
ಮಂಗಳೂರು (ಡಿ.31): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮೊಯ್ದೀನ್ ಕಮೀಜ್(25) ಬಂಧಿತ ಆರೋಪಿಯಾಗಿದ್ದಾನೆ. ಈತ ಗಲಭೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಂದೇಶ ಬಿತ್ತರಿಸುವ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂದು, ಪ್ರತಿಭಟನೆ ವೇಳೆ ಗಲಭೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಇದರಿಂದಾಗಿ ಇಬ್ಬರು ಮೃತಪಟ್ಟು, ಹಲವರು ಆಸ್ಪತ್ರೆ ಸೇರಿದ್ದರು. ಗಲಭೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಆರೋಪಿಗಳನ್ನು ಬಂಧಿಸುತ್ತಿದ್ದಾರೆ.
ಪ್ರಕರಣ ಸಂಖ್ಯೆ 43ಕ್ಕೇರಿಕೆ: ಡಿ.19ರ ಹಿಂಸಾಚಾರ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣಗಳ ಸಂಖ್ಯೆ 43ಕ್ಕೆ ತಲುಪಿದೆ. ಮಂಗಳೂರು ಉತ್ತರದಲ್ಲಿ 14, ದಕ್ಷಿಣ ಠಾಣೆಯಲ್ಲಿ 14, ಮಂಗಳೂರು ಪೂರ್ವದಲ್ಲಿ 3, ಉರ್ವದಲ್ಲಿ 2, ಮಂಗಳೂರು ಗ್ರಾಮಾಂತರ, ಕೊಣಾಜೆಯಲ್ಲಿ ತಲಾ ಒಂದು ಹಾಗೂ ಸೈಬರ್ ಕ್ರೈಂ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೀಗ ಗೋಲಿಬಾರ್‌ಗೆ ಸಂಬಂಧಿಸಿ ಸಿಐಡಿ ತನಿಖೆ ಆರಂಭಗೊಂಡಿರುವುದರಿಂದ ಸಿಐಡಿ ಪೊಲೀಸರು ಕೂಡ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸುವ ಸಂಭವ ಇದೆ. ಈ ಮಧ್ಯೆ, ಮಂಗಳೂರು ಪೊಲೀಸರು ನಡೆಸಿದ ತನಿಖೆಯನ್ನು ಸಿಐಡಿ ಪೊಲೀಸರು ಮುಂದು ವರಿಸಲಿದ್ದಾರೆ. ಸಿಐಡಿ ಎಸ್ಪಿ ರಾಹುಲ್ ನೇತೃತ್ವದ ಐವರು ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಇದಲ್ಲದೆ ಮಂಗಳೂರು ಸೈಬರ್ ಪೊಲೀಸರು ಸೈಬರ್ ಕ್ರೈಂ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.