ಮಂಗಳೂರು (ಜು.18): ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಅಟ್ಟಹಾಸ ಮುಂದುವರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಳಗಿನ ವಗ್ಗ ಎಂಬಲ್ಲಿ ಭಾರೀ ಮಳೆಗೆ ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು 50ಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿ ಬಿದ್ದಿವೆ.
4 ದಿನ ರಾಜ್ಯದಲ್ಲಿ ಭಾರೀ ಮಳೆ : ಯಾವ ಜಿಲ್ಲೆಗಳಿಗೆ ಅಲರ್ಟ್..?
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಗುಡ್ಡ ಜರಿದು ಜೆಸಿಬಿ ಮೂಲಕ ತೆರವು ಮಾಡಲಾಗಿದೆ.
ಕೊಪ್ಪಳ : ಇನ್ನು ಇತ್ತ ಕೊಪ್ಪಳ ಜಿಲ್ಲೆಯಲ್ಲಿಯೂ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರಿ ಮಳೆ ಹಿನ್ನೆಲೆ ಡಂಬರಳ್ಳಿ ಬಳಿಯ ಬ್ಯಾರೇಜ್ ಒಡೆದು ಹಾನಿಯಾಗಿದೆ.
ಐದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಬ್ಯಾರೇಜ್ ಒಡೆದಿದ್ದು, ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದೆ.
ಕೊಪ್ಪಳ, ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಹಿರೇಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬ್ಯಾರೇಜ್ ಒಡೆದಿದೆ. ಸಾಕಷ್ಟು ಬೆಳೆಗಳು ನೀರಿನಲ್ಲಿ ಮುಳುಗಿವೆ.
4 ದಿನ ವ್ಯಾಪಕ ಮಳೆ ಸಾಧ್ಯತೆ : ಮಲೆನಾಡಿಗೆ ಆರೆಂಜ್ ಅಲರ್ಟ್
ಚಿಕ್ಕಮಗಳೂರು : ಇನ್ನು ಮಲೆನಾಡು ಭಾಗದಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪ ಗಾಳಿ ಮಳೆಗೆ ಬೃಹತ್ ಮರಗಳು ರಸ್ತೆಗೆ ಉರುಳಿವೆ. ಮತ್ತೊಂದಡೆ ರಸ್ತೆ ಪಕ್ಕದಲ್ಲೇ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮಲ್ಲಂದೂರು ಸಿರಿವಾಸೆ ರಸ್ತೆ ಸಂಪರ್ಕ ಬಂದ್ ಆಗಿದೆ.