Kannada sahitya sammelana: ಇಂಗ್ಲಿಷ್‌ ಮಾಧ್ಯಮದಿಂದ ಕನ್ನಡದ ಮಕ್ಕಳು ಪರಕೀಯ; ಶಿಕ್ಷಣ ತಜ್ಞರು

By Kannadaprabha NewsFirst Published Jan 8, 2023, 7:52 AM IST
Highlights

 ಇಂಗ್ಲಿಷ್‌ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡದ ಮಕ್ಕಳಿಗೇ ಕನ್ನಡ ಕಲಿಸಲು ಹೆಣಗಾಡುತ್ತಿರುವುದು, ದುಸ್ಥಿತಿಗೆ ತಲುಪಿರುವ ಕನ್ನಡದ ಶಾಲೆಗಳನ್ನು ಉಳಿಸುವುದು, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯದ ಗೊಂದಲ ಸೇರಿದಂತೆ ಒಟ್ಟಾರೆ ಕನ್ನಡ ನಾಡಿನಲ್ಲಿ ಕನ್ನಡಕ್ಕಾಗುತ್ತಿರುವ ಅನ್ಯಾಯ ಹಾಗೂ ಅದಕ್ಕಿರುವ ಪರಿಹಾರಗಳ ಬಗ್ಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಗೋಷ್ಠಿಯು ಬೆಳಕು ಚೆಲ್ಲಿತು.

ಬಸವರಾಜ ಹಿರೇಮಠ

ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ,

ಹಾವೇರಿ(ಜ.8): ಇಂಗ್ಲಿಷ್‌ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡದ ಮಕ್ಕಳಿಗೇ ಕನ್ನಡ ಕಲಿಸಲು ಹೆಣಗಾಡುತ್ತಿರುವುದು, ದುಸ್ಥಿತಿಗೆ ತಲುಪಿರುವ ಕನ್ನಡದ ಶಾಲೆಗಳನ್ನು ಉಳಿಸುವುದು, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯದ ಗೊಂದಲ ಸೇರಿದಂತೆ ಒಟ್ಟಾರೆ ಕನ್ನಡ ನಾಡಿನಲ್ಲಿ ಕನ್ನಡಕ್ಕಾಗುತ್ತಿರುವ ಅನ್ಯಾಯ ಹಾಗೂ ಅದಕ್ಕಿರುವ ಪರಿಹಾರಗಳ ಬಗ್ಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಗೋಷ್ಠಿಯು ಬೆಳಕು ಚೆಲ್ಲಿತು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ(Kannada sahitya sammelana)ನದ 2ನೇ ದಿನ ಶನಿವಾರ ಪ್ರಧಾನ ವೇದಿಕೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ನಮ್ಮ ಮಕ್ಕಳನ್ನು ಪರಕೀಯರನ್ನಾಗಿ ಮಾಡುತ್ತಿರುವ ಇಂಗ್ಲಿಷ್‌ ಮಾಧ್ಯಮ(English medium)ದ ಬಗ್ಗೆ ಇರುವ ಭ್ರಮೆಯನ್ನು ಮೊದಲು ತೊಲಗಿಸಬೇಕಿದೆ. ಇದರೊಂದಿಗೆ ಕನ್ನಡ ಮಾಧ್ಯಮ(Kannada medium)ಕ್ಕೆ ಕಾನೂನಿನ ಬಲ ತಂದುಕೊಡುವುದು ಹಾಗೂ ಕನ್ನಡದ ಬಗೆಗಿನ ವಿಧೇಯಕಗಳು, ನಿರ್ಧಾರಗಳನ್ನು ರಾಜ್ಯ ಸರ್ಕಾರ ಕಟ್ಟು ನಿಟ್ಟಾಗಿ ಜಾರಿಗೆ ತರುವ ಮೂಲಕ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ತರಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ಪ್ರತಿಪಾದಿಸಿದರು.

ಇಂದು ನುಡಿಜಾತ್ರೆ ಸಮಾರೋಪ; ಭಾಗಿಯಾಗಲಿರುವ ಸಿಎಂ, ಮಾಜಿ ಪ್ರಧಾನಿ ದೇವೇಗೌಡ

ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯ ಮತ್ತು ಬೋಧನೆ ಕುರಿತು ವಿಷಯ ಹಂಚಿಕೊಂಡ ಚಿಂತಕ ಡಾ.ಧನಂಜಯ್‌ ಕುಂಬ್ಳೆ, ಅನ್ಯ ಭಾಷೆಯ ಮೋಹದಿಂದ ನೆಲದ ಭಾಷೆಯನ್ನು ಶಿಕ್ಷಣದಲ್ಲಿ ತರಲು ಸಾಧ್ಯವಾಗುತ್ತಿಲ್ಲ. ಜಗದ ಭಾಷೆ ಜೊತೆಗೆ ನೆಲದ ಭಾಷೆ ಸಂಘರ್ಷ ಎದುರಿಸುವಂತಾಗಿದೆ. ಬರೀ ಪ್ರಾಥಮಿಕ ಮಾತ್ರವಲ್ಲದೇ ಉನ್ನತ ಶಿಕ್ಷಣದಲ್ಲೂ ಕನ್ನಡದ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಉನ್ನತ ಶಿಕ್ಷಣದಲ್ಲಿ ಕನ್ನಡ ಜಾರಿ ಮಾಡುವ ಕುರಿತು ಹತ್ತು ವರ್ಷಗಳಿಂದ ಬರೀ ಮಾತನಾಡುತ್ತಿದ್ದು ಅದಕ್ಕೆ ಬೇಕಾದ ಪೂರ್ವ ತಯಾರಿ, ಅನುಷ್ಠಾನ ಮಾಡುತ್ತಿಲ್ಲ. ನಮ್ಮಲ್ಲಿ ಈ ವಿಷಯದಲ್ಲಿ ಏತಕ್ಕೆ ಅಶಕ್ತತೆ, ದುರ್ಬಲತೆ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣದಲ್ಲಿ ಕನ್ನಡದವರೇ ಕನ್ನಡಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅದರಲ್ಲೂ ಎಂಜಿನಿಯರಿಂಗ್‌ ಪದವಿಯಲ್ಲಿ ಕನ್ನಡ ಹಾಸ್ಯಾಸ್ಪದವಾಗಿದೆ. ಕನ್ನಡದ ಅನ್ನ ಉಂಡುವರೇ ಕನ್ನಡ ಭಾಷೆಗೆ ಮೋಸ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣದ ಪಠ್ಯಕ್ರಮ ರಚಿಸುವಾಗಲೂ ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕನ್ನಡಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸುವ ರೀತಿಯಲ್ಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಮಿಳುನಾಡು, ಕೇರಳದಲ್ಲಿ ಇರುವ ಭಾಷಾ ಪ್ರೀತಿ ಕರ್ನಾಟಕದಲ್ಲಿ ಏಕಿಲ್ಲ ಎಂದು ಡಾ. ಧನಂಜಯ ಪ್ರಶ್ನಿಸಿದರು.

