ಶಿವಮೊಗ್ಗದಲ್ಲಿ ಮತ್ತೆರಡು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 34ಕ್ಕೇ ಏರಿಕೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.25): ಭಾನುವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಮತ್ತೆರಡು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 34 ಕ್ಕೆ ಏರಿದೆ.
ಭಾನುವಾರ ಕಂಡು ಬಂದ ಪ್ರಕರಣಗಳಲ್ಲಿ ಒಂದು ಪ್ರಕರಣ 74 ವರ್ಷದ ಪುರುಷ (ಪಿ-2088) ರಾಜಸ್ಥಾನದಿಂದ ಹಿಂದಿರುಗಿ ಕ್ವಾರಂಟೈನ್‌ಗೆ ಒಳಗಾಗಿದ್ದವರು. ಇನ್ನೊಂದು ಪ್ರಕರಣ ಪ್ರಥಮ ಸಂಪರ್ಕದಿಂದ ಬಂದಂತಾಗಿದೆ. ಪಿ- 808 ರಿಂದ ಸೋಂಕು ತಗುಲಿಸಿಕೊಂಡ 31 ವರ್ಷದ ಪುರುಷ (ಪಿ-2087) ವ್ಯಕ್ತಿಯಾಗಿದ್ದಾರೆ. ಇಬ್ಬರನ್ನು ಕೂಡ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟಿಎಚ್‌ಒ ತಂಡದಿಂದ ಕ್ವಾರಂಟೈನ್ ಪರಿಶೀಲನೆ
ಭದ್ರಾವತಿ: ತಾಲೂಕು ಆರೋಗ್ಯಾಧಿಕಾರಿ ನೇತೃತ್ವದ ತಂಡ ತಾಲೂಕಿನ ಹುಣಸೆಕಟ್ಟೆಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಕ್ವಾರಂಟೈನ್ ಪರಿಶೀಲನೆ ನಡೆಸಿತು.
ರಾಜ್ಯದಲ್ಲಿ ಮೊದಲ 1000 ಕೇಸ್‌ಗೆ 68 ದಿನ, ಈಗ 10 ದಿನ!
ಮಹಾರಾಷ್ಟ್ರದಿಂದ ಬಂದಿರುವ 18 ಜನರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಕೊನೆಯ ಹಂತದಲ್ಲಿ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕ್ವಾರಂಟೈನ್ ಸಿಬ್ಬಂದಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.