* ಲಿಂಗಾಯತ ಶಾಸಕ, ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಲು ಸಿದ್ಧತೆ
* ನಳಿನ್ ಕುಮಾರ್ ಕಟೀಲ್‌ಗೆ ಡಿಕೆಶಿ ತಿರುಗೇಟು
* ಡಿಕೆಶಿ ಮುಂದಿನ ಸಿಎಂ ಎಂದು ಜಯಘೋಷ ಹಾಕಿ ಗಮನ ಸೆಳೆದರು ಅಭಿಮಾನಿಗಳು
ಕಲಬುರಗಿ(ಜು.18): ಲಿಂಗಾಯತರು ಕೇವಲ ಬಿಜೆಪಿಯ ಸ್ವತ್ತಲ್ಲ, ಕಾಂಗ್ರೆಸ್‌ನಲ್ಲೂ ಲಿಂಗಾಯತರಿದ್ದಾರೆ. ಅನೇಕ ಜನ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಅವರನ್ನೆಲ್ಲ ಕಾಂಗ್ರೆಸ್‌ಗೆ ಸ್ವಾಗತಿಸುವುದಕ್ಕೆ ಸಿದ್ಧತೆಗಳು ಸಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನ್ಯಪಕ್ಷಗಳಲ್ಲಿರುವ ಅನೇಯ ಲಿಂಗಾಯತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಿದ್ದು, ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ವಿಚಾರವಾಗಿ ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಚರ್ಚೆ ನಡೆಸುತ್ತಿದ್ದಾರೆ ಎಂದರು.
ಇಡೀ ಲಿಂಗಾಯತ ಸಮುದಾಯವೇ ತಮ್ಮ ಸ್ವತ್ತು ಎನ್ನುವ ಹಾಗೆ ಬಿಜೆಪಿಯವರು ವರ್ತಿಸುತ್ತಿದ್ದಾರೆ, ಇಂಥ ವರ್ತನೆ ಸರಿಯಲ್ಲ. ಲಿಂಗಾಯತರಲ್ಲಿ ಸಾಕಷ್ಟು ಜನ ಕಾಂಗ್ರೆಸ್ ಪರವೂ ಒಲವಿದ್ದವರು ಇದ್ದಾರೆ. ಪಕ್ಷದಲ್ಲಿದ್ದಾರೆ, ಪಕ್ಷದ ಹೊರಗಿದ್ದಾರೆ, ಅವರೆಲ್ಲರೂ ಕಾಂಗ್ರೆಸ್‌ಗೆ ಹರಸುತ್ತಿದ್ದಾರೆಂದರು.
ಡಿಕೆಶಿ ಕಾರ್ಯಕ್ರಮದಲ್ಲಿ ಕಟೌಟ್ ರಾಜಕಾರಣ: ಸಿದ್ದು ಅಭಿಮಾನಿಗಳು ಗರಂ ಆಗಿದ್ದೇಕೆ..?
ಕಟೀಲ್‌ಗೆ ತಿರುಗೇಟು:
ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸಂಗೀತ ಕುರ್ಚಿ ಸ್ಪರ್ಧೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ತಿರುಗೇಟು ನೀಡಿದ ಡಿಕೆಶಿ, ಸಿಎಂ ಹುದ್ದೆ ಕಾದಾಟ ಕಾಂಗ್ರೆಸ್‌ನಲ್ಲಿ ನಡೆಯುತ್ತಿಲ್ಲ. ಅದು ಬಿಜೆಪಿಯಲ್ಲೇ ನಡೆಯುತ್ತಿದೆ ಎಂದರು.
ಡಿಕೆಶಿ ಮುಂದಿನ ಸಿಎಂ ಕೂಗು
ವಿಜಯಪುರಕ್ಕೆ ತೆರಳುವ ದಾರಿಯಲ್ಲಿ ಬೆಳಗಿನ ಹೊತ್ತು ಕೆಲಗಂಟೆ ಕಾಲ ಕಲಬುರಗಿಯಲ್ಲಿ ತಂಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಲ್ಲದೆ ಮುಂದಿನ ಮುಖ್ಯಮಂತ್ರಿ ಎಂದು ಜಯಘೋಷ ಹಾಕಿ ಗಮನ ಸೆಳೆದರು. ನಂತರ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ನೀವೇ ಮುಂದಿನ ಸಿಎಂ ಎಂದು ಘೋಷಣೆ ಹಾಕಿದರು.