ಉಡುಪಿ ಜಿಲ್ಲೆಯಲ್ಲಿ ಬಟ್ಟೆಯಂಗಡಿ ಮಾಲೀಕ, ಬಸ್‌ ಚಾಲ​ಕ​ರಿಗೂ ಸೋಂಕು

By Kannadaprabha NewsFirst Published Jul 1, 2020, 7:59 AM IST
Highlights

ಕುಂದಾಪುರ- ಬೆಂಗಳೂರು ಬಸ್ಸುಗಳ ಇಬ್ಬರು ಚಾಲಕರು, ಕುಂದಾಪುರದ ಬಟ್ಟೆಯಂಗಡಿಯ ಮಾಲೀಕರೊ​ಬ್ಬರು ಸೇರಿ ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜೊತೆಗೆ ಈ ಮೂರು ಪ್ರಕರಣಗಳು ಜಿಲ್ಲಾಡಳಿತದ ತೀವ್ರ ತಲೆನೋವಿಗೆ ಕಾರಣವಾಗಿವೆ.

ಉಡುಪಿ(ಜು.01): ಕುಂದಾಪುರ- ಬೆಂಗಳೂರು ಬಸ್ಸುಗಳ ಇಬ್ಬರು ಚಾಲಕರು, ಕುಂದಾಪುರದ ಬಟ್ಟೆಯಂಗಡಿಯ ಮಾಲೀಕರೊ​ಬ್ಬರು ಸೇರಿ ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 9 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜೊತೆಗೆ ಈ ಮೂರು ಪ್ರಕರಣಗಳು ಜಿಲ್ಲಾಡಳಿತದ ತೀವ್ರ ತಲೆನೋವಿಗೆ ಕಾರಣವಾಗಿವೆ.

ಬಸ್ಸು ಚಾಲಕರಿಗೆ ಯಾರಿಂದ, ಎಲ್ಲಿ ಸೋಂಕು ತಗಲಿತು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅವರಿಂದ ಈ ಬಸ್ಸುಗಳನ್ನು ಪ್ರಯಾಣಿಸಿದವರಿಗೂ ಸೋಂಕು ತಗಲಿರುವ ಸಾಧ್ಯತೆ ಇರುವುದರಿಂದ ಅವರನ್ನೆಲ್ಲಾ ಕಲೆ ಹಾಕುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ. ಇನ್ನು ಬಟ್ಟೆಯಂಗಡಿ ಮಾಲೀಕರ ಮಗ ಬೆಂಗಳೂರಿನಿಂದ ಬಂದಿದ್ದು, ಅವರಿಗೂ ಸೋಂಕು ಪತ್ತೆಯಾಗಿತ್ತು, ಆತನಿಂದ ತಂದೆಗೆ ಸೋಂಕು ತಗಲಿರುವುದು ದೃಢವಾಗಿದೆ. ಈ ಬಟ್ಟೆಯಂಗಡಿಗೆ ಬಂದ ಗ್ರಾಹಕರನ್ನೂ ಈಗ ಪರೀಕ್ಷೆಗೊಳಪಡಿಸಬೇಕಾಗಿದೆ.

'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'

ಮಂಗಳವಾರ ಪತ್ತೆಯಾದ 9 ಸೋಂಕಿತರಲ್ಲಿ 6 ಮಂದಿ ಪುರುಷರು ಮತ್ತು 3 ಮಂದಿ ಮಹಿಳೆಯರು. ಅವರಲ್ಲಿ 3 ಮಂದಿ ಮಂಬೈಯಿಂದ ಬಂದವರು, 48 ವರ್ಷದ ಪುರುಷ ಮೃತಪಟ್ಟಿದ್ದು, ಅವರ ಪತ್ನಿ - ಮಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರು ಹೈದರಾಬಾದ್‌ನಿಂದ ಬಂದವರು. ಇಬ್ಬರು ಬಸ್ಸು ಚಾಲಕರು, ಬಟ್ಟೆಯಂಗಡಿ ಮಾಲಕರು ಸೇರಿದ 5 ಮಂದಿ ಸ್ಥಳೀಯರಾಗಿದ್ದು, ಸೋಂಕಿತರ ಸಂಪರ್ಕದಿಂದ ಸೋಂಕು ಪಡೆದವರಾಗಿದ್ದಾರೆ.

ಹಾಟ್‌ಸ್ಪಾಟ್‌ನವರು 174: ಮಂಗಳವಾರ 123 ವರದಿಗಳು ಬಂದಿದ್ದು ಅವರಲ್ಲಿ 9 ಪಾಸಿಟಿವ್‌, 114 ನೆಗೆಟಿವ್‌ ಆಗಿವೆ. ಇನ್ನೂ 374 ವರದಿಗಳು ಬರಬೇಕಾಗಿವೆ. ಮಂಗಳವಾರ ಮತ್ತೆ ಜಿಲ್ಲೆಯಿಂದ ಒಟ್ಟು 288 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 174 ಮುಂಬೈ, ಬೆಂಗಳೂರು ಹಾಟ್‌ಸ್ಪಾಟ್‌ನಿಂದ ಬಂದವರು, 60 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರು, 30 ಮಂದಿ ಕೊರೋನಾ ಶಂಕಿತರು, 20 ಮಂದಿ ಶೀತಜ್ವರ ಮತ್ತು 4 ಮಂದಿ ಉಸಿರಾಟದ ತೊಂದರೆ ಇರುವವರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1206 ಮಂದಿಗೆ ಸೋಂಕು ಪತ್ತೆಯಾಗಿದೆ. ಅವರಲ್ಲಿ 1067 ಮಂದಿ ಗುಣಮುಖರಾಗಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ. ಈಗ 136 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ​ರೆ.

click me!