* ಕರ್ನಾಟಕದಲ್ಲಿ ವರುಣನ ಅಬ್ಬರ
* ಮಳೆ ಹಾನಿ ಮಾಹಿತಿ ನೀಡಿದ ರಾಜ್ಯ ಸರ್ಕಾರ
* ರಾಜ್ಯದಲ್ಲಿ ಇದುವರೆಗೆ ಮೂರು ಸಾವು
* ಮಳೆಯಿಂದ 291 ಕಿ.ಮೀ ರಸ್ತೆಗೆ ಭಾರೀ ಹಾನಿ
ಬೆಂಗಳೂರು( ಜು. 23) ರಾಜ್ಯದ ಮಳೆ ಹಾನಿಯ ಕುರಿತು ಸರ್ಕಾರದ ಮಾಹಿತಿ ನೀಡಿದೆ. ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಧಾರವಾಡ, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿದು ಬರುತ್ತಿದೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು 4 NDRF ತಂಡ ನಿಯೋಜನೆ ಮಾಡಲಾಗಿದೆ.
ರಾಯಚೂರು, ಕೊಡಗು, ಬೆಳಗಾವಿ, ದಕ್ಷಿಣಕನ್ನಡಕ್ಕೆ NDRF ತಂಡ ಕಳಿಸಲಾಗಿದೆ. ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ 2 NDRF ತಂಡ ಕಳಿಸಲಾಗಿದೆ ಹಾಸನ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಸಂಚಾರ ಬಂದ್ ಆಗಿದೆ.
ರಜೆ ಹಾಕದೆ ಕೆಲಸ ಮಾಡಿ; ಅಧಿಕಾರಿಗಳಿಗೆ ಖಡಕ್ ಸೂಚನೆ
ಇದುವರೆಗೆ ಮಳೆಯಿಂದಾಗಿ ರಾಜ್ಯದಲ್ಲಿ 3 ಸಾವು ಸಂಭವಿಸಿದೆ. ಚಿಕ್ಕಮಗಳೂರಿನಲ್ಲಿ ಮನೆ ಕುಸಿತದಿಂದ 1 ಸಾವು, ಉತ್ತರಕನ್ನಡ ಜಿಲ್ಲೆಯಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಳೆಯಿಂದ 18 ತಾಲೂಕುಗಳಲ್ಲಿ ಭಾರೀ ಹಾನಿಯಾಗಿದೆ.
ಪ್ರವಾಹದಿಂದ 131 ಗ್ರಾಮಗಳು ತೊಂದರೆಗೆ ಸಿಲುಕಿವೆ. ಮಳೆಯಿಂದ ರಾಜ್ಯಾದ್ಯಂತ 830 ಮನೆಗಳಿಗೆ ಹಾನಿಯಾಗಿದೆ. 8733 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 80 ಕಾಳಜಿ ಕೇಂದ್ರ ಆರಂಭ ಮಾಡಲಾಗಿದೆ.
ಮಳೆಯಿಂದ 291 ಕಿ.ಮೀ ರಸ್ತೆಗೆ ಭಾರೀ ಹಾನಿಯಾಗಿದೆ. 10 ಶಾಲೆಗಳಿಗೆ ಪ್ರವಾಹದಿಂದ ಹಾನಿ ಸಂಭವಿಸಿದೆ. 1 ಆರೋಗ್ಯ ಕೇಂದ್ರಗಳಿಗೂ ಸಹ ಮಳೆಯಿಂದ ಹಾನಿಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.