ಚಿತ್ರದುರ್ಗ (ಅ.2) : ಬಸವಕೇಂದ್ರ ಮುರುಘಾ ಮಠದ ವತಿಯಿಂದ ಪ್ರತಿ ವರ್ಷ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವ 9 ದಿನಗಳ ಕಾರ್ಯಕ್ರಮಕ್ಕೆ ಬದಲಾಗಿ ಕೇವಲ ಮೂರು ದಿನಗಳ ಸಾಂಕೇತಿಕ ಅಚರಣೆಗೆ ಸೀಮಿತವಾಗಿದೆ. ಶೂನ್ಯಪೀಠ ಪರಂಪರೆ ನೆಲೆಯಲ್ಲಿ ವಿಚಾರಗೋಷ್ಠಿಗಳು ನಡೆಯುತ್ತಿರುವುದರಿಂದ ಒಂದರ್ಥದಲ್ಲಿ ಮುರುಘಾ ಸಂಸ್ಕೃತಿ ಉತ್ಸವವಾಗಿ ಗೋಚರಿಸಿದೆ.
ಜೈಲಿನಿಂದಲೇ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶ್ರೀ ಅರ್ಜಿ
undefined
ಪ್ರತಿ ವರ್ಷ ನಡೆಯುತ್ತಿದ್ದ ಗಂಭೀರ ವಿಷಯಗಳ ಯಾವುದೇ ಗೋಷ್ಠಿಗಳಿಲ್ಲ. ಜನಪದ ಕಲಾ ತಂಡಗಳ ಮೆರವಣಿಗೆ ಇಲ್ಲ. ಮುರುಗಿ ಶಾಂತವೀರ ಶ್ರೀಗಳ ಭಾವಚಿತ್ರವಿಟ್ಟು ಶೂನ್ಯಪೀಠಾರೋಹಣ ನೆರವೇರಿಸಲಾಗುತ್ತಿದೆ. ಎಲ್ಲವೂ ಸರಳ, ಪಾರಂಪರಿಕ ಆಚರಣೆಗಳು ನಿಂತಿಲ್ಲವೆಂಬುದರ ಧ್ಯೋತಕವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿವೆ.
ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಉತ್ಸವ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಮಿತಿಯ ಗೌರವಾಧ್ಯಕ್ಷ ಡಾ. ಬಸವಕುಮಾರ ಸ್ವಾಮಿಗಳು ಅಕ್ಟೋಬರ್ ನಾಲ್ಕರಂದು ಬೆಳಗ್ಗೆ 8ಕ್ಕೆ ಕನಕಪುರ ಮರಳೇಗವಿಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮಿಗಳು ಬಸವತತ್ವ ಧ್ವಜಾರೋಹಣ ನೆರವೇರಿಸುವರು. ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇಳಕಲ್‌ನ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿಗಳು, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮಿಗಳು ಸಮ್ಮುಖ ವಹಿಸುವರು. ಖ್ಯಾತ ಸಂಶೋಧಕ ಡಾ. ಬಿ. ರಾಜಶೇಖರಪ್ಪನವರು ಶತಮಾನಗಳಿಂದ ಸಾಗಿಬಂದ ಶೂನ್ಯಪೀಠ ಪರಂಪರೆ ವಿಷಯ ಕುರಿತು ಉಪನ್ಯಾಸ ನೀಡುವರು ಎಂದರು.
5ರಂದು ಬೆಳಗ್ಗೆ 10.30ಗಂಟೆಗೆ ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಡಿವಾಳ ಗುರುಪೀಠದ ಬಸವಮಾಚಿದೇವ ಸ್ವಾಮಿಗಳು ಸಮ್ಮುಖ ವಹಿಸುವರು. ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿಗಳು, ಚಿದರವಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತಿರಿರುವರು. ಸಂಜೆ 5ಗಂಟೆಗೆ ಚಿತ್ರದುರ್ಗ ಕೋಟೆಯಲ್ಲಿರುವ ಮುರುಘಾಮಠದಲ್ಲಿ ಚಿತ್ರದುರ್ಗ ರಾಜವಂಶಸ್ಥರಿಂದ ಶ್ರೀಗಳಿಗೆ ಭಕ್ತಿ ಸಮರ್ಪಣೆ ಕಾರ‍್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಅಥಣಿ ಗಚ್ಚಿನಮಠದ ಶಿವಬಸವ ಗುರುಮುರುಘ ರಾಜೇಂದ್ರ ಸ್ವಾಮಿಗಳು ಉಪಸ್ಥಿತರಿರುವರು. ಬಸವತತ್ವ-ಸಾರ್ವಕಾಲಿಕ ಪ್ರಸ್ತುತತೆ ವಿಷಯ ಕುರಿತು ಬೆಂಗಳೂರಿನ ಡಾ. ಬೈರಮಂಗಲ ರಾಮೇಗೌಡ ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಗಾಯಕ ಅಂಬಯ್ಯನೂಲಿ, ರಾಯಚೂರು ಅವರಿಂದ ವಚನ ಸಂಗೀತವಿರುತ್ತದೆ.
