ಜಾರ್ಜ್ ಮಂತ್ರಿ ಮಾಡಲು ಸಿದ್ದರಾಮಯ್ಯ ಲಾಬಿ : ಜೆಡಿಸ್ ತೀವ್ರ ವಿರೋಧ

First Published May 22, 2018, 8:35 AM IST
Highlights

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಬಲ ಲಾಬಿಯ ಹೊರತಾಗಿಯೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಕುಮಾರಸ್ವಾಮಿ ಅವರ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೆ ಜೆಡಿಎಸ್ ಪಾಳೆಯದಿಂದ ತೀವ್ರ ವಿರೋಧ ಎದುರಾಗಿದೆ. 

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಬಲ ಲಾಬಿಯ ಹೊರತಾಗಿಯೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಕುಮಾರಸ್ವಾಮಿ ಅವರ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೆ ಜೆಡಿಎಸ್ ಪಾಳೆಯದಿಂದ ತೀವ್ರ ವಿರೋಧ ಎದುರಾಗಿದೆ. ಸಿದ್ದರಾಮಯ್ಯ ಅವರು ಈ ಬಾರಿ ತಮ್ಮ ಬಾದಾಮಿಯ ಗೆಲುವಿಗೆ ಕಾರಣರಾದ ಎಸ್.ಆರ್. ಪಾಟೀಲ್ ಹಾಗೂ ಆಪ್ತ ಕೆ.ಜೆ.ಜಾರ್ಜ್ ಅವರನ್ನು ಸಚಿವ ರನ್ನಾಗಿ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ ಎನ್ನುತ್ತವೆ ಮೂಲಗಳು. 

ಆದರೆ, ಪಾಟೀಲ್ ಸೇರ್ಪಡೆಗೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸದ ಜೆಡಿಎಸ್, ಜಾರ್ಜ್ ಸೇರ್ಪಡೆಗೆ ಒಪ್ಪುವುದು ಹೇಗೆ ಎಂಬ ಚಿಂತೆಗೆ ಬಿದ್ದಿದೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ವಿರುದ್ಧ ಜೆಡಿಎಸ್ ಹೋರಾಟ ನಡೆಸಿತ್ತು. ಅಷ್ಟೇ ಅಲ್ಲದೆ ಗಣಪತಿ ಹತ್ಯೆ, ಸ್ಟೀಲ್ ಬ್ರಿಡ್ಜ್ ಪ್ರಕರಣ ಸೇರಿದಂತೆ ಹಲವು ಪ್ರಕರಣ ಹಾಗೂ ಹಗರಣಗಳಲ್ಲಿ ಜಾರ್ಜ್ ಹೆಸರು ಕೇಳಿಬಂದಿತ್ತು. 

ಹೀಗಿರುವಾಗ ಜಾರ್ಜ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಕಷ್ಟ ಎಂಬ ಸಂದೇಶವನ್ನು ಜೆಡಿಎಸ್ ನಾಯಕತ್ವ ಕಾಂಗ್ರೆಸ್ ವಲಯಕ್ಕೆ ರವಾನಿಸಿದೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಮಾತ್ರ ಜಾರ್ಜ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಜೆಡಿಎಸ್‌ಗೆ ತಿಳಿಸಬೇಕು ಎಂದು ಹೈಕಮಾಂಡ್ ಮುಂದೆ ಪ್ರಬಲ ಹಕ್ಕೊತ್ತಾಯ ಮಾಡಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹೈಕಮಾಂಡ್‌ನಲ್ಲೂ ಪ್ರಭಾವಿಯಾಗಿರುವ ಜಾರ್ಜ್ ತಮ್ಮ ದೆಹಲಿ ಸಂಪರ್ಕಗಳ ಮೂಲಕವೂ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಒತ್ತಡಕ್ಕೆ ಜೆಡಿಎಸ್ ಶರಣಾಗುವುದೇ ಅಥವಾ ಜಾರ್ಜ್ ಗೆ ಸಚಿವ ಸ್ಥಾನ ನೀಡಲು ನಿರಾಕರಿ ಸುವುದೇ ನೋಡಬೇಕು.

click me!