ಬೆಂಗಳೂರು: ಬೈಕಲ್ಲಿ ತ್ರಿಬಲ್‌ ರೈಡ್‌, ಅಪಘಾತಕ್ಕೆ ವಿದ್ಯಾರ್ಥಿನಿ ಬಲಿ

By Kannadaprabha NewsFirst Published May 27, 2022, 5:45 AM IST
Highlights

*   ದೇವೇಗೌಡ ಪೆಟ್ರೋಲ್‌ ಬಂಕ್‌ ಸಮೀಪದ ರಿಂಗ್‌ ರಸ್ತೆಯಲ್ಲಿ ನಡೆದ ಘಟನೆ
*  ಖಾಸಗಿ ಶಾಲಾ ಬಸ್‌ ಡಿಕ್ಕಿಯಾಗಿ ಅಪಘಾತ
*  ತಂಗಿ ಸಾವು, ಅಕ್ಕ, ಸ್ನೇಹಿತಗೆ ಗಾಯ
 

ಬೆಂಗಳೂರು(ಮೇ.27): ದೇವೇಗೌಡ ಪೆಟ್ರೋಲ್‌ ಬಂಕ್‌ ಸಮೀಪದ ರಿಂಗ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಖಾಸಗಿ ಶಾಲಾ ಬಸ್‌ ಡಿಕ್ಕಿ ಹೊಡೆದ ಪರಿಣಾಮ ತಂಗಿ ಮೃತಪಟ್ಟು ಅಕ್ಕ ಹಾಗೂ ಸ್ನೇಹಿತ ಗಾಯಗೊಂಡಿದ್ದಾರೆ. ನಾಯಂಡಹಳ್ಳಿಯ ತಿಗಳರತೋಟ ನಿವಾಸಿ ಕೀರ್ತನಾ(16) ಮೃತ ವಿದ್ಯಾರ್ಥಿನಿ. ಈಕೆಯ ಅಕ್ಕ ಹರ್ಷಿತಾ(18) ಹಾಗೂ ಸ್ನೇಹಿತ ದರ್ಶನ್‌(21) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ದರ್ಶನ್‌, ಹರ್ಷಿತಾ ಹಾಗೂ ಕೀರ್ತನಾ ಗುರುವಾರ ಬೆಳಗ್ಗೆ 9.20ರ ಸುಮಾರಿಗೆ ರಿಂಗ್‌ ರಸ್ತೆಯ ಕಿತ್ತೂರುರಾಣಿ ಚೆನ್ನಮ್ಮ ಜಂಕ್ಷನ್‌ ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಕಾಮಾಕ್ಯ ಕಡೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ.

Latest Videos

ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು: ಮಾನವೀಯತೆ ಮೆರೆದ ದ.ಕ ಜಿಲ್ಲಾಧಿಕಾರಿ

ಮೃತ ಕೀರ್ತನಾ ತಂದೆ ಆಟೋ ಚಾಲಕ ನಾಗರಾಜ್‌ ಬುಧವಾರ ಕುಟುಂಬ ಸಹಿತ ಹಾರೋಹಳ್ಳಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಗುರುವಾರ ಬೆಳಗ್ಗೆ ಎದ್ದು ಪತ್ನಿ ಹಾಗೂ ಪುತ್ರಿಯರಾದ ಕೀರ್ತನಾ ಹಾಗೂ ಹರ್ಷಿತಾರನ್ನು ಆಟೋದಲ್ಲೇ ದೇವೇಗೌಡ ಪೆಟ್ರೋಲ್‌ ಬಂಕ್‌ವರೆಗೆ ಕರೆದುಕೊಂಡು ಬಂದಿದ್ದಾರೆ. ಪತ್ನಿ ಮನೆಗೆಲಸ ಮಾಡುತ್ತಿದ್ದು, ಕೆಲಸಕ್ಕೆ ತಡವಾಗಿದ್ದರಿಂದ ಇಬ್ಬರು ಮಕ್ಕಳನ್ನು ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಇಳಿಸಿ ಬಸ್‌ನಲ್ಲಿ ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಬಳಿಕ ಪತ್ನಿಯನ್ನು ಆಟೋ ರಿಕ್ಷಾದಲ್ಲಿ ಕೆಲಸದ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ತ್ರಿಬಲ್‌ ರೈಡಿಂಗ್‌:

