ರಾಜ್ಯದಲ್ಲಿ 48 ಲಕ್ಷ ಆರ್‌ಟಿಸಿಗಳು ಇಂದಿಗೂ ಸತ್ತವರ ಹೆಸರಿನಲ್ಲೇ ಮುನ್ನಡೆಯುತ್ತಿವೆ. ದಾಖಲೆಗಳ ನಿರ್ವಹಣೆ ಎಂದರೆ ಇದೇನಾ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.
ಮಂಡ್ಯ (ಅ.23): ರಾಜ್ಯದಲ್ಲಿ 48 ಲಕ್ಷ ಆರ್‌ಟಿಸಿಗಳು ಇಂದಿಗೂ ಸತ್ತವರ ಹೆಸರಿನಲ್ಲೇ ಮುನ್ನಡೆಯುತ್ತಿವೆ. ದಾಖಲೆಗಳ ನಿರ್ವಹಣೆ ಎಂದರೆ ಇದೇನಾ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು. ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿಯನ್ನು ಉಳಿಸಿ ಅವುಗಳಿಗೆ ಜೀವ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು.
ತಹಸೀಲ್ದಾರ್‌ಗಳು, ಕಂದಾಯಾಧಿಕಾರಿಗಳು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಿದರೆ ಇದು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲೆಯಲ್ಲೇ ಆಧಾರ್ ಸೀಡಿಂಗ್ ವೇಳೆ ೨,೯೯,೫೩೩ ಆರ್‌ಟಿಸಿಗಳು ಸತ್ತವರ ಹೆಸರಿನಲ್ಲಿವೆ. ಇದರಲ್ಲಿ 33557 ಪ್ರಕರಣಗಳಲ್ಲಿ ಪೌತಿ ಖಾತೆ ಮಾಡಲಾಗಿದೆ. ಉಳಿದಿದ್ದನ್ನು ಮಾಡುವುದು ಯಾವಾಗ. ಪೌತಿ ಖಾತೆ ಮಾಡಿಕೊಡುವುದಕ್ಕೆ ಇರುವ ತೊಂದರೆಯಾದರೂ ಏನು ಎಂದು ನೇರವಾಗಿಯೇ ಪ್ರಶ್ನಿಸಿದರು.
undefined
ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಪಕ್ಷೇತರರ ಸೆಡ್ಡು
ಜಂಟಿ ಖಾತೆ ಮಾಡಿಕೊಡಿ: ಆಗ ಕೆಲವು ಕಂದಾಯಾಧಿಕಾರಿಗಳು ಉತ್ತರಿಸಿ, ಶೇ.೭೦ರಷ್ಟು ಪ್ರಕರಣಗಳಲ್ಲಿ ಸಾವನ್ನಪ್ಪಿರುವವರಿಗೆ ಮರಣ ಪ್ರಮಾಣಪತ್ರವಿಲ್ಲ. ಅದನ್ನು ನೀಡದೆ ಪೌತಿ ಖಾತೆ ಮಾಡಿಕೊಡುವುದಕ್ಕೆ ಅಡಚಣೆಯಾಗುತ್ತಿದೆ ಎಂದು ಉತ್ತರಿಸಿದರು. ಆಗ ಸಚಿವ ಕೃಷ್ಣಭೈರೇಗೌಡರು, ಮರಣ ಪ್ರಮಾಣ ಪತ್ರವಿಲ್ಲದಿದ್ದರೆ ಕುಟುಂಬ ಸದಸ್ಯರ ಹೇಳಿಕೆಯನ್ನು ದಾಖಲಿಸಿಕೊಂಡು ಕನಿಷ್ಠ ಜಂಟಿ ಖಾತೆಯನ್ನಾದರೂ ಮಾಡಿಕೊಡಿ ಎಂದು ಸಲಹೆ ನೀಡಿದಾಗ, ಪೌತಿ ಖಾತೆಯ ಹೇಗೆ ಮಾಡಬೇಕೆಂಬ ಬಗ್ಗೆ ಇಡೀ ಜಿಲ್ಲೆಗೆ ಒಂದೇ ಮಾದರಿಯ ನಿಯಮಾವಳಿಯನ್ನು ರೂಪಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂಬ ಸಲಹೆ ಅಧಿಕಾರಿಗಳಿಂದ ಕೇಳಿಬಂದಿತು.
