ಪಂಚಮಸಾಲಿ ಮೀಸಲಾತಿ ಸಿಗದಿದ್ದರೇ ಆ. 23ರಿಂದ ಸಿಎಂ ಮನೆ ಎದುರು ಪ್ರತಿಭಟನೆ
ಹುಬ್ಬಳ್ಳಿ(ಜು.31): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಆ. 22ರೊಳಗೆ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಅಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ಆ. 23ರಿಂದ ಶಿಗ್ಗಾವಿಯಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ. ಇಲ್ಲಿನ ನೆಹರು ಮೈದಾನದಲ್ಲಿ ಪ್ರತಿಭಟನಾ ರಾರಯಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಂಚಮಸಾಲಿ ಹಕ್ಕೊತ್ತಾಯದ ಹೋರಾಟ ಅಂತಿಮ ಘಟಕ್ಕೆ ತಲುಪಿದೆ. ಮೀಸಲಾತಿ ಕೊಡಿಸಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದೇ ಹೋದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮಾಜ ನಿಮ್ಮ ವಿರುದ್ಧ ಪುಟಿದೇಳುವುದು ಖಚಿತ ಎಂದು ಎಚ್ಚರಿಸಿದರು.
ಈ ಹಿಂದೆ ಮೀಸಲಾತಿ ಒತ್ತಾಯ ಮನವಿಗೆ ಸೀಮಿತವಾಗಿತ್ತು. ಈಗ ಕಳೆದ 27 ದಿನದಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಇನ್ನೂ ಮುಂದೆ ಹೋರಾಟ ನಡೆ ಬದಲಾಗಲಿದೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಹೋರಾಟದ ಬಳಿಕ ಬಿ.ಎಸ್. ಯಡಿಯೂರಪ್ಪ ಅವರ ಶಿವಮೊಗ್ಗ ಕ್ಷೇತ್ರದಲ್ಲಿ ಹೋರಾಟ ನಡೆಸಲಾಗುವುದು. ನಮ್ಮ ಹೋರಾಟ ನಿರ್ಲಕ್ಷಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಮಹತ್ವ ಅರಿಯಬೇಕಾಗುತ್ತದೆ. ಈಗಾಗಲೇ ಉಪಚುನಾವಣೆಯಲ್ಲಿ ನಮ್ಮ ಸಮುದಾಯ ಶಕ್ತಿ ಎಷ್ಟಿದೆ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದರು.
ಬೇಡ ಜಂಗಮ ಜನಾಂಗಕ್ಕೆ ಪ.ಜಾತಿ ಮೀಸಲಾತಿ ಬೇಡ: ಎಚ್.ಸಿ. ಮಹದೇವಪ್ಪ
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯ ದೊಡ್ಡದಿದೆ. ನಾವು ಬಹುಸಂಖ್ಯಾತರು, ಆದರೆ, ಇಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಆ. 22ರೊಳಗಾಗಿ ಮೀಸಲಾತಿ ನೀಡಬೇಕು. ಕೊಟ್ಟಮಾತು ತಪ್ಪಿದರೆ ಸಮಾಜದ ಹೆಬ್ಬುಲಿ ಯತ್ನಾಳ ಅವರ ನೇತೃತ್ವದಲ್ಲಿ ಸಿಎಂ ನಿವಾಸದ ಎದುರು ಹೋರಾಟ ಮಾಡುತ್ತೇವೆ. ಮೀಸಲಾತಿ ಕೊಡದಿದ್ದರೆ ನಿಮ್ಮನ್ನೂ ಮನೆಗೆ ಕಳಿಸುತ್ತೆವೆ ಎಂದು ಗುಡುಗಿದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ.ಸಿ. ಸಿದ್ದನಗೌಡರ, ಎಸ್.ಐ. ಚಿಕ್ಕನಗೌಡ್ರ, ಸಮಾಜ ಮುಖಂಡ ಅರವಿಂದ ಕಟಗಿ, ವಿರೇಶ ಉಂಡಿ, ವಿಜಯ ಕುಲಕರ್ಣಿ, ಮಂಜುನಾಥ ಕುನ್ನೂರ, ರಾಜಶೇಖರ ಮೆಣಸಿನಕಾಯಿ, ಶಿವಲಿಲಾ ಕುಲಕರ್ಣಿ, ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ ಇದ್ದರು.
ಬೃಹತ್ ಪ್ರತಿಭಟನೆ
ಶ್ರೀಗಳ ನೇತೃತ್ವದಲ್ಲಿ ಇಲ್ಲಿಯ ನೆಹರು ಮೈದಾನದಿಂದ ಚೆನ್ನಮ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಾವಿರಾರು ಜನರು ಮೀಸಲಾತಿ ನೀಡಬೇಕು ಎಂದು ಘೋಷಣೆ ಕೂಗಿದರು. ಚೆನ್ನಮ್ಮ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ 2 ಗಂಟೆಗಳ ಕಾಲ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದರು. ಬಳಿಕ ಮೀಸಲಾತಿ ಕಲ್ಪಿಸಲು ಹಕ್ಕೊತ್ತಾಯಿಸಿ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.