ಮಂಗಳೂರು (ಆ.21): ಮಂಗಳೂರು ಮಹಾನಗರ ಪಾಲಿಕೆ ಇದರ ಸುರತ್ಕಲ್ ವಲಯ ಕಚೇರಿಯನ್ನು ಶನಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, ಸುರತ್ಕಲ್‌ನಲ್ಲಿ ಹೈಟೆಕ್ ಆಗಿರುವ ವಿಭಾಗೀಯ ಕಚೇರಿ ಪ್ರಾರಂಭಗೊಂಡಿದೆ. ಇದಕ್ಕಾಗಿ ಪಾಲಿಕೆ ಮೇಯರ್ ಸಹಿತ ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಜನರು ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ಬಳಸಿಕೊಳ್ಳಲು ಇದು ನೆರವಾಗಲಿದೆ ಎಂದು ಶುಭ ಹಾರೈಸಿದರು.
ಮಂಗಳೂರಲ್ಲಿ ಮತ್ತೆ ಕೃತಕ ‘ಜಲಪ್ರಳಯ’: ನರಕಯಾತನೆ ಪಟ್ಟ ಜನತೆ
ಮಂಗಳೂರು(Mangaluru) ಉತ್ತರ ಶಾಸಕ ಡಾ.ಭರತ್ ಶೆಟ್ಟಿ(Bharath Shetty)ಮಾತನಾಡಿ, ಸುರತ್ಕಲ್(Suratkal) ವಲಯ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾರಿಗೂ ಕಾಯದೆ ಟೋಕನ್ ಪಡೆದು ಸುಗಮವಾಗಿ ಸೇವೆ ಪಡೆದುಕೊಳ್ಳಬಹುದು. ಸ್ಥಳೀಯ ಕಾರ್ಪೋರೇಟರ್‌ಗಳು, ಅಧಿಕಾರಿಗಳು ಇಲ್ಲಿ ಸದಾಕಾಲ ಲಭ್ಯರಿರಲಿದ್ದು ಜನರು ಒಳ್ಳೆಯ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಸುರತ್ಕಲ್‌ನಲ್ಲಿ ಬಹುಕಾಲದ ಬೇಡಿಕೆಯಾದ ವಲಯ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ಜನರು ಮಂಗಳೂರಿಗೆ ಅಲೆದಾಡುವುದು ತಪ್ಪಲಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿಮಾತನಾಡಿ, ಈ ಭಾಗದ ಜನರ ಬಹುಕಾಲದ ಬೇಡಿಕೆ ನೆರವೇರಿದೆ. ಇದಕ್ಕಾಗಿ ನಗರ ಪಾಲಿಕೆ ವತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜನರಿಗೆ ಸುಲಭವಾಗಿ ಎಲ್ಲ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಈ ಕಚೇರಿ ನೆರವಾಗಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸುಧೀರ್ ಶೆಟ್ಟಿಕಣ್ಣೂರು, ಕಾರ್ಪೋರೇಟರ್‌ಳಾದ ನಯನ ಕೋಟ್ಯಾನ್, ಶ್ವೇತ ಪೂಜಾರಿ, ಭರತ್‌ರಾಜ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಇದ್ದರು.
ಶಾಸಕ ಡಾ.ಭರತ್ ಶೆಟ್ಟಿಕಚೇರಿಯಲ್ಲಿ ಸಾವರ್ಕರ್ ಫೋಟೋ ವಿವಾದ!
ಮಂಗಳೂರಿನ ಸುರತ್ಕಲ್‌ನಲ್ಲಿ ಶನಿವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್(Sunil Kumar) ಉದ್ಘಾಟಿಸಿದ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್‌ರ ಫೋಟೋ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸುರತ್ಕಲ್ ವಲಯ ಕಚೇರಿಯು ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿಅವರ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ನೂತನ ವಲಯ ಕಚೇರಿಯಲ್ಲಿ ಇರುವ ಶಾಸಕ ಡಾ.ಭರತ್ ಶೆಟ್ಟಿಅವರು ಕೊಠಡಿಯಲ್ಲಿ ಸಾವರ್ಕರ್ ಅವರ ಫೋಟೋ ಹಾಕಲಾಗಿದೆ. ನೂತನ ಕಚೇರಿ ಉದ್ಘಾಟನೆ ವೇಳೆ ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು ಪುಷ್ಪಾರ್ಚನೆ ನೆರವೇರಿಸಿ ಗೌರವ ನಮನ ಸಲ್ಲಿಸಿದ್ದಾರೆ.
Mangaluru: ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ಹೆಸರು: ಕಾಂಗ್ರೆಸ್ ತೀವ್ರ ಆಕ್ಷೇಪ, ಹೋರಾಟದ ಎಚ್ಚರಿಕೆ
ಸರ್ಕಾರಿ ಕಚೇರಿಯಲ್ಲಿ ಈ ರೀತಿ ಸಾವರ್ಕರ್‌ರ ಫೋಟೋ ಅಳವಡಿಕೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿರೋಧ ಕಾಣಿಸತೊಡಗಿದೆ. ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಡಾ.ಭರತ್ ಶೆಟ್ಟಿ,‘ದೇಶದ ಸಂಸತ್ತಿನಲ್ಲೇ ವೀರ ಸಾವರ್ಕರ್‌ರ ಫೋಟೋ ಅಳವಡಿಸಲಾಗಿದೆ. ಹೀಗಾಗಿ ಇಲ್ಲಿ ಹಾಕಲು ನಾವು ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲ. ಯಾವ ಕೋಣೆಯಲ್ಲಿ ಯಾರ ಫೋಟೋ ಹಾಕಬೇಕು ಎನ್ನುವುದು ಅವರವರಿಗೆ ಬಿಟ್ಟವಿಚಾರ. ನಾವು ರಾಷ್ಟ್ರದ್ರೋಹಿಗಳ ಫೋಟೋ ಹಾಕಿಲ್ಲ, ದೇಶಕ್ಕಾಗಿ ಪ್ರಾಣ ಕೊಟ್ಟವರ ಫೋಟೋ ಹಾಕಿದ್ದೇವೆ. ಸಾವರ್ಕರ್ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ’ ಎಂದಿದ್ದಾರೆ.