ಇನ್ಮುಂದೆ ಕರ್ನಾಟಕದಲ್ಲಿ ಕುಮಾರಸ್ವಾಮಿಯ ದರ್ಬಾರ್

First Published May 23, 2018, 4:51 PM IST
Highlights

ಕಾಂಗ್ರೆಸ್'ನಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ವಜುಬಾಯಿ ವಾಲ ಪ್ರತಿಜ್ಞಾ ವಿಧಿ ಬೋಧಿಸಿದರು.

ಬೆಂಗಳೂರು(ಮೇ.23): ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ರೈತರು ಹಾಗೂ ದೇವರ ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹೆಚ್.ಡಿ.ಕೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ  ರಾಜ್ಯದಲ್ಲಿ 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ. 
ಕಾಂಗ್ರೆಸ್'ನಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ವಜುಬಾಯಿ ವಾಲ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿಧಾನಸೌಧದಲ್ಲಿ ಸಂಜೆ 4.30 ಕ್ಕೆ ನಡೆದ ಬೃಹತ್ ಸಮಾರಂಭಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್, ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್'ನ ಕೇಂದ್ರ ಹಾಗೂ ರಾಜ್ಯದ ಹಲವು ಹಿರಿಯ ನಾಯಕರು ಹಾಗೂ ಮೈತ್ರಿ ಪಕ್ಷದ ಸಾವಿರಾರು ಕಾರ್ಯಕರ್ತರು ಸಾಕ್ಷಿಯಾದರು   

ಎಚ್ಡಿಕೆ ನಡೆದು ಬಂದ ಹಾದಿ..

1959 ಡಿ.19ರಂದು ಹರದನಹಳ್ಳಿಯಲ್ಲಿ ಜನನ
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ BSc
ಚಲನಚಿತ್ರ ನಿರ್ಮಾಪಕರಾಗಿ ವೃತ್ತಿ ಜೀವನ 
1986ರಲ್ಲಿ ಅನಿತಾ ಜೊತೆ ದಾಂಪತ್ಯ ಜೀವನ
2006ರಲ್ಲಿ 18ನೇ ಸಿಎಂ ಆಗಿ ಅಧಿಕಾರ
2008ರಲ್ಲಿ ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ 
1996ರಲ್ಲಿ ಬೆಂಗಳೂರು ಗ್ರಾ. ಲೋಕಸಭೆಗೆ ಆಯ್ಕೆ
1998ರಲ್ಲಿ ಕನಕಪುರ ಲೋಕಸಭೆಯಿಂದ ಸೋಲು
1999ರಲ್ಲಿ ಸಾತನೂರು ಕ್ಷೇತ್ರದಲ್ಲಿ ಸೋಲು
2004ರಲ್ಲಿ ರಾಮನಗರ ಕ್ಷೇತ್ರದಿಂದ ಗೆಲುವು
2006: ಕಾಂಗ್ರೆಸ್ಗೆ ಕೊಟ್ಟಿದ್ದ ಬೆಂಬಲ ವಾಪಸ್
2006: ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ
2007: ಮುರಿದು ಬಿದ್ದ ಬಿಜೆಪಿ ಜೊತೆ ಮೈತ್ರಿ
2013: ವಿಧಾನಸಭೆಯ ವಿಪಕ್ಷದ ನಾಯಕರಾಗಿ ಆಯ್ಕೆ
2014: ಚಿಕ್ಕಬಳ್ಳಾಪುರ ಲೋಕಸಭೆಗೆ ಸ್ಪರ್ಧೆ-ಸೋಲು
2018: ಶಾಸಕರಾಗಿ ರಾಮನಗರ, ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆ
ರಾಮನಗರಕ್ಕೆ ರಾಜೀನಾಮೆ ಹಾಗೂ ಚನ್ನಪಟ್ಟಣ ಕ್ಷೇತ್ರ ಆಯ್ಕೆ

"

ಪರಮೇಶ್ವರ್ 9ನೇ ಡಿಸಿಎಂ
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೇರಲಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಈ ಹುದ್ದೆಗೇರಿದ ರಾಜ್ಯದ ಎಂಟನೇ ರಾಜಕಾರಣಿ ಎನಿಸಲಿದ್ದಾರೆ. 


ಕರ್ನಾಟಕದಲ್ಲಿ ಇದುವರೆಗೂ ಎಂಟು ಬಾರಿ ಡಿಸಿಎಂ ಹುದ್ದೆ ಸೃಷ್ಟಿಯಾಗಿದೆ.  ಈ ಬಾರಿಯದ್ದು ಒಂಬತ್ತನೇ ಡಿಸಿಎಂ ಹುದ್ದೆ. ಈ ಹುದ್ದೆಯನ್ನು ಇದುವರೆಗೂ ನಿರ್ವಹಿಸಿರುವವರು 8 ಮಂದಿ. ಏಕೆಂದರೆ, ಸಿದ್ದರಾಮಯ್ಯ ಅವರ ಎರಡು ಬಾರಿ ಡಿಸಿಎಂ ಹುದ್ದೆ ಪಡೆದಿದ್ದರು. ಹೀಗಾಗಿ ಪರಮೇಶ್ವರ್‌ ಈ ಹುದ್ದೆ ಗಿಟ್ಟಿಸಿದ ಎಂಟನೇ ರಾಜಕಾರಣಿ ಹಾಗೂ 9ನೇ ಡಿಸಿಎಂ. ಎಸ್‌.ಎಂ. ಕೃಷ್ಣ ಅವರು ಡಿಸಿಎಂ ಹುದ್ದೆಗೇರಿದ ರಾಜ್ಯದ ಮೊದಲ ರಾಜಕಾರಣಿ. ನಂತರ ಜೆ.ಎಚ್‌. ಪಟೇಲ್‌, ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್‌, ಯಡಿಯೂರಪ್ಪ, ಅಶೋಕ್‌, ಈಶ್ವರಪ್ಪ ಅವರು ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. 
ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಆಗ ಎಸ್‌.ಎಂ.ಕೃಷ್ಣ ಉಪ ಮುಖ್ಯಮಂತ್ರಿಯಾಗಿದ್ದರು. ಅನಂತರ ಉಪ ಮುಖ್ಯಮಂತ್ರಿ ಸೃಷ್ಟಿಯಾಗಿದ್ದು ಜನತಾದಳದ ಎಚ್‌.ಡಿ. ದೇವೇಗೌಡ ನೇತೃತ್ವದ ಸರ್ಕಾರದಲ್ಲಿ. ಆಗ ಜೆ.ಎಚ್‌. ಪಟೇಲ್‌ ಡಿಸಿಎಂ ಆಗಿದ್ದರು. ನಂತರ ಪಟೇಲರು ಸಿಎಂ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.
2004ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಮತ್ತು ಎಂ.ಪಿ.ಪ್ರಕಾಶ್‌ ಉಪ ಮುಖ್ಯಮಂತ್ರಿಯಾಗಿದ್ದರು. ನಂತರ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಬಳಿಕ ಬಿಜೆಪಿಯ ಜಗದೀಶ್‌ ಶೆಟ್ಟರ್‌ ನೇತೃತ್ವದ ಸರ್ಕಾರದಲ್ಲಿ ಆರ್‌.ಅಶೋಕ್‌ ಮತ್ತು ಕೆ.ಎಸ್‌.ಈಶ್ವರಪ್ಪ ಉಪ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು.

 

click me!