ಬೆಕ್ಕೇರಿ ಗ್ರಾಮದಲ್ಲಿ 25 ವರ್ಷಗಳಿಂದ ಅಂತ್ಯಸಂಸ್ಕಾರಕ್ಕೆಂದು ಮೀಸಲಿಟ್ಟಿದ ಜಾಗ ಕಾಣೆಯಾಗಿದ್ದು, ಜನರು ಅಂತ್ಯಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣ
ಬೆಳಗಾವಿ(ಆ.21): ಶವ ಸಂಸ್ಕಾರಕ್ಕೆಂದು ಪ್ರತಿ ಹಳ್ಳಿಗಳಲ್ಲಿಯೂ ಸ್ಮಶಾನಭೂಮಿ ಒದಗಿಸಬೇಕೆಂದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಸ್ಮಶಾನಭೂಮಿಗಾಗಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಖಾಸಗಿ ಮಾಲೀಕತ್ವದ ಜಮೀನು ಖರೀದಿಸುವ ಕೆಲಸ ನಡೆದಿದೆ. ಆದರೆ, ಈ ಗ್ರಾಮದಲ್ಲಿ 25 ವರ್ಷಗಳಿಂದ ಅಂತ್ಯಸಂಸ್ಕಾರಕ್ಕೆಂದು ಮೀಸಲಿಟ್ಟಿದ ಜಾಗ ಕಾಣೆಯಾಗಿದ್ದು, ಅಲ್ಲಿಯ ಜನರು ಅಂತ್ಯಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಯಬಾಗ ತಾಲೂಕಿನ ಕುಡಚಿ ಹೋಬಳಿಯ ವ್ಯಾಪ್ತಿಯ ಬೆಕ್ಕೇರಿ ಗ್ರಾಮದ ರಿ.ಸ.ನಂ 266ರಲ್ಲಿ 2 ಎಕರೆ 6 ಗುಂಟೆ ಜಮೀನನ್ನು ಸ್ಮಶಾನಭೂಮಿಗೆ ಮೀಸಲಿಡಲಾಗಿದೆ. ಕಳೆದ 25ಕ್ಕೂ ಹೆಚ್ಚಿನ ವರ್ಷಗಳಿಂದ ಬೆಕ್ಕೇರಿ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆಂದು ಗ್ರಾಮದಲ್ಲಿ ರಿ.ಸ.ನಂ 226ರಲ್ಲಿ ಜಮೀನು ಗುರುತಿಸಲಾಗಿದೆ. ಜತೆಗೆ ಪಹಣಿಪತ್ರದಲ್ಲಿ ಸ್ಮಶಾನಭೂಮಿ ಎಂದು ನಮೂದಿಸಲಾಗಿದೆ. ಆದರೆ, ಗ್ರಾಮದಲ್ಲಿ ನಿಗದಿತ ಸ್ಥಳದಲ್ಲಿ ಸ್ಮಶಾನಭೂಮಿಯೇ ಇಲ್ಲ. ಬೆಕ್ಕೇರಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯಸಂಸ್ಕಾರವನ್ನು ಬೇರೆ ಸ್ಥಳದಲ್ಲಿ ಮಾಡಲಾಗುತ್ತಿದೆ. ಅಲ್ಲದೇ ಇನ್ನೂ ಹೆಣಗಳನ್ನು ಹಳ್ಳದ ದಡದಲ್ಲಿ ಸುಡಲಾಗುತ್ತಿದೆ. ಇದರಿಂದಾಗಿ ಸರ್ಕಾರ ಸ್ಮಶಾನಭೂಮಿ ಎಂದು 2 ಎಕರೆ 6 ಗುಂಟೆ ಜಾಗವನ್ನು ನಿಗದಿಪಡಿಸಿದ್ದರೂ ಗ್ರಾಮಸ್ಥರು ಅಲೆದಾಡುವಂತಾಗಿದೆ.
BELAGAVI: ಸ್ವಪಕ್ಷದಲ್ಲಾದ ಪಿತೂರಿ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ ಸಂದೇಶ ರವಾನಿಸಿದ್ದು ಯಾರಿಗೆ?
