111 ಜನರಲ್ಲಿ 106 ಜನರು ತಾಂಡಾ ನಿವಾಸಿಗಳು| ಕೊರೋನಾ ಭೀತಿ: ತಾಂಡಾಗಳಲ್ಲಿ ಮಡುಗಟ್ಟಿದ ಮೌನ| ಮುಂಬೈ, ಪುಣೆಯಂತಹ ಮಹಾನಗರಗಳಿಗೆ ತೆರಳಿದ್ದ ಸೋಂಕಿತರು| ಜಿಲ್ಲೆಯ ವಿವಿಧ ತಾಂಡಾ ನಿವಾಸಿಗಳು, ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು|
ಆನಂದ್ ಎಂ. ಸೌದಿ
ಯಾದಗಿರಿ(ಮೇ.25): ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಥಾಣೆಯಂತಹ ಮಹಾನಗರಗಳಿಗೆ ವಲಸೆ ಹೋಗಿ ವಾಪಸ್ಸಾಗಿರುವ ಜಿಲ್ಲೆಯ ಬಹುತೇಕ ತಾಂಡಾ ನಿವಾಸಿಗಳಲ್ಲೇ ಕೊರೋನಾ ಸೋಂಕು ತಗುಲುತ್ತಿರುವುದು ಆತಂಕ ಮೂಡಿಸಿದೆ. ಹೊಟ್ಟೆಪಾಡಿಗಾಗಿ ದುಡಿಯಲು ವಲಸೆ ಹೋಗಿದ್ದ ಸಾವಿರಾರು ಸಂಖ್ಯೆಯಲ್ಲಿ ಜನರು ವಾಪಸ್ಸಾಗಿ, ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು. ಈಗ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕೇಸುಗಳಲ್ಲಿ ಬಹುತೇಕರು ಯಾದಗಿರಿ ಸುತ್ತಮುತ್ತಲಿನ ತಾಂಡಾಗಳಲ್ಲಿನ ನಿವಾಸಿಗಳೇ !
undefined
ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ ಕಂಡುಬಂದ ಒಟ್ಟು 72 ಪ್ರಕರಣಗಳು ಹಾಗೂ ಭಾನುವಾರ ಕಂಡುಬಂದ ಒಟ್ಟು 24 ಪ್ರಕರಣಗಳೂ ಸೇರಿದಂತೆ ಈ ಹಿಂದಿನ 15 ಪ್ರಕರಣಗಳನ್ನು ನೋಡಿದರೆ, ಮಹಾನಗರಗಳಿಗೆ ತೆರಳಿದ್ದ ಸೋಂಕಿತರು ತಾಂಡಾ ನಿವಾಸಿಗಳು ಎಂದು ದೃಢಪಟ್ಟಿದೆ. ಜಿಲ್ಲೆಯ ಒಟ್ಟು 111 ಪಾಸಿಟಿವ್ ಪ್ರಕರಣಗಳಲ್ಲಿ 106 ತಾಂಡಾ ನಿವಾಸಿಗಳೇ ಆಗಿರುವುದು ಆಘಾತ ಮೂಡಿಸಿದೆ.
ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಲು ಕಾರ್ಮಿಕನ ಯತ್ನ: ಹಿಡಿಯಲು ಹೋದ ASI ಮೇಲೆ ಹಲ್ಲೆ
ಇದರಲ್ಲಿ ಕೆಲವು ತಾಂಡಾಗಳು ಯಾದಗಿರಿ ನಗರ ಪ್ರದೇಶದಿಂದ ಕೂಗಳತೆ ದೂರದಲ್ಲಿನ ಕಿ.ಮೀ.ಗಳಷ್ಟು ಅಂತರದಲ್ಲಿವೆ. ಜಿಲ್ಲಾಡಳಿತ ಮಾಹಿತಿ ನೀಡಿದಂತೆ, ಶನಿವಾರದ 72 ಪ್ರಕರಣಗಳಲ್ಲಿ ಸೋಂಕಿತರ ಪೈಕಿ ಅಲ್ಲಿಪೂರ ತಾಂಡಾದ 21 ಜನರು, ಯರಗೋಳ ದೊಡ್ಡ ತಾಂಡಾದಲ್ಲಿ 20,ಬಾಚವಾರ ತಾಂಡಾದಲ್ಲಿ 12, ಮುದ್ನಾಳ್ ದೊಡ್ಡ ತಾಂಡಾದಲ್ಲಿ 5, ಕಂದಕೂರು ಹಾಗೂ ಬಸಂತಪೂರ ತಾಂಡಾದಲ್ಲಿ ತಲಾ ಮೂರು, ಚಿಂತನಹಳ್ಳಿ ತಾಂಡಾ, ಯಂಪಾಡದಲ್ಲಿ ಎರಡು, ಮುಂಡರಗಿ ತಾಂಡಾ ಹಾಗೂ ರಾಮಸಮುದ್ರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿತ್ತು.
