
ಉತ್ತರಕನ್ನಡ (ಸೆ.28) : ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ದಿಗೆ 100 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದ್ದು, ಹಂತ- ಹಂತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ವಿಶ್ವ ಪ್ರವಾಸೋದ್ಯಮದ ದಿನಾಚರಣೆಯ ಅಂಗವಾಗಿ ಗೋಕರ್ಣದ ಕುಡ್ಲೆ ಕಡಲತೀರದ ಅರ್ಥ್ಯ ಗಮ್ಯ ರೆಸಾರ್ಟ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೇತರಿಸುತ್ತಿರುವ ಪ್ರವಾಸೋದ್ಯಮ, ಪ್ರವಾಸಿಗರನ್ನು ಸ್ವಾಗತಿಸುತ್ತಿರುವ ರೆಸಾರ್ಟ್, ಹೋಂ ಸ್ಟೇ ಮಾಲೀಕರು
ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದ ಜತೆ ಖಾಸಗಿಯವರ ಸಹಕಾರವೂ ಅಗತ್ಯವಿದೆ ಎಂದ ಸಚಿವರು, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿರುವ ಈ ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಯೊಂದಿಗೆ ರೂಪುರೇಷೆ ತಯಾರಾಗಿದೆ. ಇನ್ನು ಹತ್ತು ವರ್ಷದಲ್ಲಿ ಪ್ರವಾಸೋದ್ಯದಲ್ಲಿ ವಿಶೇಷವಾಗಿ ಜಿಲ್ಲೆ ಗುರುತಿಸಿಕೊಳ್ಳಲಿದೆ ಎಂದು ಹೇಳಿದರು.
ಉತ್ತರ ಕನ್ನಡ 140 ಕಿ.ಮೀ. ಕಡಲತೀರದ ವ್ಯಾಪ್ತಿ ಹೊಂದಿದ್ದು, ಇಲ್ಲಿನ ಪ್ರವಾಸೋದ್ಯಮದ ಜತೆ ಬಂದರಿನ ಅಭಿವೃದ್ದಿ ಸಹ ಮಾಡಲಾಗುತ್ತಿದೆ. ಈ ಕಡಲತೀರವನ್ನು ಸ್ವಚ್ಛ, ಸ್ವಸ್ಥವಾಗಿಡಲು ಪಣ ತೊಟ್ಟಿದ್ದು, ರಾಷ್ಟ್ರಪತಿಗಳು ಕರಾವಳಿ ಜಿಲ್ಲೆಗೆ ಆಗಮಿಸಿ ಸ್ವಚ್ಛಸಾಗರ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ಕಾರವಾರದಿಂದ ಭಟ್ಕಳದವರೆಗಿನ ಕಡಲತೀರವನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಉತ್ತರಕನ್ನಡ ಜಿಲ್ಲಾ ಪ್ರವಾಸಿ ತಾಣಗಳ ಒಂದೇ ವೆಬ್ ಸೈಟ್‍ನಲ್ಲಿ ಎಲ್ಲಾ ಪ್ರವಾಸಿ ತಾಣದ ದೂರ, ಮಾರ್ಗ ಮತ್ತಿತರ ಸಮಗ್ರ ವಿವರ ಪ್ರವಾಸಿಗರಿಗೆ ನೀಡಲಾಗುವುದು. ಜಿಲ್ಲೆಯ ವಿವಿಧ ಹೊಟೇಲ್, ರೆಸಾರ್ಟ್‌ಗಳಲ್ಲಿರುವ ಪ್ರವಾಸಿಗರ ಮಾಹಿತಿ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಕ್ಕೆ ಮಾಹಿತಿ ಸಿಗುವಂತೆ ಮಾಡಿ , ಪ್ರವಾಸಿಗರು ಜಿಲ್ಲೆಯ ಸಂಪೂರ್ಣ ಭೇಟಿ ನೀಡುವ ಅವಕಾಶ ನೀಡಲಾಗುವುದು ಎಂದರು.
ಇನ್ನು ಜಿಲ್ಲೆಯಲ್ಲಿ ವಿವಿಧ ಸಮುದಾಯದ ಅಪರೂಪದ ಆಚರಣೆ ಸಂಪ್ರದಾಯಗಳನ್ನು ತಿಳಿಸುವ ಮೂಲಕ ಜಿಲ್ಲೆಯ ಸಾಂಸ್ಕೃತಿಕತೆಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಇದರ ಅಂಗವಾಗಿ ಈಗಾಗಲೇ ಸಿದ್ದಿ ಜನಾಂಗದ ಸಂಪ್ರದಾಯ ಪರಿಚಯಿಸುವ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು.
Uttara Kannada: ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಚಿಟ್ಟೆ ಪಾರ್ಕ್..!
ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಗೇಮ್ಸ್ ಸಂಸ್ಥೆಯ ಸಿಇಒ ಸುರೇಶ ಗುಂಡಪ್ಪ, ಗ್ರಾಂ. ಪಂ. ಅಧ್ಯಕ್ಷ ಮಂಜುನಾಥ, ವೆಬ್ ವಿನ್ಯಾಸಕಾರ ಸಾತ್ವಿಕ್ ಮತ್ತಿತರರು ಭಾಗವಹಿಸಿದ್ದರು.