ಅದಕ್ಕೆ ಪೂರಕವಾಗಿ ಸಚಿವರು ನಿಯಮಾವಳಿಯನ್ನು ರೂಪಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೂಚಿಸಿದರು. ಆರ್‌ಟಿಸಿಯನ್ನು ಆಧಾರವಾಗಿಟ್ಟುಕೊಂಡು ಯಾವುದೇ ವ್ಯವಹಾರವನ್ನು ಮಾಡಬಾರದು. ಆರ್‌ಟಿಸಿ ಇರುವ ಜಮೀನಿನಲ್ಲಿ ಮನೆ ಇದ್ದರೂ ಅದು ದಾಖಲಾಗಿರುವುದಿಲ್ಲ. ಜಮೀನು ಎಂದೇ ಮುನ್ನಡೆಯುತ್ತಿರುತ್ತದೆ. ಅದರಲ್ಲಿ ಮನೆ ಎಂದು ಸೇರಿಸಿದರೆ ಪಂಚಾಯ್ತಿ ಖಾತೆ ಮಾಡಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಹೊಸ ನಿಯಮಾವಳಿ ರೂಪಿಸಿಲ್ಲ: ಬಗರ್ ಹುಕುಂಗೆ ಗೋಮಾಳವನ್ನು ಗುರುತಿಸುವಾಗ ಅದರ ೧೯೬೧ರ ಕಾಯ್ದೆಯಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆಯೇ ವಿನಃ ನಾವು ಯಾವುದೇ ಹೊಸ ನಿಯಮಾವಳಿಗಳನ್ನು ಸೇರಿಸಿಲ್ಲ. ಅದನ್ನು ನಾವು ಮಾಡಿದ್ದೇವೆ ಎಂಬ ಸಂದೇಶ ಜನರಿಗೆ ಹೋಗತ್ತಿರುವುದೇಕೆ. ಜಿಲ್ಲೆಯಲ್ಲಿ ಬಗರ್ ಹುಕುಂ ಅರ್ಜಿಗಳು ಇನ್ನೂ ಗ್ರಾಮ ಆಡಳಿತಾಧಿಕಾರಿ ಹಂತದಲ್ಲಿಯೇ ಉಳಿದುಕೊಂಡಿವೆ. ಅವು ಕಂದಾಯಾಧಿಕಾರಿ ಹಂತಕ್ಕೆ ಬಂದು ತಹಸೀಲ್ದಾರ್ ಹಂತಕ್ಕೆ ಬರೋದು ಯಾವಾಗ. ಮಂಡ್ಯ ಜಿಲ್ಲೆಯಲ್ಲಿ ೬೩,೬೬೬ ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು, ೫೭೨೪೫ ಅರ್ಜಿಗಳು ಗ್ರಾಮ ಆಡಳಿತಾಧಿಕಾರಿ ಲಾಗಿನ್‌ನಲ್ಲೇ ಇವೆ. ೧೯೬ ಅರ್ಜಿಗಳು ಮಾತ್ರ ಆರ್‌ಐ ಲಾಗಿನ್‌ಗೆ ಬಂದಿವೆ. ಪ್ರತಿ ತಾಲೂಕಿನಲ್ಲೂ ಆದಷ್ಟು ಬೇಗ ಗೋಮಾಳವನ್ನು ಗುರುತಿಸಿಕೊಂಡು ಅರ್ಹತೆ ಇರುವವರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡುವಂತೆ ಸೂಚಿಸಿದರು.
ಎಷ್ಟು ಬಾರಿ ಅಳತೆ ಮಾಡೋದು?: ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ ನಂತರ ಅದನ್ನು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳು ಅದನ್ನು ಸುಪರ್ದಿಗೆ ತೆಗೆದುಕೊಂಡು ಸಂರಕ್ಷಿಸಬೇಕು. ಅದನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲೇ ಉಳಿಸಿದರೆ ಮತ್ತೆ ಒತ್ತುವರಿಯಾಗುತ್ತದೆ. ನಾವೂ ಎಷ್ಟು ಬಾರಿ ಒತ್ತುವರಿ ತೆರವುಗೊಳಿಸಲು ಸಾಧ್ಯ. ೧೫ ವರ್ಷದಿಂದ ಇದೇ ಕೆಲಸ ನಡೆಯುತ್ತಿದೆ. ಕೆರೆಗಳನ್ನು ಒಮ್ಮೆ ಅಳತೆ ಮಾಡಿ ಒತ್ತುವರಿಗೊಳಿಸಿದ ಕೂಡಲೇ ಅದನ್ನು ಯಥಾ ಸ್ಥಿತಿಯಲ್ಲೇ ಬಿಡದೆ ಸಂಬಂಧಿಸಿದ ಪಂಚಾಯ್ತಿಗಳಿಗೆ ಮಾಲೀಕತ್ವ ನೀಡಬೇಕು. ಇದೇ ಕೆಲಸ ಮಾಡಿಕೊಂಡಿದ್ದರೆ ಉಳಿದ ಕೆಲಸಗಳ ಬಗ್ಗೆ ಗಮನಹರಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ಯುವಶಕ್ತಿಯೇ ಕಾಂಗ್ರೆಸ್ ಪಕ್ಷದ ಆಸ್ತಿ: ಮಾಜಿ ಸಂಸದ ಡಿ.ಕೆ.ಸುರೇಶ್
ಆಗ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯಲ್ಲಿರುವ ೯೬೨ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಸರ್ವೇ ಸ್ಕೆಚ್ ಕೂಡ ಮಾಡಿ ಮುಗಿಸಲಾಗಿದೆ ಎಂದು ಹೇಳಿದಾಗ, ಅದನ್ನು ಭೂಮಿ ತಂತ್ರಾಂಶದಲ್ಲಿ ದಾಖಲಿಸಿ ಸಂಬಂಧಪಟ್ಟವರ ಸುಪರ್ದಿಗೆ ವಹಿಸಿ ಸಂರಕ್ಷಿಸುವಂತೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಶಾಸಕರಾದ ಪಿ.ರವಿಕುಮಾರ, ದರ್ಶನ್ ಪುಟ್ಟಣ್ಣಯ್ಯ ಇತರರಿದ್ದರು.