ಯರಗೋಳ ವ್ಯಾಪ್ತಿಯ ತಾನು ನಾಯಕ್ ತಾಂಡಾ, ಥಾವರೂ ನಾಯಕ್ ತಾಂಡಾ, ಕೇಮು ನಾಯಕ್ ತಾಂಡಾ, ಅಡ್ಡಿಮಡ್ಡಿ ತಾಂಡಾ ಹಾಗೂ ಲಿಂಗಸನಹಳ್ಳಿ ಪ್ರದೇಶಗಳನ್ನು ಒಗ್ಗೂಡಿಸಿ ಯರಗೋಳ ದೊಡ್ಡ ತಾಂಡಾ ಎಂದು ಗುರುತಿಸಿದೆ ಎಂದೆನಿಸುತ್ತದೆ. ನೆರೆಯ ಕಲಬುರಗಿ ಜಿಲ್ಲೆಯ ಚಿತ್ತಾಪೂರ ಯಾಗಾಪೂರ, ನಾಲ್ವಾರ ಸೇರಿದಂತೆ ಕೆಲವು ಪ್ರದೇಶಗಳು ಯರಗೋಳ ಭಾಗಕ್ಕೆ ಅಂಟಿಕೊಂಡಂತೆ ಇವೆ. ಇಲ್ಲಿಯೂ ಸಹ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮುಂಬೈಯಿಂದ ಕಲಬುರಗಿ ಹಾಗೂ ಯಾದಗಿರಿಗೆ ಬಂದ ವಿಶೇಷ ರೈಲು ಶ್ರಮಿಕ್ ಎಕ್ಸಪ್ರೆಸ್ ಮೂಲಕ ಬಹುತೇಕರು ಜಿಲ್ಲೆಗೆ ಆಗಮಿಸಿದ್ದಾಗ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಶಹಾಪುರ ತಾಲೂಕಿನ ಕನ್ಯಾ ಕೋಳೂರು ಸೇರಿದಂತೆ ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಮತ್ತಷ್ಟೂ ಸೋಂಕಿತರನ್ನು ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸೋಮವಾರ ಇನ್ನೂ ಕೆಲವು ಪಾಸಿಟಿವ್ ಪ್ರಕರಣಗಳ ವಿವರಗಳನ್ನು ಜಿಲ್ಲಾಡಳಿತ ಪ್ರಕಟಿಸಬಹುದಾದ ಸಾಧ್ಯತೆಯಿದ್ದು, ಇವರೆಲ್ಲರೂ ತಾಂಡಾ ನಿವಾಸಿಗಳೇ. ಎಳೆಯ ಮಕ್ಕಳು, ಮಹಿಳೆಯರು, ಯುವಕರು, ವಯೋವೃದ್ಧರಿಗೂ ಸೋಂಕು ತಗುಲಿದ್ದು, ವಿಪರೀತ ಮಟ್ಟಕ್ಕೆ ಹೋಗುವಲ್ಲಿ ಕ್ವಾರಂಟೈನ್‌ನ ಅವ್ಯವಸ್ಥೆಯೂ ಕಾರಣ ಎನ್ನಲಾಗುತ್ತಿದೆ.