ಈ ವೇಳೆ ಕೀರ್ತನಾ ಹಾಗೂ ಹರ್ಷಿತಾ ಸ್ನೇಹಿತ ದರ್ಶನ್‌ಗೆ ಕರೆ ಮಾಡಿ ಮನೆಗೆ ಡ್ರಾಪ್‌ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ದರ್ಶನ್‌ ಜೆ.ಪಿ.ನಗರದಿಂದ ದ್ವಿಚಕ್ರ ವಾಹನ ತೆಗೆದುಕೊಂಡು ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿಗೆ ಬಂದ್ದಾನೆ. ದ್ವಿಚಕ್ರ ವಾಹನದಲ್ಲಿ ಮೂವರು ಕುಳಿತುಕೊಂಡು ಕಿತ್ತೂರುರಾಣಿ ಚೆನ್ನಮ್ಮ ವೃತ್ತದ ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬಂದು ರಿಂಗ್‌ ರಸ್ತೆ ಮೂಲಕ ಕಾಮಾಕ್ಯ ಕಡೆಗೆ ಹೋಗಲು ಮುಂದಾದಾಗ ಮೇಲ್ಸೇತುವೆ ಡೌನ್‌ ರಾರ‍ಯಂಪ್‌ ಬಳಿ ಹಿಂದಿನಿಂದ ವೇಗವಾಗಿ ಬಂದಿರುವ ಖಾಸಗಿ ಶಾಲೆಯ ಬಸ್‌, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಮೂವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಶಾಲಾ ಬಸ್‌ನ ಹಿಂಬದಿ ಚಕ್ರ ಕೀತರ್ನಾ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ದರ್ಶನ್‌ ಹಾಗೂ ಹರ್ಷಿತಾ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುನಗುಂದ: ಕಾರು ಡಿಕ್ಕಿ; ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ

ಶಾಲಾ ಬಸ್‌ ಚಾಲಕ ಎಸ್ಕೇಪ್‌:

ಅಪಘಾತದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆ ಬಳಿಕ ಖಾಸಗಿ ಶಾಲಾ ಬಸ್‌ ಚಾಲಕ ಸ್ಥಳದಲ್ಲೇ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ. ಬಸ್ಸಿನಲ್ಲಿದ್ದ ಮಕ್ಕಳನ್ನು ಶಾಲೆಗೆ ಕಳಹಿಸಲು ಪರ್ಯಾಯ ವ್ಯವಸ್ಥೆ ಮಾಡಿ, ಆ ಬಸ್‌ ಜಪ್ತಿ ಮಾಡಲಾಗಿದೆ. ಚಾಲಕನ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಖಾಸಗಿ ಬಸ್‌ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಓದಿನ ಜತೆಗೆ ಪಾರ್ಚ್‌ ಟೈಂ ಕೆಲಸ

ಮೃತ ಕೀರ್ತನಾ ಎಸ್ಸೆಸ್ಸೆಎಲ್ಸಿ ಉತ್ತೀರ್ಣಳಾಗಿದ್ದು, ಪಿಯುಸಿಗೆ ಸೇರಲು ಸಿದ್ಧತೆ ನಡೆಸುತ್ತಿದ್ದಳು. ಇನ್ನು ಆಕೆಯ ಅಕ್ಕ ಹರ್ಷಿತಾ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದಾಳೆ. ಬಡ ಕುಟುಂಬದ ಈ ಇಬ್ಬರು ವ್ಯಾಸಂಗದ ಜತೆಗೆ ಬಿಡುವಿನ ವೇಳೆ ಪಾರ್ಚ್‌ ಟೈಂ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಮನೆಗೆ ತೆರಳಿ ಬಳಿಕ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಮನೆಗೆ ತೆರಳುವ ಮಾರ್ಗ ಮಧ್ಯೆಯೇ ಈ ದುರ್ಘಟನೆ ನಡೆದಿದೆ.
 

click me!