ಬೆಕ್ಕೇರಿ ಗ್ರಾಮದ ರಿ.ಸ.ನಂ 266ರಲ್ಲಿರುವ ಸ್ಮಶಾನಭೂಮಿಯನ್ನು ಹುಡುಕಿ ಕೊಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇದೀಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಮೇಟ್ಟಿಲೇರಿದ್ದಾರೆ. ಬೆಕ್ಕೇರಿ ಗ್ರಾಮದಲ್ಲಿ ಎರಡು ಸ್ಮಶಾನಭೂಮಿಗಳಿದ್ದು, ರಿ.ಸ.ನಂ 1ರಲ್ಲಿ 2 ಎಕರೆ 30 ಗುಂಟೆ ಇದ್ದು ಅದರಲ್ಲಿ ಈಗಾಗಲೇ ಶವಸಂಸ್ಕಾರ ಮಾಡಲಾಗುತ್ತಿದೆ. ಮತ್ತೊಂದು ರಿ.ಸ.ನಂ 266ರಲ್ಲಿ 2 ಎಕರೆ 6 ಗುಂಟೆ ಜಮೀನಿದ್ದು, ಈ ಕುರಿತು ಸ್ಮಶಾನಭೂಮಿ ಎಂದು ಕಂದಾಯ ಇಲಾಖೆಯಲ್ಲಿ ದಾಖಲಾಗಿದೆ. ಜತೆಗೆ ಬೆಕ್ಕೇರಿ ಗ್ರಾಪಂ ಸುಪರ್ದಿಯಲ್ಲಿದೆ. ಆದರೆ ಕಳೆದ 25 ವರ್ಷಗಳಿಂದ ಸಾರ್ವಜನಿಕರಿಗಾಗಿ ನಿಗದಿಪಡಿಸಲಾಗಿರುವ ರಿ.ಸ.ನಂ 266ರಲ್ಲಿ ಸ್ಮಶಾನಭೂಮಿ ಇದುವರೆಗೆ ಬಳಕೆಯಾಗಿಲ್ಲ. ಆದ್ದರಿಂದ ಈ ಜಮೀನು ಎಲ್ಲಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಅಲ್ಲದೇ ಬೆಕ್ಕೇರಿ ಗ್ರಾಮ ದೊಡ್ಡದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸವಾಗಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟಲ್ಲಿ ಶವಸಂಸ್ಕಾರ ಮಾಡಲು ತೀವ್ರ ತೊಂದರೆ ಆಗುತ್ತಿದೆ. ಈಗಾಗಲೇ ಉಪಯೋಗಿಸುತ್ತಿರುವ ಸ್ಮಶಾನ ಭೂಮಿಯಲ್ಲಿ ಹೆಣಗಳ ಸುಡಲಿಕ್ಕೆ ಅವಕಾಶ ಇಲ್ಲ. ಗ್ರಾಮದ ಹೊರವಲಯದಲ್ಲಿರುವ ಹಳ್ಳದ ದಡದಲ್ಲಿಯೇ ಸುಡಲಾಗುತ್ತಿದೆ ಎಂದು ಗ್ರಾಮಸ್ಥರ ಅಳಲಾಗಿದೆ.
ಗ್ರಾಪಂ ಜಾಣ ಕುರುಡು ಪ್ರದರ್ಶನ:
ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿನ 2 ಎಕರೆ 6 ಗುಂಟೆ ಸ್ಮಶಾನಭೂಮಿಯನ್ನು ಅದೇ ಗ್ರಾಮದಲ್ಲಿರುವ ಗ್ರಾಪಂ ಸುಪರ್ದಿಗೆ ನೀಡಲಾಗಿದೆ. ಆದರೆ, ಕಳೆದ 25ಕ್ಕೂ ಹೆಚ್ಚು ವರ್ಷ ಸಾರ್ವಜನಿಕರ ಉಪಯೋಗಕ್ಕಾಗಿ ನಿಗದಿಪಡಿಸಲಾಗಿರುವ ಸ್ಮಶಾನಭೂಮಿ ಸಂರಕ್ಷಣೆ ಕಾರ್ಯ ಮಾಡಿಲ್ಲ. ಸ್ಮಶಾನಭೂಮಿ ಸದ್ಬಳಕೆ ಆಗದಿರಲು ಗ್ರಾಪಂ ಅಧಿಕಾರಿ ಹಾಗೂ ಆಡಳಿತ ಮಂಡಳಿಯ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಉದ್ಭವವಾಗಿದೆ.
BELAGAVI: ರಾಯಣ್ಣ ಭಾವಚಿತ್ರ ಹರಿದ ಕಿಡಿಗೇಡಿಗಳು; ರೊಚ್ಚಿಗೆದ್ದ ರಾಯಣ್ಣ ಅಭಿಮಾನಿಗಳಿಂದ ಟಯರ್‌ಗೆ ಬೆಂಕಿ!
ಬೆಕ್ಕೇರಿ ಗ್ರಾಮದಲ್ಲಿ ಎರಡು ಸ್ಮಶಾನಭೂಮಿಗಳಿವೆ. ಒಂದರಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ರಿ.ನಂ. 266ರಲ್ಲಿ ಸ್ಮಶಾನಭೂಮಿಗಾಗಿಯೇ ಜಮೀನು ನಿಗದಿಪಡಿಸಲಾಗಿದೆ. ಆದರೆ, ಇದುವರೆಗೂ ಈ ಸ್ಮಶಾನಭೂಮಿ ಎಲ್ಲಿದೆ ಎಂಬುವುದು ಗ್ರಾಮಸ್ಥರಿಗೆ ಗೊತ್ತೇ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಸ್ಮಶಾನಭೂಮಿ ಹುಡುಕಿಕೊಡುವ ಜತೆಗೆ ಬೇಲಿ ಹಾಕಿ ಸಂರಕ್ಷಣೆ ಮಾಡಬೇಕು ಅಂತ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ತಿಳಿಸಿದ್ದಾರೆ.
ಸ್ಮಶಾನಭೂಮಿ ಒತ್ತುವರಿ ಮಾಡುವುದಾಗಲಿ, ಅನ್ಯ ಕಾರ್ಯಕ್ಕೆ ಉಪಯೋಗಿಸುವಂತಿಲ್ಲ. ಯಾರಾದರೂ ಸ್ಮಶಾನಭೂಮಿ ಒತ್ತುವರಿ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ಆಯಾ ಗ್ರಾಮ ಪಂಚಾಯತಿಯವರು ಸಂರಕ್ಷಣೆ ಮಾಡಬೇಕು. ಬೆಕ್ಕೇರಿ ಗ್ರಾಮದ ಸ್ಮಶಾನಭೂಮಿ ಒತ್ತುವರಿ ತೆರವುಗೊಳಿಸಲು ತಹಸೀಲ್ದಾರ್ ಸೂಚನೆ ನೀಡಲಾಗುವುದು ಅಂತ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.