
ಬೆಳಗಾವಿ: ರೈತರ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಹಾಗೂ ಅಂತರ್ಜಲಮಟ್ಟ ವೃದ್ಧಿಸುವ ಉದ್ದೇಶದಿಂದ ಹಿರಣ್ಯಕೇಶಿ ನದಿಯಿಂದ ಹುಕ್ಕೇರಿ ತಾಲೂಕಿನ 22 ಹಾಗೂ ನೆರೆಯ ತಾಲೂಕುಗಳ 11 ಸೇರಿ ಒಟ್ಟು 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ನಿಖಿಲ್ ಕತ್ತಿ ಚಾಲನೆ ನೀಡಿದರು.
ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ನಿರ್ಮಿಸಿರುವ ಜಾಕ್‌ವೆಲ್‌ಗಳ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಕೃಷಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನ ಕಾಪಾಡಲು ಮತ್ತು ಅಂತರ್ಜಲ ಮರುಪೂರಣಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ಹೇಳಿದರು.
ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಗೆ ಆದ್ಯತೆ ನೀಡಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಸರ್ಕಾರದಿಂದ ಜಾಕ್‌ವೆಲ್ ವಿದ್ಯುತ್ ಬಿಲ್ ಮೊತ್ತ ಬಾಕಿಯಿದ್ದರೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ನೀರು ಹರಿಸುವ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ಶ್ರೀ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಪರಿಶೀಲನೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಖಾನೆಯ ನೂತನ ಆಡಳಿತ ಮಂಡಳಿಯಿಂದ ನಿಯಮಾನುಸಾರ ದಾಖಲೆಗಳ ಸಲ್ಲಿಕೆ ಹಾಗೂ ಅಗತ್ಯ ಪ್ರಕ್ರಿಯೆಗಳ ಅನುಸರಣೆಯಲ್ಲಿ ಕೆಲವು ತಾಂತ್ರಿಕ ಲೋಪಗಳಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಸಂಕೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಮಾತನಾಡಿ, ತಾತ್ಕಾಲಿಕ ವ್ಯವಸ್ಥೆಯಾಗಿ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಹೆರಿಗೆ ತಜ್ಞರನ್ನು ಅಗತ್ಯವಿರುವ ದಿನಗಳಲ್ಲಿ ಸಂಕೇಶ್ವರ ಆಸ್ಪತ್ರೆಗೆ ನಿಯೋಜಿಸಲಾಗುವುದು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಶಾಶ್ವತವಾಗಿ ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ಅಡ್ಡಮತದಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ವಿಪ್‌ಗೆ ಅನುಗುಣವಾಗಿ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಲಾಗಿದ್ದು, ಪಕ್ಷದ ಶಿಸ್ತಿಗೆ ಬದ್ಧವಾಗಿ ನಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಪ್ರಶಾಂತ ಪಾಟೀಲ, ರೋಹನ ನೇಸರಿ, ನಾಗೇಶ ಸಂಕಣ್ಣವರ, ದೀಪಕ್ ಬಿಶೆ, ಶಂಕರ ಹೆಬ್ಬಾಳೆ, ವಿಜಯ ಜರಳಿ, ಚೇತನ ಬಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಗುತ್ತಿಗೆದಾರ ಬಸವರಾಜ ಗಂಗಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.