ಮಾಹೆಯ ಮೂವರು ವಿದ್ಯಾ​ರ್ಥಿ​ಗಳು ಆಸ್ಪ​ತ್ರೆಗೆ ದಾಖ​ಲು

By Kannadaprabha NewsFirst Published Mar 14, 2020, 8:07 AM IST
Highlights

ಮಣಿ​ಪಾ​ಲದ ಮಾಹೆ ವಿ.ವಿ.ಯ 3 ಮಂದಿ ವಿದ್ಯಾರ್ಥಿಗಳು ಶಂಕಿತ ಕೊರೋನಾ ವೈರಸ್‌ ಪೀಡಿತರಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ಕೊರೋನಾ ವೈರಸ್‌ ಸೊಂಕು ಇಲ್ಲ ಎಂಬುದು ದೃಢವಾಗಿದೆ. ಇನ್ನೊಬ್ಬರ ಪ್ರಯೋಗಾಲಯದ ವರದಿಗೆ ಕಾಯಲಾಗುತ್ತಿದೆ.

ಉಡುಪಿ(ಮಾ.14): ಮಣಿ​ಪಾ​ಲದ ಮಾಹೆ ವಿ.ವಿ.ಯ 3 ಮಂದಿ ವಿದ್ಯಾರ್ಥಿಗಳು ಶಂಕಿತ ಕೊರೋನಾ ವೈರಸ್‌ ಪೀಡಿತರಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ಕೊರೋನಾ ವೈರಸ್‌ ಸೊಂಕು ಇಲ್ಲ ಎಂಬುದು ದೃಢವಾಗಿದೆ. ಇನ್ನೊಬ್ಬರ ಪ್ರಯೋಗಾಲಯದ ವರದಿಗೆ ಕಾಯಲಾಗುತ್ತಿದೆ.

ಇಬ್ಬರು ವಿದ್ಯಾರ್ಥಿಗಳು ಗುರುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರೆ, ಒಬ್ಬ ವಿದ್ಯಾರ್ಥಿ ಶುಕ್ರವಾರ ಮುಂಜಾನೆ ದಾಖಲಾಗಿದ್ದಾನೆ. ಅವರೆಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ನಾನ್ ಮನೆಗೆ ಬರೋದಿಲ್ಲ, ಚೀನಾದಲ್ಲೇ ಕುಳಿತು ಕರೋನಾಕ್ಕೆ ಚಾಲೆಂಜ್ ಹಾಕಿದ ಕನ್ನಡಿಗ!

ಗುರುವಾರ ಸಂಜೆ ದಾಖಲಾಗಿದ್ದ ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಅದೇ ದಿನ ಸಂಜೆ ಶಿವಮೊಗ್ಗದ ಸರ್ಕಾರಿ ಪ್ರಯೋಗಾಲಯಕ್ಕೆ ಕಳಹಿಸಲಾಗಿದ್ದು, ಅದರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿಲ್ಲ. ಇನ್ನೊಬ್ಬ ವಿದ್ಯಾರ್ಥಿ ಶುಕ್ರವಾರ ಮುಂಜಾನೆ ದಾಖಲಾಗಿದ್ದು, ಆತನ ಪ್ರಯೋಗಾಲಯದ ವರದಿ ಶನಿ​ವಾ​ರ ಲಭ್ಯವಾಗಲಿದೆ.

ಈ ಶಂಕಿತ ವಿದ್ಯಾರ್ಥಿಗಳಲ್ಲಿ ಆಂಧ್ರ ಪ್ರದೇಶದ ವಿದ್ಯಾರ್ಥಿ ಅಮೆರಿಕಾಕ್ಕೆ ಮತ್ತು ಕೇರಳದ ವಿದ್ಯಾರ್ಥಿ ಮಲೇಶಿಯಾ ಹೋಗಿ ಕಳೆದ ವಾರ ಮಣಿಪಾಲಕ್ಕೆ ಹಿಂತಿರುಗಿದ್ದರು. ಬಂದ ಒಂದೆರಡು ದಿನಗಳಲ್ಲಿ ಶೀತ, ಕೆಮ್ಮು, ಎದೆನೋವು, ಜ್ವರ ಪೀಡಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಚಿಕಿತ್ಸೆ ಆಸ್ಪತ್ರೆಗೆ ಬಂದ ಅವರನ್ನು ತಕ್ಷಣ, ಕೊರೊನಾ ಚಿಕಿತ್ಸೆಗಾಗಿಯೇ ವಿಶೇಷವಾಗಿ ಸಿದ್ದಪಡಿಸಲಾಗಿರುವ ಪ್ರತ್ಯೇಕ (ಐಸೋಲೆಟೆಡ್‌) ವಾರ್ಡುಗಳಿಗೆ ಸ್ಥಳಾಂತರಿಸಲಾಗಿತ್ತು.

ವಿದ್ಯಾರ್ಥಿ ಪ್ರತ್ಯೇಕ ವಾರ್ಡ್‌ಗೆ ದಾಖ​ಲು:

ದುಬೈ ಮೂಲದ ಇನ್ನೋರ್ವ ವಿದ್ಯಾರ್ಥಿ ರಜೆಯಲ್ಲಿ ಮನೆಗೆ ಹೋಗಿದ್ದು, ಮರಳಿ ಮಣಿಪಾಲಕ್ಕೆ ಬಂದಿದ್ದಾರೆ. ಅವರೂ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದು, ಅವರನ್ನೂ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ.

