ರಾಜ್ಯದಲ್ಲಿ 31 ಮತ್ಸ್ಯ ದರ್ಶಿನಿ ಹೋಟೆಲ್, ಮಲ್ಪೆಗೆ ಬರಲಿದೆ ತೇಲುವ ಜೆಟ್ಟಿ..!

By Kannadaprabha News  |  First Published Nov 22, 2019, 12:00 PM IST

ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶುದ್ಧ ಮೀನೂಟದ ‘ಮತ್ಸ್ಯ ದರ್ಶಿನಿ’ ಹೊಟೇಲ್‌ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ 11 ಕೋಟಿ ರು. ನಿಗದಿ ಮಾಡಲಾಗಿದೆ. ಮಂಗಳೂರು ಮತ್ತು ಮಲ್ಪೆಯಲ್ಲಿ ತೇಲುವ ಜೆಟ್ಟಿನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಚೆನ್ನೈ ಐಐಟಿಯಿಂದ ತಾಂತ್ರಿಕ ವರದಿ ಕೇಳಿದ್ದೇವೆ. 15 ದಿನದೊಳಗೆ ವರದಿ ಕೈಸೇರಲಿದೆ. ಪ್ರತಿ ತೇಲುವ ಜೆಟ್ಟಿಗೆ 6.50 ಕೋಟಿ ರು. ಖರ್ಚಿನ ಅಂದಾಜು ಹಾಕಲಾಗಿದೆ ಎಂದು ಸಚಿವ ಕೋಟ ತಿಳಿಸಿದ್ದಾರೆ.


ಮಂಗಳೂರು(ನ.22): ಕಡಲು ಮತ್ತು ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಮೀನುಗಾರಿಕಾ ನೀತಿಯ ಕರಡು ಈಗಾಗಲೇ ಸಿದ್ಧಗೊಂಡಿದೆ. ಮುಂದಿನ 2 ವಾರದೊಳಗೆ ಮೀನುಗಾರರೊಂದಿಗೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು. ಬಳಿಕ ಸಮಗ್ರ ನೀತಿಯ ಸಾಧಕ, ಬಾಧಕಗಳನ್ನು ಪರಿಗಣಿಸಿ ಅಂತಿಮವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

Tap to resize

Latest Videos

undefined

ಫೋನ್ ಕಾಲ್‌ನಿಂದ ಮುರಿದು ಬಿದ್ದ ಮದುವೆ..!

ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಮೀನು ಮರಿಗಳ ಉತ್ಪಾದನೆ, ಮೀನು ಸಾಗಾಟ, ಕಡಲ ಮೀನುಗಾರಿಕೆಗೆ ಮೂಲಸೌಕರ್ಯ ಅಭಿವೃದ್ಧಿ, ದೋಣಿಗಳ ತಂಗುದಾಣ, ಜೆಟ್ಟಿಗಳ ನಿರ್ಮಾಣ, ಯಾಂತ್ರೀಕೃತ ದೋಣಿಗಳ ಅಗತ್ಯತೆಗಳು, ಮೀನುಗಾರರ ಬದುಕಿನ ಭದ್ರತೆ, ರಾಜ್ಯದ ಮೀನುಗಾರರ ಮೇಲೆ ಬೇರೆ ರಾಜ್ಯಗಳ ಕಿರುಕುಳ, ಮೀನುಗಾರಿಕೆ ವ್ಯವಸ್ಥೆ ಹೇಗಿರಬೇಕು ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ಸಮಗ್ರ ನೀತಿ ಜಾರಿಗೊಳಿಸಲಾಗುವುದು ಎಂದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯದ ಮೀನು ಮರಿ ಕೇಂದ್ರಗಳ ಉನ್ನತೀಕರಣ ಯೋಜನೆಯನ್ನು (ಮೀನು ಮರಿಗಳ ಉತ್ಪಾದನೆಗಾಗಿ) 473 ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಇದರ ವಿಸ್ತೃತ ಯೋಜನಾ ವರದಿಯಲ್ಲಿ ನಾರಾಯಣಪುರ ಮೀನುಮರಿ ಉತ್ಪಾದನಾ ಕೇಂದ್ರದ ಉನ್ನತೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೋಟ ತಿಳಿಸಿದರು.

3ನೇ ಹಂತದ ಜೆಟ್ಟಿ: ಮಂಗಳೂರಿನಲ್ಲಿ 3ನೇ ಹಂತದ ಜೆಟ್ಟಿನಿರ್ಮಾಣಕ್ಕೆ 22 ಕೋಟಿ ರು. ವೆಚ್ಚದ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಇದಕ್ಕೆ 2-3 ವಾರದೊಳಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗಲಿದೆ ಎಂದಿದ್ದಾರೆ.

ಮೀನುಗಾರರಿಗೆ ಟೆಬ್ಮಾಶಿಪ್‌ ಹೊಣೆ: ಮಲ್ಪೆಯಲ್ಲಿ ಟೆಬ್ಮಾಶಿಪ್‌ ಯಾರ್ಡ್‌ ನಿರ್ಮಾಣ ಮಾಡಿದ್ದರೂ ನೆನೆಗುದಿಗೆ ಬಿದ್ದಿದೆ. ಅದರ ನಿರ್ವಹಣೆ ಹೊಣೆಗಾರಿಕೆಯನ್ನು ಮೀನುಗಾರರಿಗೇ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ 10 ಕೋಟಿ ರು. ವೆಚ್ಚದಲ್ಲಿ ಮಲ್ಪೆ ಜೆಟ್ಟಿವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದಿದ್ದಾರೆ.