ಪಲ್ಲಕ್ಕಿ ಉತ್ಸವ:
ಅಕ್ಟೋಬರ್ 6 ರÜಂದು ಬೆಳಗ್ಗೆ 10.30ಗಂಟೆಗೆ ಶೂನ್ಯಪೀಠ ಪರಂಪರೆಯ ಶ್ರೀ ಶಾಂತವೀರ ಸ್ವಾಮಿಗಳ ಭಾವಚಿತ್ರದೊಂದಿಗೆ ಪೀಠಾರೋಹಣ, ನಂತರ ಮಠದ ಆವರಣದಲ್ಲಿ ಅಲ್ಲಮಪ್ರಭು, ಬಸವಣ್ಣನವರ ಭಾವಚಿತ್ರ ಮತ್ತು ವಚನಕಟ್ಟುಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಉತ್ಸÊದÜ ಸಮಾರೋಪ ನಡೆಯಲಿದ್ದು, ಹೊಸದುರ್ಗ ಕುಂಚಿಟಿಗ ಗುರುಪೀಠದ ಡಾ. ಶಾಂತವೀರ ಸ್ವಾಮಿಗಳು ಸಮ್ಮುಖ ವಹಿಸುವರು. ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ತಿಪಟೂರು ಷಡಕ್ಷರಮಠದ ರುದ್ರಮುನಿ ಸ್ವಾಮಿಗಳು ಉಪಸ್ಥಿತರಿರುವರು. ಪ್ರಾಚೀನ ಮುರುಘಾ ಪೀಠಾಧೀಶರ ಸಾಹಿತ್ಯ ವಿಷಯ ಕುರಿತು ಸಾಹಿತಿ ಡಾ. ಬಿ.ನಂಜುಂಡಸ್ವಾಮಿ ಚಿಂತನೆ ನೀಡುವರು. ಅಂತಾರಾಷ್ಟ್ರೀಯ ಗಾಯಕ ಮೃತ್ಯುಂಜಯ ಶೆಟ್ಟರ್‌ರಿಂದ ವಚನ ಸಂಗೀತವಿರುತ್ತದೆ. ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಶ್ರೀಮಠದ ಶಾಖಾಮಠಗಳ ಪೂಜ್ಯರು ಹಾಗೂ ವಿವಿಧ ಸಮಾಜದ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಭಾಗವಹಿಸುವರ ಎಂದು ಶ್ರೀಗಳು ಹೇಳಿದರು.
'ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ'
ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವ ಗುರು ಮುರುಘ ರಾಜೇಂದ್ರ ಸ್ವಾಮಿಗಳು, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು, ನಿಪ್ಪಾಣಿ ವಿರಕ್ತಮಠದ ಬಸವಮಲ್ಲಿಕಾರ್ಜುನ ಸ್ವಾಮಿಗಳು, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮಿಗಳು, ಗುರುಮಠಕಲ್‌ನ ಖಾಸಾ ಮುರುಘಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ತಂಗನಹಳ್ಳಿ ಕಾಶಿಅನ್ನಪೂಣೇಶ್ವರಿ ಮಠದ ಬಸವಮಹಾಲಿಂಗ ಸ್ವಾಮಿಗಳು, ಹೊಳವನಹಳ್ಳಿ ಮಠದ ಬಸವಕಿರಣ ಸ್ವಾಮಿಗಳು, ಮೇದಾರ ಗುರುಪೀಠದ ಇಮ್ಮಡಿ ಬಸವಕೇತೇಶ್ವರ ಸ್ವಾಮಿಗಳು, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ, ಎಸ್‌ಜೆಎಂ ವಿದ್ಯಾಪೀಠದ ಕಾರ‍್ಯದರ್ಶಿ ಎಸ್.ಬಿ.ವಸ್ತ್ರದಮಠ್, ಹೆಚ್.ಆನಂದಪ್ಪ, ಎಸ್.ವಿ.ನಾಗರಾಜಪ್ಪ ಸಿದ್ದಾಪುರ, ಪಟೇಲ್ ಶಿವಕುಮಾರ್, ಡಿ.ಎಸ್. ಮಲ್ಲಿಕಾರ್ಜುನ್, ಕೆಇಬಿ ಷಣ್ಮುಖಪ್ಪ, ಜಿತೇಂದ್ರ, ಮರುಳಾರಾದ್ಯ, ಕೆ.ಎಂ.ವೀರೇಶ್, ಡಾ. ಬಿ. ರಾಜಶೇಖರಪ್ಪ, ದಯಾನಂದ್ ಇದ್ದರು.
ಮುಖ್ಯಾಂಶಗಳು