ಹಾವೇರಿ ಜಿಲ್ಲೆಯಲ್ಲಿ ಈ ವರೆಗೆ 118 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ| ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ| 91 ಪ್ರಕರಣಗಳು ಸಕ್ರಿಯ, ಇಬ್ಬರ ಸಾವು| ಚಿಕಿತ್ಸೆಗೆ ಎಲ್ಲ ಸಿದ್ಧತೆ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ|
ಹಾವೇರಿ(ಜು. 01): ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಸೋಂಕಿನಿಂದ ಇಬ್ಬರು ವೃದ್ಧೆಯರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, 49 ಜನರಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ 118 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 91 ಪ್ರಕರಣಗಳು ಸಕ್ರಿಯವಾಗಿವೆ. ಇಬ್ಬರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು.
ಹಿರೇಕೆರೂರು ಸೀಲ್ ಡೌನ್ ಮಾಡಿ; ಸಚಿವ ಬಿಸಿ ಪಾಟೀಲ್ ಮನವಿ
ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾಂವಿ ದೇಸಾಯಿ ಓಣಿಯ 75 ವರ್ಷದ ಮಹಿಳೆ (ಪಿ-8295) ಜೂ. 20ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ ಮರಣಹೊಂದಿದ್ದಾರೆ. ಹಾವೇರಿ ತಾಲೂಕು ಆಲದಕಟ್ಟಿಗ್ರಾಮದ ಬಸವೇಶ್ವರನಗರದ ನಿವಾಸಿ 60 ವರ್ಷದ ವೃದ್ಧೆ (ಪಿ-13268) ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ ಜೂ. 24ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜೂ. 27ರಂದು ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಬೆಳಗ್ಗೆ 7.30ಕ್ಕೆ ಮರಣ ಹೊಂದಿದ್ದಾರೆ. ಎರಡು ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಪ್ರಮಾಣಿಕೃತ ಮಾರ್ಗಸೂಚಿಯಂತೆ ಇವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
49 ಪ್ರಕರಣ ದೃಢ:
ಐವರು ಆಶಾ ಕಾರ್ಯಕರ್ತೆಯರು ಹಾಗೂ ಓರ್ವ ಗ್ರಾಮ ಲೆಕ್ಕಿಗ ಸೇರಿ 49 ಜನರಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಶಿಗ್ಗಾಂವಿ ತಾಲೂಕಿನ 27 ಜನರಿಗೆ, ಹಿರೇಕೆರೂರು ತಾಲೂಕಿನ 15 ಜನರಿಗೆ, ಹಾನಗಲ್ಲ ತಾಲೂಕಿನ ನಾಲ್ಕು ಜನರಿಗೆ, ಹಾವೇರಿ, ಸವಣೂರು ಹಾಗೂ ರಾಣಿಬೆನ್ನೂರ ತಾಲೂಕಿನ ತಲಾ ಒಬ್ಬರು ಸೇರಿದಂತೆ 49 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.
ಸಿದ್ಧತೆಯಿದೆ, ಭಯ ಬೇಡ:
ಕೊರೋನಾ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಸಾರ್ವಜನಿಕರು ಭಯಪಡುವುದು ಬೇಡ. ಆದರೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸಿ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಇವೆ. ಅಂದಾಜು ನಾಲ್ಕು ಸಾವಿರ ಪ್ರಕರಣಗಳು ಜುಲೈ- ಆಗಸ್ಟ್ ಮಾಹೆಯಲ್ಲಿ ಹೆಚ್ಚಾಗಬಹುದು. ಎಷ್ಟೇ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದರೂ ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಔಷಧಿಯ ಕೊರತೆಯಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತದೆ. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸವಣೂರು, ಹಿರೇಕೆರೂರು ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ ಕೋವಿಡ್ ಕೇರ್ ಆಸ್ಪತ್ರೆಗಳನ್ನು ಸಿದ್ಧತೆಮಾಡಿಕೊಳ್ಳಲಾಗಿದೆ. ಎಲ್ಲ ತಾಲೂಕಿನಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
1200ರಿಂದ 1400 ಹಾಸಿಗೆಗಳನ್ನು ಸಿದ್ಧಮಾಡಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳಿವೆ. ಅಲ್ಲಿಯ ವೈದ್ಯರೊಂದಿಗೆ ಮಾತುಕತೆ ನಡೆಸಲಾಗಿದೆ. ಜಿಲ್ಲೆಯಲ್ಲೇ ಕೋವಿಡ್ ಮಾದರಿ ಪರೀಕ್ಷೆಗೆ ಲ್ಯಾಬ್ ಕಾರ್ಯ ಆರಂಭವಾಗಿದೆ. ಒಂದು ವಾರ ಕಿಮ್ಸ್‌ನ ವೈದ್ಯರು ಪರೀಕ್ಷೆಯ ಮೇಲುಸ್ತುವಾರಿ ವಹಿಸಲಿದ್ದಾರೆ. ಆನಂತರ ಸ್ವತಂತ್ರವಾಗಿ ಪರೀಕ್ಷೆ ನಡೆಯಲಿದೆ. ದಿನಕ್ಕೆ 300ರಂತೆ ಸ್ಥಳೀಯವಾಗಿ ಗಂಟಲು ದ್ರವದ ಮಾದರಿಯ ಪರೀಕ್ಷೆ ನಡೆಸಲಾಗುವುದು. ಸದ್ಯ ಲ್ಯಾಬ್‌ನಿಂದ ಜಿಲ್ಲೆಯ 1800 ಮಾದರಿಗಳ ವರದಿ ಬರಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಈ ವರೆಗೆ 31 ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದ್ದು, ಈ ಪೈಕಿ 13 ವಲಯಗಳನ್ನು ಡಿ ನೋಟಿಪೈ ಮಾಡಲಾಗಿದೆ. ಹೊಸದಾಗಿ ಇಂದು 10 ಕಂಟೈನ್‌ಮೆಂಟ್ ಜೋನ್ ಘೋಷಿಸಲಾಗಿದ್ದು, ಒಟ್ಟಾರೆ 28 ಕಂಟೈನ್‌ಮೆಂಟ್ ಜೋನ್‌ಗಳು ಮುಂದುವರಿದಿವೆ ಎಂದು ತಿಳಿಸಿದರು.
