ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ 150 ಕೋಟಿ ಹಾಗೂ ಜಿಲ್ಲೆಯ ಇತರೆ ರೈಲ್ವೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಡ್ಜೆಟ್‌ನಲ್ಲಿ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ತಿಳಿಸಿದ್ದಾರೆ.
ಶಿವಮೊಗ್ಗ (ಫೆ.5) : ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ 150 ಕೋಟಿ ಹಾಗೂ ಜಿಲ್ಲೆಯ ಇತರೆ ರೈಲ್ವೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಡ್ಜೆಟ್‌ನಲ್ಲಿ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 8 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳಿಗಾಗಿ ಗಣನೀಯ ಪ್ರಮಾಣದ ಅನುದಾನವನ್ನು ಬಿಡು ಬಿಡುಗಡೆ ಮಾಡುತ್ತಿದೆ. 2023-24 ರ ಕೇಂದ್ರ ಮುಂಗಡ ಪತ್ರದಲ್ಲಿಯೂ ಸಹ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಯೋಜನೆಗಳಿಗೆ ಗಣನೀಯ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಲಾಗಿದೆ ಎಂದರು.
ಕ್ಷೇತ್ರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ: ಸಂಸದ ಬಿ.ವೈ.ರಾಘವೇಂದ್ರ
2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಂಜೂರು ಮಾಡಲಾಗಿರುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಯೋಜನೆಯ ಮೊದಲನೆಯ ಹಂತ ವಾದ ಶಿವಮೊಗ್ಗ-ಶಿಕಾರಿಪುರ ವಿಭಾಗದ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯು ಈಗಾಗಲೇ ಟೆಂಡರ್ ಕರೆದಿದ್ದು, ಶೀಘ್ರದಲ್ಲಿಯೇ ಕಾಮಗಾರಿಯ ನ್ನು ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಗಾಗಿ ಕೇಂದ್ರ ಮುಂಗಡ ಪತ್ರದಲ್ಲಿ 150 ಕೋಟಿ ರು.ಗಳ ಅನುದಾನವನ್ನು ಒದಗಿಸಲಾಗಿದೆ. ಇದೇ ರೀತಿ ಬೀರೂರು-ತಾಳಗುಪ್ಪ ಮಾರ್ಗದ ವಿದ್ಯುಧೀಕರಣಕ್ಕಾಗಿ 56 ಕೋಟಿ ರು.ಗಳ ಅನುದಾನವನ್ನು ಒದಗಿಸಲಾಗಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ದೂರದೃಷ್ಟಿಯಂತೆ ಸಾಮಾನ್ಯ ರೈಲು ಪ್ರಯಾಣಿಕರಿಗೂ ಸಹ ಉತೃಷ್ಟದರ್ಜೆಯ ಸವಲತ್ತುಗಳನ್ನು ಒದಗಿಸುವ ಉದ್ದೇಶದಿಂದ ಅಮೃತ್ ಭಾರತ್ ಯೋಜನೆಯಡಿಯಲ್ಲಿ ಕರ್ನಾಟಕದ 52 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣವೂ ಸಹ ಒಂದಾಗಿದೆ ಎಂದ ಅವರು, ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿ ಅತ್ಯಾಧುನಿಕ ರೈಲ್ವೆ ನಿಲ್ದಾಣವನ್ನಾಗಿ ಅಭಿವೃದ್ಧಿಗೊಳಿಸಿ ನಗರ ಕೇಂದ್ರವನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.