ಚೋರನೋರ್ವ ಪೊಲೀಸ್ ಜೀಪನ್ನೇ ಕದ್ದೊಯ್ದ ಘಟನೆ ನಡೆದಿದೆ. ಬಳಿಕ ಪೊಲೀಸರು ಬೆನ್ನತ್ತಿ ಬಂದಿದ್ದನ್ನು ಕಂಡು ಜೀಪನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು [ಡಿ.31]: ಪೊಲೀಸರೆಂದರೆ ಕಳ್ಳರಿಗೆ ಸಿಂಹಸ್ವಪ್ನ. ಆದರೆ, ಇಲ್ಲೊಬ್ಬ ಪ್ರಳಯಾಂತಕ ಪೊಲೀಸರೇ ತಲೆಕೆರೆದುಕೊಳ್ಳುವಂತೆ ಕದ್ದು ನಾಪತ್ತೆಯಾಗಿದ್ದಾನೆ. ಆತನ ಕಿತಾಪತಿಯೇನೆಂದರೆ, ನಿಲ್ಲಿಸಿದ್ದ ಪೊಲೀಸ್ ಜೀಪ್ ಕದ್ದು, ಡ್ರೈವ್ ಮಾಡಿಕೊಂಡು ಹೋಗಿದ್ದ!
ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಚಿಕ್ಕಮಗಳೂರು ನಗರದ ಹೃದಯ ಭಾಗದಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಜೀಪ್ ‘ರಕ್ಷಾ-2’ರ ಚಾಲಕ ಅಶೋಕ್ ಅವರು ಜೀಪ್ ಅನ್ನು ನಿಲ್ಲಿಸಿ ಸಮೀಪದಲ್ಲಿರುವ ಮೆಡಿಕಲ್‌ಗೆ ಹೋಗಿದ್ದರು. ಇದೇ ವೇಳೆಗೆ ಚೋರ ಸಮೀಪದ ಅಂಗಡಿ ಮಳಿಗೆಯಲ್ಲಿದ್ದ ಸಿಸಿ ಟಿ.ವಿ. ಕ್ಯಾಮರಾವನ್ನು ನೋಡಿ, ಕೂಡಲೇ ತನ್ನ ಮುಖವನ್ನು ಮರೆಮಾಡಿಕೊಂಡು, ನೇರವಾಗಿ ಪೊಲೀಸ್ ಜೀಪ್ ಬಳಿ ಬಂದಿದ್ದಾನೆ.
ಅಷ್ಟಾಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಆತ ಜೀಪ್ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಇಲ್ಲಿನ ಕೆ.ಎಂ. ರಸ್ತೆಯಲ್ಲಿ ಕಡೂರು ಮಾರ್ಗವಾಗಿ ಸುಮಾರು 5 ಕಿ.ಮೀ. ದೂರದವರೆಗೆ ಜೀಪ್ ಚಾಲನೆ ಮಾಡಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೀಪ್ ಕಳುವಾದ ಘಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು ಆತನನ್ನು ಹಿಂಬಲಿಸಲಾರಂಭಿಸಿದರು. ಆತನ ಜಾಡು ಕಣ್ತಪ್ಪದಂತೆ ಎಚ್ಚರಿಕೆ ವಹಿಸಿದ ಪೊಲೀಸರು ಅವನನ್ನು ಶತಾಯಗತಾಯ ಹಿಡಿಯಲು ಹಿಂಬಾಲಿಸಿದರು. ಇದನ್ನು ಅರಿತ ಅವನು ತಾನು ಕದ್ದ ಪೊಲೀಸ್ ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ, ಕಾಡಿನೊಳಗೆ ತಲೆತಪ್ಪಿಸಿಕೊಂಡು ಬಚಾವಾಗಿದ್ದಾನೆ. ಈ ಪ್ರಚಂಡ ಕಳ್ಳನ ಪತ್ತೆಗೆ ಈಗ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೀಪು ಕಳ್ಳನ ಬಂಧನವಾದರೆ ಮಾತ್ರ ಆತನ ಹೆಸರು, ಹಿನ್ನೆಲೆ, ಜೀಪು ಕದ್ದ ಉದ್ದೇಶ ಎಲ್ಲವೂ ಬಯಲಾಗಲಿದೆ.