ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

By Kannadaprabha News  |  First Published Jun 27, 2020, 7:11 AM IST

ಮನೆಯಲ್ಲೇ ಇದ್ದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ| ಅನಗತ್ಯವಾಗಿ ಹೊರಗೆ ತಿರುಗಾಡಬೇಡಿ: ತಾಲೂಕಾಡಳಿತ|41 ಪ್ರಕರಣಗಳು ಪತ್ತೆಯಾದ ಕೊರೋನಾ ಹಾಟ್‌ಸ್ಪಾಟ್‌ ಎಂದು ಗುರುತಿಸಿರುವ ಮೊರಬ ಗ್ರಾಮಕ್ಕೆ ಗ್ರಾಮವೇ ಸೀಲ್‌ಡೌನ್‌|


ಈಶ್ವರ ಜಿ. ಲಕ್ಕುಂಡಿ

ನವಲಗುಂದ(ಜೂ. 27): ಕೊರೋನಾ ಸೋಂಕು ನವಲಗುಂದ ತಾಲೂಕನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಮೊರಬದಲ್ಲಿ ಹಬ್ಬುತ್ತಿರುವುದನ್ನು ನೋಡಿದರೆ ಸಮುದಾಯಕ್ಕೆ ಕೊರೋನಾ ಹಬ್ಬುತ್ತಿದೆಯೇ ಎಂಬ ಸಂಶಯ ಉಂಟಾಗುತ್ತಿದೆ. ತಾಲೂಕಲ್ಲಿ ನಿಯಂತ್ರಿಸಲು ತಾಲೂಕಾಡಳಿತ ಹೆಣಗಾಡುತ್ತಿದೆ.

Tap to resize

Latest Videos

undefined

ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಜನಸಾಮಾನ್ಯರಲ್ಲಿ ಕೊರೋನಾ ಸೋಂಕು ಗೊತ್ತಿಲ್ಲದಂತೆ ತಗುಲುತ್ತಿದೆ. ದಿನಗಳು ಉರುಳಿದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಆದಷ್ಟುಬೇಗನೆ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಹುಬ್ಬಳ್ಳಿ: ಕೊರೋನಾ ಭೀತಿ, ಮೂರು ಸಾವಿರ ಮಠ ಸೀಲ್‌ಡೌನ್‌..!

ಹೇಗೆ ಹಬ್ಬುತ್ತಿದೆ?

ತಾಲೂಕಿನ ಬಹುಭಾಗಗಳಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ ಜನರಿಂದಲೇ ಕೊರೋನಾ ಹಬ್ಬುತ್ತಿರುವುದು ಒಂದೆಡೆಯಾದರೆ, ಸಾಮಾನ್ಯ ಕಾಯಿಲೆಗಳಿಂದ ಕೊರೋನಾ ಕಾಣಿಸಿಕೊಳ್ಳಲಾರಂಭಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಮಾನಗಳಲ್ಲಿ ಗ್ರಾಮವನ್ನು ಹತೋಟಿಗೆ ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ.

ತಾಲೂಕಿನಲ್ಲಿ ಮೊರಬ ಗ್ರಾಮದಲ್ಲಿ 41 ಪ್ರಕರಣಗಳು ಕಂಡು ಬಂದಿವೆ. ಇದೇ ಗ್ರಾಮದಲ್ಲಿ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಅಣ್ಣಿಗೇರಿಯಲ್ಲಿ 5, ಇದೇ ತಾಲೂಕಿನ ಸಾಸ್ವಿಹಳ್ಳಿ-2, ಕೊಂಡಿಕೊಪ್ಪ, ಮಣಕವಾಡ ಗ್ರಾಮಗಳಲ್ಲಿ ತಲಾ ಒಂದು, ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಒಂದು ಹೀಗೆ ಹಬ್ಬುತ್ತಲೇ ಇದೆ.

ಮನೆಯಿಂದ ಹೊರಬರಬೇಡಿ:

41 ಪ್ರಕರಣಗಳು ಪತ್ತೆಯಾದ ಕೊರೋನಾ ಹಾಟ್‌ಸ್ಪಾಟ್‌ ಎಂದು ಗುರುತಿಸಿರುವ ಮೊರಬ ಗ್ರಾಮಕ್ಕೆ ಗ್ರಾಮವೇ ಸೀಲ್‌ಡೌನ್‌ ಆಗಿದೆ. ಆದರೂ ಜನರು ಮನೆಯಿಂದ ಹೊರಬರುವುದು ತಪ್ಪುತ್ತಿಲ್ಲ. ರಾತ್ರಿವೇಳೆ ಬೇಕಾಬಿಟ್ಟಿಯಾಗಿ ಜನತೆ ಅಡ್ಡಾಡುತ್ತಾರೆ. ಹೀಗಾಗಿ ವಿನಾಕಾರಣ ಮನೆಯಿಂದ ಹೊರಬರಬೇಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಜನತೆಯೇ ಸ್ವಯಂ ಪ್ರೇರಿತವಾಗಿ ಮನೆಯಿಂದ ಅನಗತ್ಯವಾಗಿ ಹೊರಬರುವುದನ್ನು ನಿಲ್ಲಿಸಬೇಕು. ಕೊರೋನಾಕ್ಕೆ ಇದೊಂದೇ ಮದ್ದು. ಇದನ್ನು ಜನತೆ ಅರಿತುಕೊಳ್ಳಬೇಕು ಎಂದು ಜಿಪಂ ಸದಸ್ಯ ಅಡಿವೆಪ್ಪ ಹೇಳುತ್ತಾರೆ.

ಒಟ್ಟಿನಲ್ಲಿ ಮೊರಬ ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದು, ಇದನ್ನು ತಡೆಯಬೇಕೆಂದರೆ ಜನತೆ ಸಹಕಾರ ಅಗತ್ಯ. ಜತೆಗೆ ತಾಲೂಕಾಡಳಿತ ಇನ್ನಷ್ಟುಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.ತರಕಾರಿ ಮತ್ತು ದಿನಸಿ ವಸ್ತುಗಳಿಗೆ ಅಂಗಡಿಗಳನ್ನು ನಿಯೋಜನೆ ಮಾಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಮನೆಯಲ್ಲಿ ಒಬ್ಬರು ಮಾತ್ರ ತಮ್ಮ ಹೊಲಗಳಿಗೆ ಹೋಗಬಹುದು. ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಬೇಕು ಎಂದು ತಹಸೀಲ್ದಾರ್‌ ನವೀನ ಹುಲ್ಲೂರು ಹೇಳಿದ್ದಾರೆ. 

ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಕೊರೋನಾವನ್ನು ನಿಯಂತ್ರಿಸಬೇಕೆಂದರೆ ಕಡ್ಡಾಯವಾಗಿ ಸಾರ್ವಜನಿಕರು ಮನೆಯಲ್ಲೇ ಇರಬೇಕು. ಅನಗತ್ಯವಾಗಿ ಹೊರಗೆಲ್ಲ ತಿರುಗಾಡಬಾರದು. ಇದನ್ನು ಜನತೆಯೂ ಅರ್ಥ ಮಾಡಿಕೊಳ್ಳಬೇಕು ಎಂದು ನವಲಗುಂದ ಶಾಸಕ  ಶಂಕರ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದ್ದಾರೆ. 
 

click me!