ರಾಜ್ಯದಲ್ಲಿ ಈಗಾಗಲೇ ಅನೇಕ ತರಗತಿಗಳಿಗೆ ಶಾಲೆ - ಕಾಲೇಜುಗಳನ್ನು ಆರಂಭ ಮಾಡಲಾಗಿದೆ. ಆದರೆ ಇದೀಗ ವಸತಿ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಆತಂಕದ ವಿಚಾರ ಹೊರ ಬಂದಿದೆ. ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಮಡಿಕೇರಿ (ಜ.28): ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿಸಿದೆ.
ಕಳೆದ ವಾರವಷ್ಟೇ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪೋಷಕರನ್ನು ಕರೆಸಿಕೊಂಡು ಆ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಜ್ವರ ಗುಣಮುಖವಾಗದ ಕಾರಣ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣ ಪ್ರಾಂಶುಪಾಲ ಲೋಕೇಶ್ ಅವರು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿ ಕಾಲೇಜಿನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಿದ್ದು, ಈ ವೇಳೆ 24 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.
undefined
'ಬೆಂಗ್ಳೂರಲ್ಲಿ ನಿತ್ಯ 20 ಸಾವಿರ ಜನರಿಗೆ ಕೊರೋನಾ ಲಸಿಕೆ' .
ಜ.11ರಿಂದ ಕಾಲೇಜು ಆರಂಭವಾಗಿತ್ತು. ಈ ವೇಳೆ ಕೋವಿಡ್ ನೆಗೆಟಿವ್ ವರದಿ ನೋಡಿಯೇ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಈ ಮಧ್ಯೆ, ಒಬ್ಬ ವಿದ್ಯಾರ್ಥಿ ಅನಾರೋಗ್ಯದ ಕಾರಣದಿಂದಾಗಿ ಒಮ್ಮೆ ಮನೆಗೆ ಹೋಗಿ ಬಂದಿದ್ದ. ಹೀಗಾಗಿ ಆ ವಿದ್ಯಾರ್ಥಿಗೆ ಕೊರೋನಾ ಸೋಂಕು ತಗುಲಿರಬಹುದು. ಆ ವಿದ್ಯಾರ್ಥಿಯಿಂದ ಇತರರಿಗೆ ಹಬ್ಬಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ವಸತಿ ಶಾಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಒಟ್ಟು 76 ವಿದ್ಯಾರ್ಥಿಗಳಿದ್ದು, 49 ಮಂದಿ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಇಬ್ಬರು ಹೆಣ್ಣು ಮಕ್ಕಳಿಗೆ ನೆಗಡಿಯ ಲಕ್ಷಣವಿದ್ದು, ಅವರನ್ನು ವಸತಿ ನಿಲಯದಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಆರೋಗ್ಯದಿಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ವಸತಿ ಕಾಲೇಜನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.