* ಮುಲ್ಲಾಮಾರಿ ಜಲಾಶಯದಿಂದ 1 ಸಾವಿರ ಕ್ಯುಸೆಕ್ ನೀರು ನದಿಗೆ
* ಡ್ಯಾಂ ಅಚ್ಟುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ
* ಎಲ್ಲ ಸಣ್ಣ ನೀರಾವರಿ ಕೆರೆಗಳು ಭರ್ತಿ
ಚಿಂಚೋಳಿ(ಜು.18): ತಾಲೂಕಿನಲ್ಲಿ ಸುರಿದ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವುದರಿಂದ 2 ಗೇಟಿನ ಮೂಲಕ 1 ಸಾವಿರ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಇದರಿಂದಾಗಿ ಮುಲ್ಲಾಮಾರಿ ನದಿ ತುಂಬಿ ಹರಿಯುತ್ತಿದೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಚ್ಟುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಒಳಹರಿವು ಉಂಟಾಗಿ ರಾತ್ರಿ ಮುಲ್ಲಾಮಾರಿ ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರದ ಚಿಮ್ಮನಚೋಡ, ತಾಜಲಾಪೂರ, ಕನಕಪುರ, ಗಾರಂಪಳ್ಳಿ, ಗೌಡನಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಗರಗಪಳ್ಳಿ, ಅಣವಾರ, ಪೋಲಕಪಳ್ಳಿ, ಇರಗಪಳ್ಳಿ ಗ್ರಾಮಸ್ಥರು ಭಯಪಡುವಂತಾಗಿದೆ.
ಏಕೆಂದರೆ ಕಳೆದ ವರ್ಷವು ಜುಲೈ ತಿಂಗಳಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ಜಲಾಶಯದಿಂದ ಹೆಚ್ಚಿನ ನೀರು ಹರಿದು ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ ಅನೇಕ ಮನೆಗಳಿಗೆ ನೀರು ನುಗ್ಗಿತು. ಗುರುವಾರ ರಾತ್ರಿ ನೀರು ಬಿಡಲಾಗುವುದು ಎಂದು ವಿಷಯ ತಿಳಿದ ಗ್ರಾಮಸ್ಥರು ಎಚ್ಚರದಿಂದ ಮತ್ತು ಭಯದ ವಾತಾವರಣದಲ್ಲಿ ಜೀವನ ಕಳೆಯಬೇಕಾಯಿತು.
ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ
ಕುಂಚಾವರಂ ಗಡಿಪ್ರದೇಶದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಧರ್ಮ ಸಾಗರ ತಾಂಡಾದ ಸಣ್ಣ ನೀರಾವರಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಹೆಚ್ಚಿನ ನೀರು ಹರಿಯುತ್ತಿದೆ. ತೆಲಂಗಾಣ ರಾಜ್ಯದ ಕೊಹಿರ, ಗೊಟೆರಪಳ್ಳಿ, ಕೊಹಿರ ಗೌಸಾಬಾದ ಗ್ರಾಮಗಳಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ವನ್ಯಜೀವಿಧಾಮದ ಎತ್ತಪೋತ ಜಲಧಾರೆ ಮೈದುಂಬಿ ಹರಿಯುತ್ತಿರುವುದರಿಂದ ನೋಡಲು ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಣ್ತುಂಬಿಕೊಂಡು ಆನಂದಿಸಿದರು.ಚಂದ್ರಂಪಳ್ಳಿ ಜಲಾಶಯಕ್ಕೆ ಹೆಚ್ಚಿನ ನೀರು ಬಂದಿದೆ.
ಎಲ್ಲ ಸಣ್ಣ ನೀರಾವರಿ ಕೆರೆಗಳಿಗೆ ನೀರು ಹರಿದು ಬರುತ್ತಿರುವುದರಿಂದ ಭರ್ತಿ ಆಗುತ್ತಿವೆ ಎಂದು ಎಇಇ ಶಿವಶರಣಪ್ಪ ಕೇಶ್ವರ ತಿಳಿಸಿದ್ದಾರೆ. ವ್ಯಾಪಕ ಮಳೆ ಆಗುತ್ತಿರುವುದರಿಂದ ಕೆಲವು ಗ್ರಾಮಗಳಲ್ಲಿ ರೈತರ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಾಳಾಗುತ್ತಿವೆ ಒಟ್ಟಾರೆ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಳೆ ಆಗುತ್ತಿರುವುದಿಂದ ನದಿ ನಾಲೆಗಳು ತುಂಬಿ ಹರಿಯುತ್ತಿವೆ.