Upper Krishna Project: ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ: ಸಚಿವ ಕಾರಜೋಳ

By Kannadaprabha News  |  First Published Dec 22, 2021, 10:56 AM IST

*   ಸದನದಲ್ಲಿ ಕೊಪ್ಪಳ ಜಿಲ್ಲೆಯ ವಿಷಯಗಳ ಚರ್ಚೆ
*   ಶಾಸಕ ಅಮರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಕಾರಜೋಳ
*   ಕೋವಿಡ್‌ನಿಂದ ಅನುದಾನ ಕಡಿತ
 


ಕೊಪ್ಪಳ(ಡಿ.22):  ಕೃಷ್ಣಾ ಮೇಲ್ದಂಡೆ ಯೋಜನೆಯ(Upper Krishna Project) 3ನೇ ಹಂತದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು(Koppal Lift Irrigation Scheme) ಅಂದಾಜು 8860 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ವರೆಗೆ 2715 ಕೋಟಿ ವೆಚ್ಚ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಪ್ರೆಷರ್‌ ಪೈಪ್‌ಲೈನ್‌ ಡಿಸ್ಟ್ರಿಬ್ಯೂಷನ್‌ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ 77 ಕೆರೆ ತುಂಬಿಸಿ, ಹನಿ ನೀರಾವರಿ ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ(Belagavi Session) ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ(Amaregoda Patil Bayyapur) ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಇದು ಪ್ರಮುಖ ಏತ ನೀರಾವರಿ ಯೋಜನೆಯಾಗಿದೆ. ನಾರಾಯಣಪುರ ಜಲಾಶಯದ(Narayanapura Dam) ಹಿನ್ನೀರಿನ ಆರ್‌.ಎಲ್‌. 487 ಮೀಟರಿನಿಂದ ಆರ್‌.ಎಲ್‌. 660 ಮೀಟರ್‌ ವರೆಗೆ ಎರಡು ಹಂತಗಳಲ್ಲಿ ನೀರು ಲಿಫ್ಟ್‌ ಮಾಡಿ ಹನಿ ನೀರಾವರಿ ಪದ್ಧತಿ ಮೂಲಕ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಒಟ್ಟು 2.77 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tap to resize

Latest Videos

ಕೊಪ್ಪಳ ಏತ ನೀರಾವರಿ ಈಗ ಕುಡಿಯುವ ನೀರಿಗೆ ಸೀಮಿತ: ರೈತರಿಗೆ ಬಿಗ್ ಶಾಕ್!

ಈಗಾಗಲೇ ಯೋಜನೆಯ ಮೊದಲನೇ ಮುಖ್ಯ ಸ್ಥಾವರ, ಎರಡನೇ ಮುಖ್ಯ ಸ್ಥಾವರ ಹಾಗೂ 220 ಕೆವಿ ಪವರ್‌ ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಅಚ್ಚುಕಟ್ಟು ವ್ಯಾಪ್ತಿಯ 77 ಕೆರೆ ತುಂಬಿಸುವ 3 ಪ್ಯಾಕೇಜ್‌ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ವಿದ್ಯುತ್‌(Electricity) ಪೂರೈಕೆಗೆ ಕೋರಲಾಗಿದ್ದು ಅವರು ಡಿಮ್ಯಾಂಡ್‌ ನೋಟ್‌ ಕಳಿಸಿದ ಕೂಡಲೇ . 6 ಕೋಟಿ ಪಾವತಿಸಿ, ಟ್ರಯಲ್‌ ರನ್‌ ಮಾಡಲಾಗುವುದು ಎಂದು ಕಾರಜೋಳ ತಿಳಿಸಿದ್ದಾರೆ.

ಈ ಯೋಜನೆಗೆ 8860 ಕೋಟಿ ಅಂದಾಜಿಸಿದ್ದು ಈ ವರೆಗೆ 2715 ಕೋಟಿ ವೆಚ್ಚ ಮಾಡಲಾಗಿದೆ. ಆಲಮಟ್ಟಿಜಲಾಶಯವನ್ನು 519ರಿಂದ 524 ಮೀಟರಿಗೆ ಎತ್ತರಿಸಿದಾಗ ಶೇಖರಣೆಯಾಗುವ ನೀರಿನ ಪ್ರಮಾಣದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ನೀರು ಬಳಕೆ ಮಾಡಲು ಯೋಜಿಸಲಾಗಿದೆ. ಜಲಾಶಯದ ಎತ್ತರಿಸುವಿಕೆಯು ಕೃಷ್ಣಾ ನ್ಯಾಯಾಧಿಕರಣ 2ರ ಅಂತಿಮ ತೀರ್ಪಿನ ಗೆಜೆಟ್‌ ಅಧಿಸೂಚನೆಗೆ ಒಳಪಟ್ಟಿದ್ದು ತೀರ್ಪು ಕೇಂದ್ರ ಸರ್ಕಾರದ(Central Government) ಅಧಿಸೂಚನೆಯಾಗಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಸರ್ಕಾರವು ನೀಡಿರುವ ಆಡಳಿತಾತ್ಮಕ ಅನುಮೋದನೆ ಮೇರೆಗೆ ಪೂರ್ವಸಿದ್ಧತೆಯಾಗಿ 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕಾರಜೋಳ ಉತ್ತರಿಸಿದ್ದಾರೆ.

Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಗುತ್ತಿಗೆದಾರರಿಗೆ ಕಂಪ್ಲೀಷನ್‌ ಪ್ರಮಾಣ ಪತ್ರ ನೀಡಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಮುನ್ನವೇ ಯಂತ್ರೋಪಕರಣ ದುರಸ್ತಿಗೆ ಬಂದಿವೆ. ಇಲ್ಲಿ ಗುತ್ತಿಗೆದಾರರು ಹೇಳಿದಂತೆ ಅಧಿಕಾರಿಗಳು ಕೇಳುತ್ತಿರುವುದರಿಂದ ಬಾಲವೇ ನಾಯಿಯನ್ನು ಅಲ್ಲಾಡಿಸಿದಂತೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕೋವಿಡ್‌ನಿಂದ ಅನುದಾನ ಕಡಿತ

ಕೋವಿಡ್‌(Covid-19) ಲಾಕ್‌ಡೌನ್‌ನಿಂದ(Lockdown) ಆರ್ಥಿಕ ಸಮಸ್ಯೆಯಾಗಿ ಅನುದಾನ(Grants) ಕಡಿತ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಸದನದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ತಮ್ಮ ಕ್ಷೇತ್ರದಲ್ಲಿ 7 ಶಾದಿ ಮಹಲ್‌ಗಳು ಮಂಜೂರಾಗಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಆಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಹಲವಾರು ಅನುದಾನಗಳನ್ನು ಕಡಿತಗೊಳಿಸಲಾಗಿದೆ ಎಂದಿದ್ದಾರೆ. ಆದರೂ ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
 

click me!