ಕನ್ನಡ ಭಾಷೆಯ ಮೇಲೆ ಇಂಗ್ಲಿಷ್‌ ಮಾಧ್ಯಮ ಬೀರುವ ಪರಿಣಾಮಗಳ ಕುರಿತು ಮಾತನಾಡಿದ ಹಿರಿಯ ಪ್ರಾಧ್ಯಾಪಕ ಡಾ.ಮಾಧವ ಪರಾಜೆ, ಕನ್ನಡ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುವಷ್ಟುಇಂಗ್ಲೀಷ ಮಾಧ್ಯಮದ ಪ್ರಭಾವ ಪಾಲಕರ ಮೇಲಾಗಿದೆ. ಕನ್ನಡ ಮಾಧ್ಯಕ್ಕೆ ಸೇರಿಸುವುದು ಅಪಮಾನ, ಗೌರವಕ್ಕೆ ಧಕ್ಕೆ ಬಂದಂತೆ ಎನ್ನುತ್ತಾರೆ. ಇಂಗ್ಲೀಷ ಮಾಧ್ಯಮ ಮಕ್ಕಳಿಗೆ ಸ್ವರ್ಗವನ್ನು ತೋರುತ್ತದೆ ಎಂಬ ಭ್ರಮಾಲೋಕ ಸೃಷ್ಟಿಯಾಗಿರುವುದು ಕನ್ನಡದ ಪಾಲಿಗೆ ದುರಂತವೇ ಸರಿ. ಇಂಗ್ಲಿಷ್‌ ಮಾಧ್ಯಮದ ಪೆಂಡಭೂತದಿಂದಾಗಿ ವರ್ಷದಿಂದ ವರ್ಷಕ್ಕೆ ಕನ್ನಡದ ಮಾಧ್ಯಮದ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇಂಗ್ಲಿಷ್‌ ಮಾಧ್ಯಮ ಮಕ್ಕಳನ್ನು ಪರಕೀಯರನ್ನಾಗಿ ಮಾಡಿದ್ದು, ಒಟ್ಟಾರೆ ಕನ್ನಡದ ಮಕ್ಕಳು ಅತಂತ್ರರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕನ್ನಡ ಶಾಲೆಗಳ ವಸ್ತುಸ್ಥಿತಿ ಬಗ್ಗೆ ಡಾ.ಎಚ್‌.ಎನ್‌. ಮುರಳೀಧರ(Dr. HN Murulidhar) ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ.ಎ. ಮುರಿಗೆಪ್ಪಇದ್ದರು. 

Kannada sahitya sammelana: ನುಡಿಜಾತ್ರೆಗೆ ನೆಂಟರು, ಸ್ನೇಹಿತರಿಗೆ ಫೋನ್‌ ಮಾಡಿ ಕರೆಸಿದ ಹಾವೇರಿ ಜನ!

ಯಂತ್ರ, ವ್ಯಾಪಾರ ಕೇಂದ್ರೀತ ಶಿಕ್ಷಣ

ಕನ್ನಡ ಮಾಧ್ಯಮದ ಬಗ್ಗೆ ನಿರಾಸಕ್ತಿ ಹಾಗೂ ಇಂಗೀಷ್‌ ಮಾಧ್ಯಮದ ಬಗ್ಗೆ ಆಸಕ್ತಿ ಉಂಟಾಗುತ್ತಿದ್ದು ಪರಕೀಯ ಭಾಷೆ ಅಪ್ಯಾಯಮಾನದತ್ತ ಸಾಗುತ್ತಿದೆ. ಪ್ರಸ್ತುತ ಮಾನವ ಕೇಂದ್ರೀತ ಶಿಕ್ಷಣದ ಬದಲು ಯಂತ್ರ ಹಾಗೂ ವ್ಯಾಪಾರ ಕೇಂದ್ರೀತ ಶಿಕ್ಷಣದತ್ತ ನಮ್ಮ ಸಮೂಹ ಸಾಗುತ್ತಿರುವುದು ಕನ್ನಡದ ಭವಿಷ್ಯದ ದೃಷ್ಟಿಯಿಂದ ಅಪಾಯ.

-ಡಾ.ಎಚ್‌.ಎನ್‌. ಮುರಳೀಧರ

click me!