಗೌರವಯುತವಾಗಿ ಕೋವಿಡ್‌ನಿಂದ ಮೃತರಾದ ಎಲ್ಲ ದೇಹಗಳನ್ನು ಸಂಸ್ಕಾರ ಮಾಡಲಾಗಿದೆ. ಗ್ರಾಮದ ಸ್ಮಶಾನದಲ್ಲಿ ಸಂಸ್ಕಾರ ಮಾಡಲು ವಿರೋಧವ್ಯಕ್ತಪಡಿಸುತ್ತಾರೆ. ಇದು ಮಾನವೀಯ ದೃಷ್ಟಿಯಿಂದ ಒಳ್ಳೆಯ ಕ್ರಮ ಅಲ್ಲ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದಲೇ ತಾಲೂಕಾವಾರು ಕೋವಿಡ್ ನಿಂದ ಮೃತರಾದವರ ಸಂಸ್ಕಾರಕ್ಕಾಗಿ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಕೊರೋನಾ ನಿಯಂತ್ರಣಕ್ಕೆ 3.87 ಕೋಟಿ ಖರ್ಚು:
ಕೋವಿಡ್ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 5.95 ಕೋಟಿ ಬಿಡುಗಡೆಯಾಗಿದೆ. ಈವರೆಗೆ 3.87 ಕೋಟಿ ಖರ್ಚಾಗಿದೆ. ಜಿಲ್ಲಾ ಆಸ್ಪತ್ರೆ ಮತ್ತು ರಾಣಿಬೆನ್ನೂರಿನಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್‌ಗಾಗಿ 2 ಕೋಟಿ ವೆಚ್ಚ ಮಾಡಲಾಗಿದೆ. ಏಳು ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ. ಪ್ರತಿ ಸೆಂಟರ್‌ನಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಡೆಡಿಕೆಟೆಡ್ ಕೋವಿಡ್ ಹೆಲ್ತ್‌ಸೆಂಟರ್‌ಗಳನ್ನು ಆರಂಭಿಸಿ ಆಯಾ ತಾಲೂಕುಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರಿಗೆ ಆಹಾರಕ್ಕಾಗಿ ದಿನಕ್ಕೆ 250 ಖರ್ಚು ಮಾಡಲಾಗುತ್ತದೆ ಎಂದು ವಿವರಿಸಿದರು.
ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಪಂಚಾಯಿತಿವಾರು ಕೋವಿಡ್ ಕಾರ್ಯಪಡೆಗಳನ್ನು ರಚಿಸಲಾಗಿದೆ. ಗ್ರಾಮಗಳಲ್ಲಿ ಸೋಂಕು ನಿವಾರಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಪಂನಿಂದ ಮಾಸ್ಕ್ ವಿತರಿಸುವ ಯಾವುದೇ ಕಾರ್ಯಕ್ರಮ ಇಲ್ಲ ಎಂದು ತಿಳಿಸಿದರು.
ಪರ್ಯಾಯ ನಿವೇಶನದಲ್ಲಿ ಮನೆ:
ನೆರೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರು ಇಚ್ಚಿಸಿದಲ್ಲಿ ಮನೆ ಬಿದ್ದ ಜಾಗದ ಬದಲು ಅವರ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು. ಫಲಾನುಭವಿಗಳು ಇಚ್ಚಿಸಿದ ಜಾಗಗಳನ್ನು ಗುರುತಿಸಿದರೆ ಆ ಜಾಗೆಯಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ನೆರೆ ಪರಿಹಾರದಡಿ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಮಂಜೂರಾದ ಫಲಾನುಭವಿಗಳಿಗೆ ಕೊನೆಯ ಕಂತಿನ ಹಣ ಪಾವತಿಯಾಗಿಲ್ಲ ಎಂದು ಸದಸ್ಯರ ದೂರುಗಳಿಗೆ ಉತ್ತರಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಪರಿಹಾರ ಹಣ ಪಾವತಿಸಲು ಯಾವುದೇ ಹಣದ ಕೊರತೆ ಇಲ್ಲ. ಸಾಕಷ್ಟು ಹಣವಿದೆ. ತಾಂತ್ರಿಕ ತೊಂದರೆಯಿಂದ ವಿಳಂಬವಾಗಿರಬಹುದು. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಜಿಪಿಎಸ್ ಸೇರಿದಂತೆ ಯಾವುದೇ ತಾಂತ್ರಿಕ ತೊಂದರೆ ಸರಿಪಡಿಸಿ ಕೊನೆಯ ಕಂತಿನ ಹಣ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರು, ವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.