ಇಂದಿನಿಂದ ಮಂಗಳೂರಿನಿಂದ ವಿಮಾನಯಾನ ಸೇವೆ: ಇಲ್ಲಿದೆ ವೇಳಾಪಟ್ಟಿ

By Kannadaprabha NewsFirst Published May 25, 2020, 7:53 AM IST
Highlights

ದೇಶದೊಳಗಿನ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಬೆಂಗಳೂರು, ಮುಂಬೈ, ಚೆನ್ನೈಗೆ ವಿಮಾನ ಹಾರಾಟ ನಡೆಯಲಿದೆ. ಇಲ್ಲಿದೆ ವೇಳಾಪಟ್ಟಿ

ಮಂಗಳೂರು(ಮೇ 25): ದೇಶದೊಳಗಿನ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಬೆಂಗಳೂರು, ಮುಂಬೈ, ಚೆನ್ನೈಗೆ ವಿಮಾನ ಹಾರಾಟ ನಡೆಯಲಿದೆ.

ಇಂಡಿಗೋ ಮತ್ತು ಸ್ಪೈಸ್‌ ಜೆಟ್‌ನ ತಲಾ ಮೂರು ವಿಮಾನಗಳು ಸಂಚಾರ ನಡೆಸಲಿದ್ದು, ಅವುಗಳ ವೇಳಾಪಟ್ಟಿಈಗಾಗಲೇ ಬಿಡುಗಡೆಯಾಗಿದೆ. ಸ್ಪೈಸ್‌ಜೆಟ್‌ನ 3 ವಿಮಾನಗಳು ಬೆಂಗಳೂರು ಮತ್ತು ಮುಂಬೈಗೆ ಹಾರಾಟ ನಡೆಸಿದರೆ, ಇಂಡಿಗೋದ 3 ವಿಮಾನಗಳು ಬೆಂಗಳೂರು, ಮುಂಬೈ ಮತ್ತು ಚೆನ್ನೈಗೆ ಸಂಚರಿಸಲಿವೆ. ಅಂದರೆ ಒಟ್ಟು ಆರು ವಿಮಾನಗಳು ಪ್ರತಿದಿನ 12 ಸಲ ಪ್ರಯಾಣ ನಡೆಸಲಿದೆ. ಆದರೆ ಏರ್‌ ಇಂಡಿಯಾದ ವೇಳಾಪಟ್ಟಿಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ವೇಳಾಪಟ್ಟಿ: ಮೇ 25ರಂದು ಬೆಂಗಳೂರಿನಿಂದ ಸ್ಪೈಸ್‌ಜೆಟ್‌ ವಿಮಾನವು ಬೆಳಗ್ಗೆ 8.30, ರಾತ್ರಿ 7 ಗಂಟೆಗೆ ಹಾಗೂ ಇಂಡಿಗೊ ವಿಮಾನ ಸಂಜೆ 5.55ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ. ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್‌ಜೆಟ್‌ ಬೆಳಗ್ಗೆ 10.20, ರಾತ್ರಿ 9.35, ಇಂಡಿಗೋ ವಿಮಾನ ಸಂಜೆ 7.30ಕ್ಕೆ ತೆರಳಲಿದೆ.

ತೊಕ್ಕೊಟ್ಟು: ಬಂದೂಕು ಹಿಡಿದು ರಸ್ತೆಗಿಳಿದ ಪೊಲೀಸರು!

ಮಾ.25ರಂದು ಮುಂಬೈನಿಂದ ಸ್ಪೈಸ್‌ ಜೆಟ್‌ ವಿಮಾನ ಬೆಳಗ್ಗೆ 7.05ಕ್ಕೆ ಹಾಗೂ ಇಂಡಿಗೋ ವಿಮಾನ ಬೆಳಗ್ಗೆ 9.30ಕ್ಕೆ ಹೊರಟು ಮಂಗಳೂರಿಗೆ ಆಗಮಿಸಿದರೆ, ಮಂಗಳೂರಿನಿಂದ ಸ್ಪೈಸ್‌ಜೆಟ್‌ ಬೆಳಗ್ಗೆ 9.05ಕ್ಕೆ ಹಾಗೂ ಇಂಡಿಗೋ ವಿಮಾನ ಬೆಳಗ್ಗೆ 11.40ಕ್ಕೆ ಮುಂಬೈಗೆ ತೆರಳಲಿವೆ. ಚೆನ್ನೈನಿಂದ ಸಂಜೆ 5.45ಕ್ಕೆ ಇಂಡಿಗೋ ವಿಮಾನ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ವಿಮಾನ ಸಂಚಾರ ಮಾಡಲಿದೆ.

ಬಂದವರಿಗೆ ಕ್ವಾರಂಟೈನ್‌

ಮುಂಬೈ, ಬೆಂಗಳೂರು, ಚೆನ್ನೈನಿಂದ ಪ್ರಯಾಣಿಕರು ವಿಮಾನ ಏರುವ ಮೊದಲೇ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಂಗಳೂರಿಗೆ ಬಂದಿಳಿದಾಗ ಏರ್‌ಪೋರ್ಟ್‌ ಪ್ರಾಧಿಕಾರದ ವೈದ್ಯರ ತಂಡ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಸಲಾಗಿದೆ. ಬಳಿಕ ಪ್ರಯಾಣಿಕರನ್ನು ಕಂದಾಯ ಇಲಾಖೆ ವತಿಯಿಂದ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

click me!