ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು! ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ

Published : Jul 05, 2026, 08:36 AM IST
Govt School

ಸಾರಾಂಶ

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪಾಸಾದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಸೂಕ್ತ ವ್ಯವಸ್ಥೆ, ಪಠ್ಯಪುಸ್ತಕಗಳು ಮತ್ತು ಶಿಕ್ಷಕರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಉಳಿದವರು ಕನ್ನಡ ಮಾಧ್ಯಮದಲ್ಲಿಯೇ ಮುಂದುವರಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಚಂದ್ರು ಕೊಂಚಿಗೇರಿ

ವಿಜಯನಗರ: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಪಾಸಾದ 30 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದಕ್ಕೆ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಬಾಗಿಲು ತಟ್ಟುತ್ತಿದ್ದಾರೆ!

ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಮಕ್ಕಳಿಗೆ ಪಠ್ಯ- ಪುಸ್ತಕಗಳು ಲಭಿಸಿಲ್ಲ, ಪಾಠ ಮಾಡಲು ಶಿಕ್ಷಕರೂ ಬಾರದೇ ಖಾಲಿ ಗೋಡೆ ನೋಡಿ ನೋಡಿ ಬಸವಳಿದ್ದು, ಪಾಲಕರು ಅನಿವಾರ್ಯವಾಗಿ ಸಾಲ ಸೋಲ ಮಾಡಿ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿದೆ. ಗ್ರಾಮೀಣ ಭಾಗದ ಬಡವರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಆರಂಭವಾದ ಶಾಲೆಗಳಲ್ಲಿ 7ನೇ ತರಗತಿ ಪಾಸ್‌ ಆಗಿರುವ 30 ಸಾವಿರ ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಶಿಕ್ಷಣ ಮಂತ್ರಿಯೇ ಇಲ್ಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಈ ವರೆಗೂ ಶಿಕ್ಷಣ ಸಚಿವರೇ ಇಲ್ಲ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಈವರೆಗೂ ಸರ್ಕಾರ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮದ 8ನೇ ತರಗತಿ ಆರಂಭಿಸುವ ಆದೇಶವನ್ನು ಮಾಡಿಲ್ಲ. ಪಠ್ಯ-ಪುಸ್ತಕವಿಲ್ಲ, ಬೋಧಿಸುವ ಶಿಕ್ಷಕರೂ ಇಲ್ಲ. ಆಯಾ ಶಾಲೆಯ ಶಿಕ್ಷಕರೇ ತಮ್ಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಜತೆ ಕೂಡ್ರಿಸಿ ಕನ್ನಡದಲ್ಲಿ ಇವರಿಗೂ ಪಾಠ ಮಾಡುತ್ತಿದ್ದರಿಂದ ರಾಜ್ಯದ 30 ಸಾವಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಧಿ ಇಲ್ಲದೇ 8ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಕೆಲವೆಡೆ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 8ನೇ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಸ್ಥಿತಿವಂತ ಪಾಲಕರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಕದ ತಟ್ಟುವಂತಾಗಿದೆ. ಉಳಿದಂತೆ ಬಡ ಮಕ್ಕಳು ಇದೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.

ನಮ್ಮ ಮಕ್ಕಳಿಗೆ ತಿಂಗಳೂ ಕಳೆದರೂ ಸರಿಯಾಗಿ ಪಾಠ ಪ್ರವಚನವಿಲ್ಲ. ಪಠ್ಯಪುಸ್ತಕಗಳಿಲ್ಲ. ವಿಧಿ ಇಲ್ಲದೇ ಕನ್ನಡ ಮಾಧ್ಯಮದ 8ನೇ ತರಗತಿ ಮಕ್ಕಳೊಂದಿಗೆ ಕನ್ನಡ ಪಾಠ ಕೇಳುತ್ತಿದ್ದಾರೆ. ಸರ್ಕಾರ ಈ ಕುರಿತು ಬೇಗನೆ ನಿರ್ಧಾರ ಪ್ರಕಟಿಸಲಿ ಎಂದು ಮಾಗಳ ಗ್ರಾಮದ ನಿವಾಸಿ ಈಟಿ ಕೋಟೆಪ್ಪ ಆಗ್ರಹಿಸಿದ್ದಾರೆ.

ಸರ್ಕಾರದ ಆದೇಶ ಬಂದಿಲ್ಲ ಎಂದ ಅಧಿಕಾರಿ

7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪಾಸ್‌ ಆಗಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿ ಆರಂಭಿಸಲು ಸರ್ಕಾರದ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬರುವವರೆಗೂ ಆಯಾ ಗ್ರಾಮದ ಕನ್ನಡ ಮಾಧ್ಯಮದ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಹೋಗುವಂತೆ ಸೂಚನೆ ನೀಡಲಾಗಿದೆ ಎಂದು ಹೂವಿನಹಡಗಲಿಯ  ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ಎ.ಕೋಟೆಪ್ಪ ಹೇಳುತ್ತಾರೆ.  

PREV
Read more Articles on
click me!

Recommended Stories

Abhimanyu : ಮರದ ದಿಮ್ಮಿ ಸಾಗಿಸುವಾಗ ದಸರಾ ಆನೆ ಅಭಿಮನ್ಯು ದಂತ ಭಗ್ನ!
ಜಾಕ್‌ವೆಲ್‌ ಮೂಲಕ ಹಿರಣ್ಯಕೇಶಿ ನದಿಯಿಂದ 33 ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