ತಾಂಡಾದ ಜನರು ಮುಂಬೈಗೆ ಹೋಗಲು ಕಾರಣ ಹೊಟ್ಟೆ ಪಾಡಿಗಾಗಿ. ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಕೆಲಸದಲ್ಲಿ ಅವರಿಗೆ ಹೆಚ್ಚು ಕೂಲಿ ನೀಡಲಾಗುತ್ತದೆ. ಈ ಕೂಡಿಟ್ಟ ಹಣ ಬೇಸಿಗೆಯ ನಂತರ ಮಿರಗ್ ಮಳೆ ಬರುವ ಸಂದರ್ಭದಲ್ಲಿ ಬಿತ್ತನೆ ಸಾಮಗ್ರಿಗಳ ಖರೀದಿಗೆ ಅನುಕೂಲವಾಗುತ್ತದೆ ಎಂಬ ಸಹಜವಾದ ಆಶಾಭಾವ ಇರುತ್ತದೆ ಎಂದು ಯಾದಗಿರಿ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮನೋಹರ್ ಪವಾರ್ ಅವರು ತಿಳಿಸಿದ್ದಾರೆ.
111 ಜನರಲ್ಲಿ 106 ಜನರು ತಾಂಡಾ ನಿವಾಸಿಗಳು !
ಶನಿವಾರ (ಮೇ 23) ರಂದು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿರುವ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಭಾನುವಾರ 24 ಜನರಲ್ಲಿ ಕಾಣಿಸಿಕೊಂಡಿದೆ. ಇವರು ಮಹಾರಾಷ್ಟ್ರದ ಮುಂಬೈ, ಥಾಣೆ ಹಾಗೂ ಪುಣೆ ಭಾಗಗಳಿಂದ ಆಗಮಿಸಿದ್ದವರು. ಬಹುತೇಕರು ಜಿಲ್ಲೆಯ ವಿವಿಧ ತಾಂಡಾ ನಿವಾಸಿಗಳು, ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು. ಮೇ 12 ರಿಂದ ಈವರೆಗೆ 111 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸುಮಾರು 105 ಕ್ಕೂ ಹೆಚ್ಚು ಜನರು ಜಿಲ್ಲೆಯ ವಿವಿಧ ತಾಂಡಾಗಳಲ್ಲಿನ ನಿವಾಸಿಗಳಾಗಿದ್ದಾರೆ.
ಸೋಂಕಿತರಲ್ಲಿ ಹೆಚ್ಚಿನವರು ಯಾದಗಿರಿ ಸಮೀಪದ ಯರಗೋಳ ದೊಡ್ಡ ತಾಂಡಾ (21) ಹಾಗೂ ಅಲ್ಲಿಪೂರ ತಾಂಡಾದ (26) ನಿವಾಸಿಗಳು. ಇನ್ನುಳಿದಂತೆ, ಬಾಚವಾರ ತಾಂಡಾದ-14, ಮುದ್ನಾಳ್ ದೊಡ್ಡ ತಾಂಡಾದ-5, ಬದ್ದೇಪಲ್ಲಿ ತಾಂಡಾದ-5, ಮುಂಡರಗಿ ತಾಂಡಾ-1, ಕಂದಕೂರು-3, ಬಸಂತಪೂರ್ ತಾಂಡಾ-3, ಚಿಂತನಹಳ್ಳಿ ತಾಂಡಾ- 2, ಯಂಪಾಡ-3, ರಾಮಸಮುದ್ರ-1, ಅರಕೇರಾ ತಾಂಡಾ-1, ನಾಯ್ಕಲ್-1, ಕುರಕುಂದಾ-4, ಚಿನ್ನಾಕಾರ ತಾಂಡಾದ-1, ಕನ್ಯೆಕೋಳೂರು ತಾಂಡಾ-3, ಗಡ್ಡೆಸೂಗೂರು-1, ಅರಕೇರಾ (ಬಿ)-1, ಹಳಿಸಗರದ 3, ಚಂದಾಪುರ ತಾಂಡಾದ-1, ಸುರಪುರ ತಾಲೂಕಿನ ದೀವಲಗುಡ್ಡದ ಇಬ್ಬರು ಹಾಗೂ ಶಹಾಪುರ ತಾಲೂಕಿನ ಗೋಗಿಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.