ಹಿಂದುಳಿದ ವರ್ಗಗಳ ಏಳ್ಗೆಗೆ ಬಜೆಟ್‌ನಲ್ಲಿ ಪ್ರತ್ಯೇಕ 400 ಕೋಟಿ ರು.: ಸಚಿವ ಸುನಿಲ್‌ ಕುಮಾರ್‌

By Kannadaprabha News  |  First Published Aug 21, 2022, 9:58 AM IST
  • ಹಿಂದುಳಿದ ವರ್ಗಗಳ ಏಳ್ಗೆಗೆ ಬಜೆಟ್‌ನಲ್ಲಿ ಪ್ರತ್ಯೇಕ 400 ಕೋಟಿ ರು.: ಸಚಿವ ಸುನಿಲ್‌ ಕುಮಾರ್‌
  • ಮಂಗಳೂರಲ್ಲಿ 3 ದಿನಗಳ ಕಾಲ ದೇವರಾಜ ಅರಸು ಜನ್ಮದಿನಾಚರಣೆಗೆ ಚಾಲನೆ

ಮಂಗಳೂರು (ಆ.21): ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಏಳಿಗೆಗೆ ಬಜೆಟ್‌ನಲ್ಲಿ 400 ಕೋಟಿ ರು. ಪ್ರತ್ಯೇಕ ವಿಶೇಷ ಅನುದಾನ ಮೀಸಲಿರಿಸಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶನಿವಾರ ನಗರದ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನ್ಮದಿನಾಚರಣೆ ಹಿನ್ನೆಲೆ: ದೇವರಾಜ್ ಅರಸು ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

Tap to resize

Latest Videos

ಸಾಮಾಜಿಕ(Social), ಶೈಕ್ಷಣಿಕ(educational) ಅರ್ಥಿಕ(economic) ಉನ್ನತಿಯ ಹಲವಾರು ಯೋಜನೆ, ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗ, ಶೋಷಿತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿರುವ ಡಿ.ದೇವರಾಜ ಅರಸು ಅವರು ಸಾಮಾಜಿಕ ಬದಲಾವಣೆ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಅರಸು ಅವರು ಮುಖ್ಯಮಂತ್ರಿಯಾಗಿ ನೀಡಿರುವ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ. ಅ ಮೂಲಕ ಅವರು ಜನಮಾನಸದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ(Manjunath Bhandari)ಯವರು ಮಾತನಾಡಿ, ಡಿ.ದೇವರಾಜ ಅರಸು ಅವರು ಶೋಷಿತರು, ಹಿಂದುಳಿದವರು, ಸಣ್ಣ ಸಮಾಜದವರ ಉನ್ನತಿಗಾಗಿ ಆನೇಕ ಕಾರ್ಯಕ್ರಮಗಳನ್ನು ನೀಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ದೇವರಾಜ ಅರಸುರವರು ಕಾರ್ಯಗತಗೊಳಿಸಿದ ಯೋಜನೆ, ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಸಮುದಾಯಕ್ಕೆ ತಲುಪಿಸಲು ನಿರಂತರವಾಗಿ ಶ್ರಮಿಸಿದ ಮೂಲ್ಕಿ ಜಯಾನಂದ ದೇವಾಡಿಗ ಅವರಿಗೆ 2022-23ನೇ ಸಾಲಿನ ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌(Vedavyas Kamath) ಅಧ್ಯಕ್ಷತೆ ವಹಿಸಿದ್ದರು.

ದೇವರಾಜ್ ಅರಸು ಅಸ್ತ್ರ ಪ್ರಯೋಗಿಸಿದ ಹೆಚ್.ಡಿ. ಕುಮಾರಸ್ವಾಮಿ

 

ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ, ಜಿ.ಪಂ. ಸಿಇಒ ಡಾ ಕುಮಾರ್‌, ಮಂಗಳೂರು ಉಪವಿಭಾಗಾಧಿಕಾರಿ ಮದನ್‌ಮೋಹನ್‌, ಮೆಸ್ಕಾಂ ಎಂಡಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಇದ್ದರು. ದೇವರಾಜ ಅರಸು ಅವರ ತತ್ವ-ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿ ಉಪನ್ಯಾಸಕಿ ಡಾ ತ್ರಿವೇಣಿ, ಡಿ.ದೇವರಾಜ ಅರಸು ಅವರು ಹಲವಾರು ಕ್ರಾಂತಿಕಾರಿ ಕಾಯ್ದೆ, ಕಾರ್ಯಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಸಾಕಾರಗೊಳಿಸಿದ ಮಹಾನ್‌ ನಾಯಕ ಎಂದು ಬಣ್ಣಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಎಸ್‌.ಆರ್‌. ಸ್ವಾಗತಿಸಿದರು. ಮಹಾಲಕ್ಷ್ಮಿ ಬೋಳಾರ ವಂದಿಸಿದರು. ಮಂಜು ವಿಟ್ಲ ನಿರೂಪಿಸಿದರು.

click me!