ಈ ವಾರ್ಡುಗಳಿಗೆ ತಜ್ಞ ವೈದ್ಯರು ಮತ್ತು ನಿಯೋಜಿತ ದಾದಿಯರನ್ನು ಮಾತ್ರ ಪ್ರವೇಶ ನೀಡಲಾಗಿದೆ. ವಾರ್ಡುಗಳ ಸಮೀಪಕ್ಕೂ ಯಾರೂ ಸುಳಿಯದಂತೆ ಕಾವಲು ಹಾಕಲಾಗಿದೆ. ದಾಖಲಾಗಿರುವ ಶಂಕಿತ ರೋಗಿಗಳ ಜ್ವರ, ಶೀತ, ಎದೆನೋವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಲವಲವಿಕೆಯಿಂದಿದ್ದಾರೆ ಎಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕೊರೋ​ನಾ ಇಲ್ಲ:

ಉಡುಪಿ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡಿಗೆ ಇದುವರೆಗೆ 5 ಮಂದಿ ಶಂಕಿತ ರೋಗಿಗಳು ದಾಖಲಾಗಿದ್ದು, ಅವರಲ್ಲಿ 4 ಮಂದಿಗೆ ಕೊರೊನಾ ಸೋಂಕು ಇಲ್ಲದಿರುವುದು ಸಾಬೀತಾಗಿದೆ. ಕಸ್ತೂರ್ಬಾ ಆಸ್ಪತ್ರೆಗೆ 4 ಮಂದಿ ದಾಖಲಾಗಿದ್ದು, ಅವರಲ್ಲಿ 3 ಮಂದಿಗೆ ಸೊಂಕು ಇಲ್ಲ ಎಂಬುದು ಸಾಬೀತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 9 ಮಂದಿ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 7 ಮಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನಾ ವೈರಸ್‌ ಸೋಂಕು ಪತ್ತೆಯಾಗಿಲ್ಲ.

ಶಿವಮೊಗ್ಗದ ವೃದ್ಧ ಮಹಿಳೆಗೆ ಮತ್ತೆ ಪರೀಕ್ಷೆ

ಸೋಮವಾರ ಶಿವಮೊಗ್ಗ ಜಿಲ್ಲೆಯ ಸಾಗರದ, ವಿದೇಶಕ್ಕೆ ಹೋಗಿ ಬಂದ ಒಬ್ಬ ವಯೋವೃದ್ಧ ಮಹಿಳೆ ಕೂಡ ಜ್ವರ, ಎದೆನೋವಿನ ಕಾರಣಕ್ಕೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲ ದ್ರವವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅವರಿಗೆ ಕೊರೋನಾ ವೈರಸ್‌ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಆದರೆ ಶುಕ್ರವಾರ ಅವರ ಅನಾರೋಗ್ಯ ತೀವ್ರಗೊಂಡಿರುವುದರಿಂದ ಶುಕ್ರವಾರ ಮತ್ತೆ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ವರದಿ ಲಭ್ಯವಾಗಲಿದೆ.

ಜಪಾನಿ ಹಡಗಿನಲ್ಲಿದ್ದ ಯುವಕ ಆಸ್ಪತ್ರೆಗೆ...

ಕೊರೋನಾ ಸೋಂಕಿನ ಕಾರಣಕ್ಕೆ ಜಪಾನಿ ಹಡಗಿನಲ್ಲಿ ಕೆಲವು ದಿನಗಳ ಕಾಲ ನಿರ್ಬಂಧಿತನಾಗಿದ್ದ ಉಡುಪಿ ಜಿಲ್ಲೆಯ ಶಿರ್ವದ 37 ವರ್ಷದ ಯುವಕ ಊರಿಗೆ ಮರಳಿದ್ದು, ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಗಂಟಲ ದ್ರವವನ್ನೂ ಕೊರೋನಾ ವೈರಸ್‌ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅವರು ಜಪಾನಿ ಹಡಗಿನಲ್ಲಿ ಉದ್ಯೋಗಿಯಾಗಿದ್ದು, ಕೊರೋನಾ ಸೋಂಕು ಇಲ್ಲದ ಕಾರಣಕ್ಕೆ ಬಿಡುಗಡೆಗೊಂಡು, ದುಬೈಗೆ ಹೋಗಿ ಭಾರತಕ್ಕೆ ಮರಳಿದ್ದಾರೆ. ಆತನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲದಿದ್ದರೂ, ಭೇದಿ ಮತ್ತು ಹೊಟ್ಟೆನೋವಿನಿಂದ ನರಳುತ್ತಿದ್ದು, ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದು, ಅಲ್ಲಿ ಪ್ರತ್ಯೇಕ ವಿಶೇಷ ವಾರ್ಡಿನಲ್ಲಿ ದಾಖಲಿಸಲಾಗಿದೆ.

click me!