ಸೋಂಕಿತರು:
ಪಿ-9412 ಪ್ರಾಥಮಿಕ ಸಂಪರ್ಕದಿಂದ ಶಿಗ್ಗಾಂವಿಯ 41 ವರ್ಷದ ಪುರುಷ, ಆರು ವರ್ಷದ ಮಗು, 28 ವರ್ಷದ ಮಹಿಳೆ, 65 ವರ್ಷದ ಮಹಿಳೆ, 35 ವರ್ಷದ ಪುರುಷ, ಸವಣೂರ ಪಟ್ಟಣದ ಕಂಟೈನ್‌ಮೆಂಟ್ ಪ್ರದೇಶದ 64 ವರ್ಷದ ಪುರುಷ, 36 ವರ್ಷದ ಮಹಿಳೆ, 60 ವರ್ಷದ ಮಹಿಳೆ, 55 ವರ್ಷದ ಮಹಿಳೆ, 71 ವರ್ಷದ ಪುರುಷ, 35 ವರ್ಷದ ಪುರುಷ, 45 ವರ್ಷದ ಪುರುಷ, 26 ವರ್ಷದ ಪುರುಷ, 28 ವರ್ಷದ ಪುರುಷ, 25 ವರ್ಷದ ಪುರುಷ, 23 ವರ್ಷದ ಮಹಿಳೆ, 37 ವರ್ಷದ ಮಹಿಳೆ, 37 ವರ್ಷದ ಮಹಿಳೆ, 43 ವರ್ಷದ ಪುರುಷ, 33 ವರ್ಷದ ಮಹಿಳೆ, 30 ವರ್ಷದ ಮಹಿಳೆ, 37 ವರ್ಷದ ಪುರುಷ, 23 ವರ್ಷದ ಪುರುಷ, 25 ವರ್ಷದ ಪುರುಷ, 48 ವರ್ಷದ ಪುರುಷ, 20 ವರ್ಷದ ಪುರುಷ, 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಹಿರೇಕೆರೂರು ತಾಲೂಕಿನ ಪುರಪಾಂಡಿಕೊಪ್ಪದ 45 ವರ್ಷದ ಮಹಿಳೆ, ಯಮ್ಮಿಗನೂರಿನ 45 ವರ್ಷದ ಆಶಾ ಕಾರ್ಯಕರ್ತೆ, ಸತ್ತಕೋಟೆಯ 42 ವರ್ಷದ ಆಶಾಕಾರ್ಯಕರ್ತೆ, ನೂಲಗೇರಿಯ 41 ವರ್ಷದ ಮಹಿಳೆ, ಕೋಡದ 49 ವರ್ಷದ ಆಶಾ ಕಾರ್ಯಕರ್ತೆ, ಗುಡ್ಡದ ಮಾದಾಪುರದ 40 ವರ್ಷದ ಆಶಾ ಕಾರ್ಯಕರ್ತೆ, ಮೇದೂರಿನ 25 ವರ್ಷದ ಮಹಿಳೆ, ಮಾಸೂರಿನ 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪಿ-9546 ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ರಾಮತೀರ್ಥ ಗ್ರಾಮದ 27 ವರ್ಷದ ಪುರುಷ, 25 ವರ್ಷದ ಪುರುಷ, 21 ವರ್ಷದ ಪುರುಷ, 55 ವರ್ಷದ ಪುರುಷ, 30 ವರ್ಷದ ಪುರುಷ, 32 ವರ್ಷದ ಪುರುಷ ಹಾಗೂ ರಟ್ಟಿಹಳ್ಳಿಯ 49 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ 27 ವರ್ಷದ ಪುರುಷ, 37 ವರ್ಷದ ಆಶಾ ಕಾರ್ಯಕರ್ತೆ, ಕಮತಗೇರಿ 33 ವರ್ಷದ ಆಶಾ ಕಾರ್ಯಕರ್ತೆ, ಕಂಚಿನೆಗಳೂರಿನ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸವಣೂರ ತಾಲೂಕಿನ ಹುರಳಿಕೊಪ್ಪದ 25 ವರ್ಷದ ಪುರುಷನಿಗೆ ಪಿ-9412 ಸಂಪರ್ಕದಿಂದ, ಹಾವೇರಿ ತಾಲೂಕಿನ ಗುತ್ತಲದ 43 ವರ್ಷದ ಪುರುಷನಿಗೆ ಪಿ-9412 ಸಂಪರ್ಕದಿಂದ ಹಾಗೂ ರಾಣಿಬೆನ್ನೂರ ತಾಲೂಕಿನ ಹಲಗೇರಿಯ 32 ವರ್ಷದ ಮಹಿಳೆಗೆ ಪಿ-9546 ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.
ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಎಚ್‌ಒ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಇದ್ದರು.