ಪತ್ರಿಕೆಗಳು ಟೀಕೆ ಮಾತ್ರವಲ್ಲದೆ ರಚನಾತ್ಮಕ ಸಲಹೆಯನ್ನೂ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡಪ್ರಭ ಕಳೆದ ಹದಿನೈದು ವರ್ಷದಿಂದ ಈ ಭಾಗದ ಪ್ರತಿಧ್ವನಿಯಾಗಿದೆ ಎಂದ ಸಚಿವ ಸಿ.ಸಿ. ಪಾಟೀಲ್
ಹುಬ್ಬಳ್ಳಿ(ಜು.31): ಉತ್ತರ ಕರ್ನಾಟಕದ ಜನರ ದನಿಯಾಗಿ 2007ರ ಜುಲೈ 21ರಂದು ಸುಂದರ ಕನಸಿನೊಂದಿಗೆ ಹುಟ್ಟಿಕೊಂಡ ‘ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ’ಯ ಹದಿನೈದು ವರ್ಷಗಳ ಸಂಭ್ರಮೋತ್ಸವ ಶನಿವಾರ ಅರ್ಥಪೂರ್ಣವಾಗಿ ಜರುಗಿತು. ಪತ್ರಿಕೆ 15 ವರ್ಷಗಳ ಹಿಂದೆ ಎಲ್ಲಿ ಆರಂಭೋತ್ಸವ ಹಮ್ಮಿಕೊಂಡಿತ್ತೋ ಅದೇ ನವೀನ್ ಹೋಟೆಲ್‌ನ ವೇದಿಕೆಯಲ್ಲಿ ಶನಿವಾರ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಿತು. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಸೇರಿ 7 ಜಿಲ್ಲೆಗಳನ್ನು ಒಳಗೊಂಡ ಹುಬ್ಬಳ್ಳಿ ಆವೃತ್ತಿಯ ಸುದೀರ್ಘ ಒಂದೂವರೆ ದಶಕಗಳ ಪಯಣದ ಹಾದಿಯನ್ನೊಮ್ಮೆ ಮೆಲುಕು ಹಾಕಲಾಯಿತು.
ವರ್ಷಾಚರಣೆಯ ಸಂಭ್ರಮಕ್ಕೆ ಸಾಕ್ಷಿಯಾದ ಗಣ್ಯರು, ಅತಿಥಿಗಳು ಹಾಗೂ ಓದುಗರನ್ನು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಸ್ವಾಗತಿಸಿದರು. ಕನ್ನಡಪ್ರಭ 15 ವರ್ಷಗಳಲ್ಲಿ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ಕನ್ನಡಪ್ರಭ ಪುರವಣಿ ಮುಖ್ಯಸ್ಥ ಜೋಗಿ ಅವರು, ದಾಹ, ಬಾಯಾರಿಕೆ, ಹಸಿವು ಇದ್ದವರು ಯಾವತ್ತೂ ಒಂದು ವಸ್ತುವಿನ ಬೆಲೆ ಕೇಳುವುದಿಲ್ಲ. ಅದರ ಮೌಲ್ಯವನ್ನು ನೋಡುತ್ತಾರೆ. ಅದೇ ರೀತಿ ಕನ್ನಡಪ್ರಭದ ಮೌಲ್ಯವನ್ನು ಉತ್ತರ ಕರ್ನಾಟಕ ಭಾಗ ಜನರು ಎತ್ತಿ ಹಿಡಿದಿದ್ದಾರೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಕರ್ನಾಟಕದ ಏಳು ಅದ್ಭುತಗಳ ಆಯ್ಕೆಗೆ ಮತದಾನ ಬಿರುಸು: ನಿಮ್ಮ ಜಿಲ್ಲೆಯ ಸ್ಥಳ ಇದೆಯಾ ನೋಡಿ
ಎಚ್ಚರಿಸುವ ಕೆಲಸ ಮಾಡಲಿ- ಸಿಸಿ ಪಾಟೀಲ್:
ಪತ್ರಿಕೆಗಳು ಟೀಕೆ ಮಾತ್ರವಲ್ಲದೆ ರಚನಾತ್ಮಕ ಸಲಹೆಯನ್ನೂ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡಪ್ರಭ ಕಳೆದ ಹದಿನೈದು ವರ್ಷದಿಂದ ಈ ಭಾಗದ ಪ್ರತಿಧ್ವನಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ 15ನೇ ವರ್ಷಾಚರಣೆ ನಿಮಿತ್ತ 70 ಪುಟಗಳ ವಿಶೇಷ ಪುರವಣಿ ಬಿಡುಗಡೆ ಮಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಕನ್ನಡಪ್ರಭ ಪ್ರಸಾರ ವಿಭಾಗದ ಮುಖ್ಯಸ್ಥ ಅನಂತಮೂರ್ತಿ, ಏಷ್ಯಾನೆಟ್ ನ್ಯೂಸ್‌ನ ಅನೀಲ ಸುರೇಂದ್ರ, ಸಂಪಾದಕ ಸಮನ್ವಯ ವಿಶೇಷ ಯೋಜನೆ, ಬಿ.ವಿ.ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.
