
ಮಡಿಕೇರಿ (ಜು.5): ಕೊಡಗಿನ ಕುವರ ಎಂದೇ ಕರೆಯಿಸಿಕೊಳ್ಳುವ ಮೈಸೂರು ದಸರಾದ ಅಂಬಾರಿ ಹೊತ್ತುಕೊಳ್ಳುವ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.
ಮರದ ದಿಮ್ಮಿ ಅಥವಾ ಕಠಿಣವಾದ ವಸ್ತುವಿಗೆ ಬಡಿದು ದಂತಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಪಶು ವೈದ್ಯರು ಆನೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಭಿಮನ್ಯು ಆರೋಗ್ಯವಾಗಿದ್ದು, ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮತ್ತೆ ದಂತ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಆನೆ ಇದೀಗ ಮೈಸೂರಿನ ಸರಗೂರಿನಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ.
ಅರ್ಜುನ ಬಳಿಕ ನಾಡದೇವತೆ ಚಾಮುಂಡೇಶ್ವರಿಯನ್ನ ವಿಶ್ವದರ್ಶನ ಮಾಡಿಸುವ ಜವಾಬ್ದಾರಿ ಅಭಿಮನ್ಯು ಹೊತ್ತಿದ್ದಾನೆ.
ಅಭಿಮನ್ಯು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಮತ್ತಿಕೋಡು ಶಿಬಿರದಲ್ಲಿ ಪಳಗಿಸಲಾಯ್ತು. ಸದ್ಯ ಈಗ 60 ವರ್ಷದ ಹಿರಿಯ. ವಯಸ್ಸಾಗಿರುವುದರಿಂದ ಸಹಜವಾಗಿ ದಂತ ದುರ್ಬಲಗೊಂಡಿರುತ್ತವೆ. ಹೀಗಾಗಿ ದಂತ ಭಗ್ನವಾಗಿದೆ ಎನ್ನಲಾಗಿದೆ.