ನದಿ ರಕ್ಷಣೆಗೆ ವರದಿ ಬರೆದು ಬಾಲ ವಿಜ್ಞಾನಿಯಾದ 13 ವರ್ಷದ ಪೋರಿ!

By Suvarna News  |  First Published Jan 3, 2024, 4:50 PM IST

ನದಿಗಳು ಕಲುಷಿತಗೊಳ್ಳುತ್ತಿರುವುದನ್ನು ಮನಗಂಡ 13 ವರ್ಷದ ಪೋರಿ ನದಿಯ ರಕ್ಷಣೆಗೆ ಮುಂದಾಗಿದ್ದಾಳೆ. ಇಷ್ಟು ಚಿಕ್ಕವಯಸ್ಸಿನಲ್ಲೇ ನದಿಯ ಸ್ವಚ್ಛತೆ ಬಗ್ಗೆ ಆಸಕ್ತಿ ವಹಿಸಿರುವ ಈ ಬಾಲಕಿ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕಂಬಿಬಾಣೆಯ ಶ್ರಿಜು


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.3): ನದಿಗಳೇ ನಾಗರಿಕತೆಯ ಮೂಲ ಎನ್ನುವ ಇತಿಹಾಸ ಗೊತ್ತೇ ಇದೆ. ಅದೆಷ್ಟೋ ನಾಗರಿಕತೆಗಳು ಬೆಳೆದಿರುವ ಅದೇ ನದಿಗಳು ಇಂದು ಸಂಪೂರ್ಣ ಕಲುಷಿತಗೊಳ್ಳುತ್ತಿವೆ. ಇದರಿಂದ ಮುಂದಿನ ಜನಾಂಗಕ್ಕೆ ಕುಡಿಯುವ ನೀರಿಗೂ ಆಹಾಕಾರ ಎದುರಾಗುತ್ತದೆ ಎನ್ನುವ ಆತಂಕ ಶುರುವಾಗಿದೆ. ಅಷ್ಟು ಪ್ರಮಾಣದಲ್ಲಿ ನದಿಗಳು ಕಲುಷಿತಗೊಳ್ಳುತ್ತಿರುವುದನ್ನು ಮನಗಂಡ 13 ವರ್ಷದ ಪೋರಿ ನದಿಯ ರಕ್ಷಣೆಗೆ ಮುಂದಾಗಿದ್ದಾಳೆ. ಇಷ್ಟು ಚಿಕ್ಕವಯಸ್ಸಿನಲ್ಲೇ ನದಿಯ ಸ್ವಚ್ಛತೆ ಬಗ್ಗೆ ಆಸಕ್ತಿ ವಹಿಸಿರುವ ಈ ಬಾಲಕಿ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕಂಬಿಬಾಣೆಯ ಶ್ರಿಜು ಮತ್ತು ಸಂಧ್ಯಾ ದಂಪತಿಯ ಮಗಳು ಶ್ರೀಶಾ.

Tap to resize

Latest Videos

undefined

ಕೊಡಗರಹಳ್ಳಿಯಲ್ಲಿರುವ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಶ್ರೀಶಾ ನದಿಯ ಸ್ವಚ್ಛತೆ ಕಾಪಾಡುವುದಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದಾಳೆ. ತಮ್ಮ ಶಾಲೆಯ ಸಹಪಾಠಿಗಳನ್ನು ಸೇರಿಸಿಕೊಂಡು ಸುಂಟಿಕೊಪ್ಪದಿಂದ ಮಾದಾಪುರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇರುವ ಹಾರಂಗಿ ನದಿಯ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಥಾ ನಡೆಸುತ್ತಾ ಸ್ವಚ್ಛ ನದಿ ಉಳಿಸುವುದಕ್ಕಾಗಿ ಅರಿವು ಮೂಡಿಸುತ್ತಿದ್ದಾಳೆ. ಕಾವೇರಿ ನದಿಯ ಉಪನದಿಯಾಗಿರುವ ಹಾರಂಗಿ ನದಿ ತಟಕ್ಕೆ ಜನರು ಕಸ ತಂದು ಸುರಿಯುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನವನ್ನು ಸೆಳೆದಿದ್ದಾಳೆ.

ಕರ್ನಾಟಕದಲ್ಲಿ ಗೋಧ್ರಾ ರೀತಿ ದುರಂತಕ್ಕೆ ಹುನ್ನಾರ, ಮಾಹಿತಿ ಇದೆ: ಕಿಚ್ಚು ಹಚ್ಚಿದ ಬಿಕೆ ಹರಿಪ್ರಸಾದ್‌ ಹೇಳಿಕೆ

