ರಾಜ್ಯ ಸರ್ಕಾರ ಜಾರಿಗೆ ತರಲು ತೀರ್ಮಾನಿಸಿರುವ ಭೂ ತಿದ್ದುಪಡಿ ಕಾಯ್ದೆಗೆ ರಾಜ್ಯಾದ್ಯಂತ ರೈತಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.26): ಪ್ರಾಣ ಹೋದರೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿಗೆ ಬಿಡುವುದಿಲ್ಲ. ಸರ್ಕಾರಕ್ಕೆ ತಾಕತ್ತಿದ್ದರೆ ಕಾಯ್ದೆ ಜಾರಿ ಮಾಡಲಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳುವವನೇ ಹೊಲದೊಡೆಯ ಎಂಬ ನೀತಿ ಬದಲಿಸಿ ಉಳ್ಳವನೇ ಹೊಲದೊಡೆಯ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರಟಿದ್ದಾರೆ. ಇದು ಪ್ರಜಾತಂತ್ರದ ವಿರೋಧಿ ನೀತಿ ಎಂದು ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ರೈತರ ಭೂ ಹಿಡುವಳಿ ತಪ್ಪಿಸಿ ಶ್ರೀಮಂತರ ಕೈಗೆ ಭೂಮಿ ನೀಡಲು ಮುಂದಾಗುವ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ತಂತ್ರಗಾರಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಲೆ ಮಾಡುತ್ತಿದ್ದಾರೆ. ಇಂತಹ ಬಿಜೆಪಿ ನೀತಿಗಳ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ
ರಾಜ್ಯ ಸರ್ಕಾರ ರಾಜ್ಯದಲ್ಲಿ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಮುಂದಾಗಿದೆ. ಆದರೆ ಇದಕ್ಕೆ ಈಗಾಗಲೇ ಹಲವು ರೈತ ಸಂಘಟನೆಗಳು ತಮ್ಮ ಪ್ರತಿಭಟನೆಗಳನ್ನು ದಾಖಲಿಸಿವೆ. ಮುಖ್ಯಮಂತ್ರಿಗೆ ತಾಕತ್ ಇದ್ದರೆ ಈ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಿ ಎಂದು ಕಾಗೋಡು ಸವಾಲು ಹಾಕಿದ್ದಾರೆ.