ಬಡವರ ಫ್ಲ್ಯಾಟ್ 4 ಮಹಡಿಗೆ ಸೀಮಿತಿ

By Kannadaprabha NewsFirst Published Dec 31, 2019, 10:16 AM IST
Highlights

ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಗೆ ಮಹಡಿಗಳನ್ನು ಸರ್ಕಾರ ಸೀಮಿತಗೊಳಿಸಲಾಗುತ್ತಿದೆ. 

ಬೆಂಗಳೂರು [ಡಿ.31]:  ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಯಲ್ಲಿ ಇನ್ನು ಮುಂದೆ ನಿರ್ಮಿಸುವ ವಸತಿ ಸಮುಚ್ಛಯಗಳನ್ನು4  ಮಹಡಿಗಿಂತ ಹೆಚ್ಚು ಎತ್ತರ ನಿರ್ಮಿಸದಿರಲು ಹಾಗೂ ಆರ್ಥಿಕ ಹಿಂದುಳಿದ ವರ್ಗದಲ್ಲಿ ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷದವರೆಗೆ ವಿಸ್ತರಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ನಗರದ ವಿವಿಧೆಡೆ ಆರ್ಥಿಕವಾಗಿ ಹಿಂದುಳಿದವರು ಹಾಗೂ ಮಧ್ಯಮ ವರ್ಗದವರಿಗಾಗಿ 1 ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಾಗಲೇ 28,574 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದು ಗುತ್ತಿಗೆದಾರರು ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಆದರೆ, ಪ್ರಸ್ತುತ ನಿರ್ಮಿಸುತ್ತಿರುವ ವಸತಿ ಸಮುಚ್ಛಯಗಳು ನೆಲಮಹಡಿ ಮತ್ತು 13 ಅಂತಸ್ತು ಎತ್ತರ ನಿರ್ಮಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ವಸತಿ ಸಮುಚ್ಛಯಗಳ ನಿರ್ವಹಣೆಗೆ ಬಡವರಿಗೆ ಸಮಸ್ಯೆಯಾಗಬಹುದು. ಹೀಗಾಗಿ ಇನ್ನು ಮುಂದೆ ನಿರ್ಮಿಸುವ ಮನೆಗಳನ್ನು ನೆಲಮಹಡಿ ಮತ್ತು ಮೂರು ಮಹಡಿಗೆ ಸೀಮಿತಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಅರ್ಜಿ ಸಲ್ಲಿಸುವವರ ವಾರ್ಷಿಕ ಆರ್ಥಿಕ ಆದಾಯ ಮಿತಿಯನ್ನು 87,500 ರು. ಬದಲಿಗೆ  3 ಲಕ್ಷ ರು. ವರೆಗೆ ಹೆಚ್ಚಳ ಮಾಡಲಾಗಿದೆ. ಬಡವರಿಗೆ ನೀಡುವ 1 ಬಿಎಚ್‌ಕೆ, 2 ಬಿಎಚ್‌ಕೆ ಮನೆ ನಿರ್ಮಿಸಲಾಗುತ್ತಿದೆ. ಇವುಗಳನ್ನು 14 ಅಂತಸ್ತು ನಿರ್ಮಾಣ ಮಾಡಿದರೆ ಲಿಫ್ಟ್‌ ಸೇರಿದಂತೆ ಸೇವೆಗಳ ನಿರ್ವಹಣಾ ಶುಲ್ಕ ಭರಿಸಲು ಬಡವರಿಗೆ ಕಷ್ಟವಾಗಲಿದೆ. ಹೀಗಾಗಿ ನೆಲಮಹಡಿ ಜತೆಗೆ 4 ಅಂತಸ್ತಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.

 ಕೈಗಾರಿಕಾ ವಿವಾದಗಳ ಕಾಯಿದೆಗೆ ತಿದ್ದುಪಡಿ

ರಾಜ್ಯದ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಗತ್ಯ ವಸ್ತುಗಳ ಉತ್ಪಾದನಾ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಣೆಗೆ 6 ತಿಂಗಳ ಕಾಲ ಯಾವುದೇ ಅಡಚಣೆ ಉಂಟು ಮಾಡಬಾರದು ಎಂದಿರುವ ನಿಯಮವನ್ನು 3 ವರ್ಷಗಳಿಗೆ ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಅಗತ್ಯ ವಸ್ತುಗಳ ಉತ್ಪಾದನೆ ವಲಯದಲ್ಲಿ ಗುರುತಿಸಲಾಗಿರುವ ಕಾರ್ಖಾನೆಗಳ ಉತ್ಪಾದನೆಗೆ ಅಡಚಣೆಯಾಗದಿರಲು ಕಾರ್ಮಿಕರು ಪ್ರತಿಭಟನೆ ಮಾಡುವುದು ಹಾಗೂ ಸೇವೆ ಬಹಿಷ್ಕರಿಸುವುದನ್ನು ನಿಷೇಧಿಸಲಾಗಿದೆ. ಕಾರ್ಮಿಕರು ತಮ್ಮ ಸಮಸ್ಯೆ ಬಗೆಹರಿಸಲು ಪ್ರಸ್ತಾಪಿಸಿದ ಆರು ತಿಂಗಳವರೆಗೆ ಆಡಳಿತ ಮಂಡಳಿಗೆ ಸಮಸ್ಯೆ ಬಗೆಹರಿಸಲು ಅವಕಾಶ ಇದೆ.

ಈ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಿ, ಮೂರು ವರ್ಷಗಳಿಗೊಮ್ಮೆ ಈ ಆದೇಶವನ್ನು ನವೀಕರಿಸಲು ಕೈಗಾರಿಕಾ ವಿವಾದಗಳ ಕಾಯಿದೆಗೆ ತಿದ್ದುಪಡಿ ತರಲು ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

click me!