ಹೆಜಮಾಡಿ ಬಂದರು ಶೀಘ್ರ:

ಕಳೆದ ಮೂರು ದಶಕಗಳ ಬೇಡಿಕೆಯಾಗಿರುವ ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಮುಂದಿನ 15 ದಿನದೊಳಗೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ರೂಪಕ್ಕೆ ಬರಲಿದೆ. ಬಳಿಕ ಈ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಜನವರಿ ಅಂತ್ಯದೊಳಗೆ ಶಿಲಾನ್ಯಾಸವನ್ನೂ ನೆರವೇರಿಸಲಿದ್ದೇವೆ ಎಂದು ಸಚಿವ ಕೋಟ ಭರವಸೆ ನೀಡಿದ್ದಾರೆ.

ಮೈಸೂರು: ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ, BJP ಕಾರ್ಯಕರ್ತನಿಂದ ಅವಮಾನ

ಉಡುಪಿಯ ಕೋಡಿ ಕನ್ಯಾನದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಸಿಆರ್‌ಝಡ್‌ನಿಂದ ನಿರಕ್ಷೇಪಣಾ ಪತ್ರ ಪಡೆಯಲಾಗುವುದು. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ)ಕ್ಕೆ ಅಗತ್ಯವಿರುವ ಅಫಿದವಿತ್‌ ನೀಡಿ ಯೋಜನೆ ಆರಂಭಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ. ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಈ ಹಿಂದೆ ನಿರ್ಮಿಸಲಾಗಿರುವ ಡಯಾಫ್ರಾಮ್‌ ವಾಲ್‌ ಕುಸಿದಿದ್ದು, ಮರು ನಿರ್ಮಾಣ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಈ ಹಿಂದಿನ ಕಾಮಗಾರಿ ಕಳಪೆಯಾಗಿರುವುದಕ್ಕೆ ಕಾರಣ ಯಾರು ಎನ್ನುವುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದ್ದು, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಡುಪಿ ಜಿಲ್ಲೆಯ ಹಂಗಾರಕಟ್ಟೆಮತ್ತು ಕೋಡಿಬೆಂಗ್ರೆಯಲ್ಲಿ ಬ್ರೇಕ್‌ವಾಟರ್‌ ನಿರ್ಮಾಣಕ್ಕೆ ಪೂರ್ವಭಾವಿ ಅಧ್ಯಯನಗಳನ್ನು ಕೈಗೊಂಡು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೋಟ ಹೇಳಿದರು.

31 ಮತ್ಸ್ಯದರ್ಶಿನಿ ಹೊಟೇಲ್‌

ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶುದ್ಧ ಮೀನೂಟದ ‘ಮತ್ಸ್ಯ ದರ್ಶಿನಿ’ ಹೊಟೇಲ್‌ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ 11 ಕೋಟಿ ರು. ನಿಗದಿ ಮಾಡಲಾಗಿದೆ. ಮೊದಲ ಹಂತದಲ್ಲಿ 31 ಕಡೆಗಳಲ್ಲಿ ಈ ಹೊಟೇಲ್‌ಗಳನ್ನು ಆರಂಭಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಆರಂಭದಲ್ಲಿ ಮಂಗಳೂರು, ಬೆಂಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಡುಪಿ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಹಾಸನ, ಕಲಬುರ್ಗಿ, ಮೈಸೂರು, ರಾಮನಗರಗಳಲ್ಲಿ ಮತ್ಸ್ಯ ದರ್ಶಿನಿ ಹೊಟೇಲ್‌ಗಳನ್ನು ತೆರೆಯಲಾಗುವುದು. ಇವುಗಳನ್ನು ಮಾದರಿ ಹೊಟೇಲ್‌ಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದೇವೆ. ಬೆಲೆಯೂ ಜನರಿಗೆ ಕೈಗೆಟುಕುವಂತಿರುತ್ತದೆ ಎಂದವರು ವಿವರಿಸಿದರು. ಈ ಮತ್ಸ್ಯದರ್ಶಿನಿ ಕೇಂದ್ರಗಳಲ್ಲಿ ಅಗತ್ಯ ಇರುವೆಡೆ, ಮೀನುಗಾರರಿಗೆ ಧಕ್ಕೆಯಾಗದಂತೆ ಮೀನು ಮಾರಾಟ ಕೇಂದ್ರಗಳನ್ನೂ ತೆರೆಯುವ ಉದ್ದೇಶ ಹೊಂದಿರುವುದಾಗಿಯೂ ಅವರು ಹೇಳಿದರು.

ಬರಲಿದೆ ತೇಲುವ ಜೆಟ್ಟಿ

ಮಂಗಳೂರು ಮತ್ತು ಮಲ್ಪೆಯಲ್ಲಿ ತೇಲುವ ಜೆಟ್ಟಿನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಚೆನ್ನೈ ಐಐಟಿಯಿಂದ ತಾಂತ್ರಿಕ ವರದಿ ಕೇಳಿದ್ದೇವೆ. 15 ದಿನದೊಳಗೆ ವರದಿ ಕೈಸೇರಲಿದೆ. ಪ್ರತಿ ತೇಲುವ ಜೆಟ್ಟಿಗೆ 6.50 ಕೋಟಿ ರು. ಖರ್ಚಿನ ಅಂದಾಜು ಹಾಕಲಾಗಿದೆ. ಇದು ಹೊಸ ಪರಿಕಲ್ಪನೆಯಾಗಿರುವ ಕಾರಣ ಬೇರೆ ರಾಜ್ಯಗಳಲ್ಲಿರುವ ತೇಲುವ ಜೆಟ್ಟಿಗಳ ಅಧ್ಯಯನ ಮಾಡಲು ಅಧಿಕಾರಿಗಳ ತಂಡವನ್ನು ಕಳುಹಿಸಿ, ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

click me!