ಕಲಾವಿದರಿಗೆ ವೇದಿಕೆ ಕಲ್ಪಿಸುವ, ಕಲಾಭಿಮಾನಿಗಳ ಬಹು ನಿರೀಕ್ಷೆಯ 20ನೇ ‘ಚಿತ್ರಸಂತೆ’ಗೆ ಭಾನುವಾರ ಬೆಳಗ್ಗೆ ಚಾಲನೆ ಸಿಗಲಿದೆ. ಮನಸ್ಸಿಗೆ ಮುದ ನೀಡುವ ಕಲಾಕೃತಿಗಳನ್ನು ಖರೀದಿಸಲು ಸುವರ್ಣಾವಕಾಶ ಇಲ್ಲಿದೆ.
ಬೆಂಗಳೂರು (ಜ.08): ಕಲಾವಿದರಿಗೆ ವೇದಿಕೆ ಕಲ್ಪಿಸುವ, ಕಲಾಭಿಮಾನಿಗಳ ಬಹು ನಿರೀಕ್ಷೆಯ 20ನೇ ‘ಚಿತ್ರಸಂತೆ’ಗೆ ಭಾನುವಾರ ಬೆಳಗ್ಗೆ ಚಾಲನೆ ಸಿಗಲಿದೆ. ಮನಸ್ಸಿಗೆ ಮುದ ನೀಡುವ ಕಲಾಕೃತಿಗಳನ್ನು ಖರೀದಿಸಲು ಸುವರ್ಣಾವಕಾಶ ಇಲ್ಲಿದೆ. ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೂ ಅಪರೂಪದ ಕಲಾಕೃತಿಗಳ ವೀಕ್ಷಣೆ, ಖರೀದಿ ಮಾಡಬಹುದು. ಕುಟುಂಬ ಸಮೇತ ತೆರಳಿ ಜಾತ್ರೆಯ ಅನುಭವ ಪಡೆಯಲು ನಗರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಚಿತ್ರಸಂತೆಗೆ ಕಾಲ ಕೂಡಿ ಬಂದಿದೆ. ಇನ್ನೇಕೆ ತಡ ಕುಮಾರಕೃಪಾ ರಸ್ತೆ, ಗಾಂಧಿ ಭವನ ರಸ್ತೆ ಮತ್ತು ಕ್ರೆಸೆಂಟ್ ರಸ್ತೆಯತ್ತ ಹೆಜ್ಜೆ ಹಾಕಿ. ಕಲಾಕೃತಿಗಳ ಜೊತೆಗೆ ಸ್ಥಳದಲ್ಲೇ ತಮ್ಮ ಕಲಾಕೃತಿ ರಚಿಸಿಕೊಳ್ಳುವ ಅವಕಾಶವೂ ಸಿಗಲಿದೆ.
ನಿಸರ್ಗದ ರಮಣೀಯ ಸೌಂದರ್ಯ, ಇಷ್ಟದ ದೇವರು, ಗ್ರಾಮೀಣ ಜನಜೀವನ, ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳು, ಶಿಲಾಬಾಲಕಿಯರು, ಧುಮ್ಮಿಕ್ಕಿ ಹರಿಯುವ ಜಲಪಾತ, ಭೋರ್ಗರೆಯುವ ಕಡಲು, ಬಣ್ಣ ಬಣ್ಣದ ಹೂಗಳು, ಕಂಬಾರನ ಕೈಚಳಕ ಸೇರಿದಂತೆ ಥರಹೇವಾರಿ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದ್ದು, ಅವರವರ ಅಭಿರುಚಿಗೆ ತಕ್ಕುದಾದ ಆಯ್ಕೆಗೆ ಸಾಕಷ್ಟು ಅವಕಾಶವಿದೆ. ನೂರು ರುಪಾಯಿಯಿಂದ ಲಕ್ಷಾಂತರ ಮೌಲ್ಯದ ಕಲಾಕೃತಿಗಳೂ ಮಾರಾಟಕ್ಕಿವೆ.
8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ
ದೇಶ-ವಿದೇಶದ ಕಲಾವಿದರ ಆಗಮನ: ದೇಶ-ವಿದೇಶಗಳಿಂದ ಆಗಮಿಸುವ ನೂರಾರು ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ, ಮಾರಾಟ ಮಾಡಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಜಾರ್ಖಂಡ್, ಒಡಿಶಾ ಸೇರಿದಂತೆ ಹಲವು ರಾಜ್ಯಗಳ ಕಲಾವಿದರು ಆಗಮಿಸಲಿದ್ದಾರೆ. ಚಿತ್ರಕಲಾ ಪರಿಷತ್‌ನ ಕಲಾ ಗ್ಯಾಲರಿಗಳಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದರ ಕಲಾಕೃತಿಗಳ ಜೊತೆಗೆ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು, ತೊಗಲು ಬೊಂಬೆ ಮತ್ತಿತರ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂಗವಿಕಲರು ಮತ್ತು ಹಿರಿಯ ಕಲಾವಿದರಿಗೆ ಪರಿಷತ್‌ನ ಆವರಣದಲ್ಲೇ ಕಲಾಕೃತಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರಸಂತೆ ನಡೆಯುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಬಿಎಂಟಿಸಿ ಬಸ್‌ಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿವೆ. ಭಾರತ ಸೇವಾ ದಳದ ಆವರಣ, ರೇಸ್‌ಕೋರ್ಸ್ ರಸ್ತೆ, ಕ್ರೆಸೆಂಟ್ ರಸ್ತೆಯಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಮುಂದಿನ ಸಾಹಿತ್ಯ ಸಮ್ಮೇಳನ ಆತಿಥ್ಯಕ್ಕೆ ‘ಚಿನ್ನ’ದಂಥ ಪೈಪೋಟಿ!
ಮುಖ್ಯಮಂತ್ರಿ ಚಾಲನೆ: ಜ.8ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಖ್ಯಾತ ಕಲಾವಿದ ಪ್ರೊ.ಲಕ್ಷ್ಯ ಗೌಡ್ ವಿಶೇಷ ಆಹ್ವಾನಿತರಾಗಿದ್ದು, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.