ಚಳ್ಳಕೆರೆ (ಅ.2) : ತಾಲೂಕಿನಾದ್ಯಂತ ಕಳೆದ ಆಗಸ್ಟ್, ಸೆಪ್ಟಂಬರ್‌ನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು, ಮಳೆಯಿಂದ ರೈತರಿಗೆ ನಿರೀಕ್ಷೆಗೂ ಮೀರಿದ ನಷ್ಟಉಂಟಾಗಿದೆ. ಸರ್ಕಾರ ರೈತರಿಗೆ ಬೆಳೆ ನಷ್ಟಪರಿಹಾರವನ್ನು ಹೆಕ್ಟೇರ್ ಬದಲಾಗಿ ಎಕರೆಗೆ ಕನಿಷ್ಠ 25 ಸಾವಿರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.
Haveri Floods: ಕೊಳೆಯುತ್ತಿರುವ ಬೆಳೆ, ದಿಕ್ಕು ತೋಚದಾದ ಬೆಳೆಗಾರರು
ಅವರು, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಮತ್ತು ರೈತರೊಂದಿಗೆ ನಡೆಸಿದ ಬೆಳೆ ಅಧ್ಯಯನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಯಾಗಿಲ್ಲ, ನೈಸರ್ಗಿಕ ವಿಪತ್ತಿನಿಂದ ನಷ್ಟಉಂಟಾದಲ್ಲಿ ರೈತರಿಗೆ ಪೂರ್ಣಪ್ರಮಾಣದ ಹಣವನ್ನು ಸರ್ಕಾರ ನೀಡಬೇಕು. ಪ್ರಸ್ತುತ ಸರ್ಕಾರದ ಪರಿಹಾರ ಮಾನದಂಡ ತೃಪ್ತಿಕರವಾಗಿಲ್ಲ. ಪ್ರತಿ ಹೆಕ್ಟೇರ್‌ಗೆ 25 ಸಾವಿರ ರು. ನೀಡಿದರೆ ರೈತನಿಗಾದ ನಷ್ಟಸರಿಹೊಂದುವುದಿಲ್ಲ. ಬೆಳೆ ವಿಮೆ ಪದ್ದತಿಯೂ ಸಹ ಅವೈಜ್ಞಾನಿಕವಾಗಿದೆ. ರೈತರ ಬೆಳೆ ನಷ್ಟಅಂದಾಜನ್ನು ಸೂಕ್ತ ರೀತಿಯಲ್ಲಿ ನಡೆಸಲಾಗುತ್ತಿಲ್ಲ. ಅಧಿಕಾರಿಗಳು ನೀಡುವ ವರದಿಗೂ ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಸವಿದೆ. ರೈತನ ಬೆಳೆಗೆ ನ್ಯಾಯಯುತ ಬೆಲೆ ದೊರಕಿದಲ್ಲಿ ಸರ್ಕಾರದ ಮುಂದೆ ಎಂದಿಗೂ ಕೈಚಾಚಲಾರ. ಆದ್ದರಿಂದ ರೈತರ ಪರಿಸ್ಥಿತಿ ಕುರಿತು ಅವಲೋಕಿಸಿ ಪರಿಹಾರ ನೀಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, 5100 ಹೆಕ್ಟೇರ್ ಈರುಳ್ಳಿ, 860 ಹೆಕ್ಟೇರ್ ಟಮೋಟೊ, 240 ಹೆಕ್ಟೇರ್ ದಾಳಿಂಬೆ ಹಾಗೂ ಇನ್ನಿತರ ಬೆಳೆಗಳು ಹಾನಿಗೊಳಗಾಗಿವೆ. ಇಲಾಖೆ ವತಿಯಿಂದ ಈಗಾಗಲೇ ಸರ್ಕಾರಕ್ಕೆ ಸರ್ಕಾರದ ನಿರ್ದೇಶನದಂತೆ ವರದಿ ಕಳುಹಿಸಿದ್ದು, ವರದಿ ಬಂದ ನಂತರ ಪರಿಹಾರವನ್ನು ವಿತರಿಸಲಾಗುವುದು ಎಂದರು.
Chikkaballapur Nandi Hill: ಮಳೆಗೆ ಮತ್ತೆ ನಂದಿ ಬೆಟ್ಟದ 3 ಕಡೆ ಗುಡ್ಡ ಕುಸಿತ
ಕೃಷಿ ಸಹಾಯಕ ಅಧಿಕಾರಿ ರವಿಕುಮಾರ್ ಮಾಹಿತಿ ನೀಡಿ, ಸರ್ಕಾರ ರೈತರಿಗೆ ತಮ್ಮ ಬೆಳೆ ವಿಮೆಯನ್ನು ದಾಖಲಿಸುವ ಕುರಿತು ಈಗಾಗಲೇ ಇ-ಕೆವೈಸಿಯಲ್ಲಿ ಮಾರ್ಗದರ್ಶನ ನೀಡಿದೆ. ಪ್ರತಿಯೊಬ್ಬ ರೈತರೂ ಇ-ಕೆವೈಸಿ ಮುಖಾಂತರ ತಮ್ಮ ಒಟ್ಟಾರೆ ನಷ್ಟವನ್ನು ನಮೂದಿಸಬಹುದಾಗಿದೆ. ಪ್ರಸ್ತುತ ತಾಲೂಕಿನಾದ್ಯಂತ ಕೃಷಿ ಬೆಳೆ ಹಾನಿಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀಕಂಠಮೂರ್ತಿ, ಎಂ.ಎನ್.ಚನ್ನಕೇಶವ, ಬೊಮ್ಮಣ್ಣ, ಓಬಯ್ಯ, ರಾಜಣ್ಣ, ನವೀನ್, ರತ್ನಮ್ಮ, ಜಯಮ್ಮ ಮುಂತಾದವರು ಉಪಸ್ಥಿತರಿದ್ದರು.