ಅಪರ ಜಿಲ್ಲಾಧಿಕಾರಿ ವೀಣಾ, ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ವರ್ಣಿತ್ ನೇಗಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಆಯಾ ಗ್ರಾಮ ಪಂಚಾಯಿತಿಗಳ ಪಿಡಿಓಗಳಿಗೂ ಮನವಿ ಸಲ್ಲಿಸಿ ಕಾವೇರಿ ನದಿ ಉಳಿಸುವಂತೆ ಆಗ್ರಹಿಸುತ್ತಿದ್ದಾಳೆ. ಶ್ರೀಶಾಳ ಮನವಿಗೆ ಸ್ಪಂದಿಸಿರುವ ಎಸ್ಪಿ. ಕೆ. ರಾಮರಾಜನ್ ನದಿ ವ್ಯಾಪ್ತಿಯಲ್ಲೂ ಪೊಲೀಸ್ ಬೀಟ್ ಹಾಕುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಸೂಕ್ತ ಕ್ರಮ ವಹಿಸಿ ಸ್ವಚ್ಛತೆ ಕಾಪಾಡಿ ಎಂದು ಪಿಡಿಓಗಳಿಗೆ ಸೂಚನೆ ನೀಡಿ ಜಿಲ್ಲಾ ಪಂಚಾಯಿತಿ ಸಿಇಓ ವರ್ಣಿತ್ ನೇಗಿ ಪತ್ರ ಬರೆದಿದ್ದಾರೆ.

ಇನ್ನು ಬಾಲಕಿ ಶ್ರೀಶಾ ನದಿ ತಟಗಳ ಸ್ವಚ್ಛತೆ ಕಾಪಾಡುವುದು ಹೇಗೆ, ನದಿಗಳನ್ನು ಉಳಿಸಿಕೊಳ್ಳಬೇಕಾಗಿರುವ ಅಗತ್ಯತೆಯ ಬಗ್ಗೆ ವರದಿಯನ್ನು ಸಿದ್ಧಪಡಿಸಿದ್ದಾಳೆ. ಈ ವರದಿಯ ಆಧಾರದಲ್ಲಿ ಯೋಜನೆಯನ್ನು ಸಿದ್ಧಗೊಳಿಸಿ ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇದೇ ಪ್ರಾಜೆಕ್ಟ್ ಸಿದ್ಧಪಡಿಸಿದ್ದ ಶ್ರೀಶಾ ಜಿಲ್ಲಾ ಮಟ್ಟದಲ್ಲಿ ಗೆಲುವು ಪಡೆದು ಬಾಲ ವಿಜ್ಞಾನಿಯಾಗಿ ಹೊರ ಹೊಮ್ಮಿದ್ದಾಳೆ. ಆ ಮೂಲಕ ರಾಜ್ಯದ ಮಟ್ಟದ ವಿಜ್ಞಾನ ಸಮಾವೇಶಕ್ಕೂ ಆಯ್ಕೆಯಾಗಿದ್ದಾಳೆ.

ಅಯೋಧ್ಯೆಗೆ ಭೇಟಿ ನೀಡಲು ಬಯಸುವವರಿಗೆ ಬಿಜೆಪಿ ವ್ಯವಸ್ಥೆ

ನಾನು ಪ್ರಶಸ್ತಿ ಪಡೆಯುವುದಕ್ಕಾಗಿ ಈ ಯೋಜನೆ ರೂಪಿಸಲಿಲ್ಲ. ಬದಲಾಗಿ ನದಿಗಳ ತಟಕ್ಕೆ ಹೋದಾಗ ಅಲ್ಲಿ ಬಹಳ ದೊಡ್ಡಮಟ್ಟದಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದು ಅತ್ಯಂತ ಬೇಸರ ತರಿಸುತ್ತದೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಹಾಗೂ ತಮಿಳುನಾಡಿಗೂ ಕುಡಿಯುವ ನೀರು ಒದಿಗಿಸುವ ಕಾವೇರಿ ನದಿಯನ್ನು ರಕ್ಷಿಸುವ ಅಗತ್ಯವಿದೆ ಎನ್ನುತ್ತಿದ್ದಾಳೆ ಶ್ರೀಶಾ. ಇನ್ನೂ ಮಗಳು ಶ್ರೀಶಾಳ ಈ ಕಾರ್ಯಕ್ಕೆ ತಂದೆ ತಾಯಿಯೂ ಸಾಕಷ್ಟು ಪ್ರೋತ್ಸಾಹಿಸುತ್ತಿದ್ದಾರೆ. ಟೈಲರ್ ಆಗಿರುವ ತಂದೆ ಶ್ರಿಜು ಅವರು ಮಗಳಿಗೆ ಅಗತ್ಯವಾದ ಮಾಹಿತಿಗಳನ್ನು ಕಲೆಹಾಕಿ ಕೊಡುವ ಕೆಲಸ ಮಾಡಿದರೆ ತಾಯಿ ಅದನ್ನು ನೀಟಾಗಿ ನೋಟ್ಸ್ ಬರೆದು ಕೊಟ್ಟು ಪ್ರೋತ್ಸಾಹಿಸುವ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ 13 ನೇ ವಯಸ್ಸಿಗೆ ನದಿಯ ರಕ್ಷಣೆಗೆ ಮುಂದಾಗಿರುವ ಶ್ರೀಶಾ ಬಾಲ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಕೂಡ ಸನ್ಮಾನಿಸಿದ್ದಾರೆ.

click me!