ಧನ್ಯವಾದ ಓದುಗರೇ!
15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕನ್ನಡಪ್ರಭ 70 ಪುಟಗಳ ವಿಶೇಷ ಪುರವಣಿ ಹೊರ ತಂದಿರುವುದು ವಿಶೇಷವೇ ಸರಿ. ಧನ್ಯವಾದ ಓದುಗರೇ ಶೀರ್ಷಿಕೆಯಲ್ಲಿ ಮೂಡಿ ಬಂದ ಪುರವಣಿ ಆಕರ್ಷಣೀಯವಾಗಿದು, ಸಮಾರಂಭದ ಗಣ್ಯರ ಹಾಗೂ ಓದುಗರ ಗಮನ ಸಳೆಯಿತು. 15 ವರ್ಷಗಳ ಪಯಣವನ್ನು 70 ಪುಟಗಳಲ್ಲಿ ಹಿಡಿದಿಟ್ಟಿರುವ ಪುರವಣಿಯಲ್ಲಿ ಹುಬ್ಬಳ್ಳಿ ಆವೃತ್ತಿ ವ್ಯಾಪ್ತಿಯ ಏಳು ಜಿಲ್ಲೆಗಳ ಇತಿಹಾಸ, ವರ್ತಮಾನ, ಭವಿಷ್ಯ, ಆ ಪ್ರದೇಶದ ಮಹತ್ವ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶಿಕ್ಷಣ, ಆರ್ಥಿಕತೆ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಕಾಯ್ದಿಟ್ಟುಕೊಳ್ಳುವ ಪುರವಣಿ. ಈ ಆವೃತ್ತಿಯ ಜಿಲ್ಲೆಗಳು ಇನ್ನೂ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಬೇಕು ಎಂಬುದರ ಮಾಹಿತಿಯೂ ಇದರಲ್ಲಿದೆ.
North Karnataka Business Awards 2022: ಉತ್ತರ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್ 2022
ಬೆಲ್ಲದ ಬೊಂಬೆ ಕನ್ನಡಪ್ರಭ:
ಕನ್ನಡಪ್ರಭ ಎಂದರೆ ಬೆಲ್ಲದ ಬೊಂಬೆ, ಸಕ್ಕರೆ ಅಚ್ಚು ಇದ್ದಂತೆ. ಹೇಗೆ ತಿಂದರೂ ಸಿಹಿ ನೀಡುತ್ತದೆ. ಕನ್ನಡಪ್ರಭ ಎಲ್ಲರಿಗೂ ಅಕ್ಕರೆಯ ಬೆಲ್ಲದಂತೆ. ಅಖಂಡ ಕರ್ನಾಟಕದಲ್ಲಿ ಕನ್ನಡಪ್ರಭ ನೂರು ವರ್ಷ ಸಾರ್ಥಕ ಕೆಲಸ ಮಾಡಲಿ ಎಂದು ಸಾನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹಾರೈಸಿದರು.
ಕನ್ನಡಪ್ರಭಕ್ಕೆ ಮತ್ತಷ್ಟುಶಕ್ತಿ ಬರಲಿ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ ಪತ್ರಿಕೆಯ ಬಗೆಗಿನ ಅಭಿಮಾನ ವ್ಯಕ್ತಪಡಿಸಿದರು. 15ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆಗೆ ಜಾಹೀರಾತು ಮೂಲಕ ಸಹಕಾರ ನೀಡಿದ ಸಮಾಜದ ಗಣ್ಯರನ್ನು ಇದೇ ವೇದಿಕೆಯಲ್ಲಿ ಸ್ಮರಣ ಸಂಚಿಕೆ ನೀಡಿ ಗೌರವಿಸಲಾಯಿತು.