ಡಿಸಿಎಂ ಪಟ್ಟಕ್ಕಾಗಿ 16 ಲಿಂಗಾಯತ ಶಾಸಕರ ಆಗ್ರಹ

First Published May 22, 2018, 8:20 AM IST
Highlights

ಲಿಂಗಾಯತರಿಗೆ ಡಿಸಿಎಂ ಪದವಿ ಸಿಗಬೇಕು ಎಂಬ ಒತ್ತಡ ಕಾಂಗ್ರೆಸ್‌ನಲ್ಲಿ ಬಲಿಯತೊಡಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು 16 ಲಿಂಗಾಯತ ಶಾಸಕರ ನಿಯೋಗವು ಭೇಟಿ ಮಾಡಿ ಈ ಕುರಿತು ಹಕ್ಕೊತ್ತಾಯ ಮಂಡಿಸಿದೆ ಎಂದು ಮೂಲಗಳು ತಿಳಿಸಿವೆ. 

ಬೆಂಗಳೂರು: ಲಿಂಗಾಯತರಿಗೆ ಡಿಸಿಎಂ ಪದವಿ ಸಿಗಬೇಕು ಎಂಬ ಒತ್ತಡ ಕಾಂಗ್ರೆಸ್‌ನಲ್ಲಿ ಬಲಿಯತೊಡಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು 16 ಲಿಂಗಾಯತ ಶಾಸಕರ ನಿಯೋಗವು ಭೇಟಿ ಮಾಡಿ ಈ ಕುರಿತು ಹಕ್ಕೊತ್ತಾಯ ಮಂಡಿಸಿದೆ ಎಂದು ಮೂಲಗಳು ತಿಳಿಸಿವೆ. 

ಡಿಸಿಎಂ ಪಟ್ಟ ನೀಡಲು ಹೈಕಮಾಂಡ್ ಹಿಂಜರಿದದ್ದೇ ಆದರೆ, ಸಾಮೂಹಿಕ ರಾಜೀನಾಮೆಯ ಒತ್ತಡ ತಂತ್ರ ಅನುಸರಿಸಲೂ ಲಿಂಗಾಯತ ಶಾಸಕರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ. ಸೋಮವಾರರಾತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರ ನಿಯೋಗ, ಪಕ್ಷದ ಲಿಂಗಾಯತ ನಾಯಕರ ಪೈಕಿ ಯಾರಿಗೆ ಬೇಕಾದರೂ ಡಿಸಿಎಂ ಹುದ್ದೆ ನೀಡಿ. 

ಆದರೆ, ಈ ಹುದ್ದೆಯನ್ನು ಈ ಬಾರಿ ಲಿಂಗಾಯತರಿಗೆ ನೀಡಲೇಬೇಕು. ಬಿಜೆಪಿಯ ಆಮಿಷಗಳನ್ನು ಲೆಕ್ಕಿಸದೆ ಎಲ್ಲಾ ಶಾಸಕರು ಪಕ್ಷದ ಪರ ನಿಂತಿದ್ದೇವೆ. ಅಲ್ಲದೆ, ಯಡಿಯೂರಪ್ಪಗೆ ಸಿಎಂ ಹುದ್ದೆ ತಪ್ಪಿದ್ದರಿಂದ ಸಮುದಾಯದಲ್ಲಿ ನಮ್ಮ ಬಗ್ಗೆ ಅಸಮಾಧಾನವೂ ಇದೆ. ಕನಿಷ್ಠ ಡಿಸಿಎಂ ಹುದ್ದೆಯನ್ನಾದರೂ ಲಿಂಗಾಯತರಿಗೆ ನೀಡಿದರೆ ಅಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷ ಸಮುದಾಯದ ಅಸಮಾಧಾನವನ್ನು ತಣಿಸ ಬಹುದು.

ಹೀಗಾಗಿ ಈ ಬಾರಿ ಡಿಸಿಎಂ ಪದವಿ ನೀಡಲೇಬೇಕು ಎಂದು ಆಗ್ರಹ ಮಾಡಿತು ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಲಿಂಗಾಯತರಿಗೆ ಡಿಸಿಎಂ ಹುದ್ದೆ ನೀಡುವುದಕ್ಕೆ ಜೆಡಿಎಸ್‌ನಿಂದ ತೀವ್ರ ವಿರೋಧ ಎದುರಾಗಿದೆ ಎನ್ನಲಾಗಿದೆ. ಕಾಂಗ್ರೆಸ್ಸಿನ ಲಿಂಗಾಯತ ನಾಯಕರಿಗೆ ಡಿಸಿಎಂ ಹುದ್ದೆ ನೀಡಿದರೆ, ಆ ಪಕ್ಷದ ಪರ ಲಿಂಗಾಯತರು ಕ್ರೋಢೀಕರಣ ಗೊಳ್ಳಲು ಅನುಕೂಲವಾಗುತ್ತದೆ. ಇಂತಹ ಬೆಳವಣಿಗೆಗೆ
ಇಂಬು ನೀಡಬಾರದು ಎಂಬ ಕಾರಣಕ್ಕೆ ಜೆಡಿಎಸ್ ಲಿಂಗಾಯ ತರಿಗೆ ಡಿಸಿಎಂ ಹುದ್ದೆ ನೀಡಲು ವಿರೋಧಿಸುತ್ತಿದೆ ಎನ್ನಲಾಗಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಪ್ರತ್ಯೇಕ ಸಭೆ ನಡೆಸಿದ ಕಾಂಗ್ರೆಸ್ ನ ಲಿಂಗಾಯತ ಶಾಸಕರು ಒಂದು ವೇಳೆ ಜೆಡಿಎಸ್ ಒತ್ತಡಕ್ಕೆ ಮಣಿದು ಡಿಸಿಎಂ ಹುದ್ದೆಯನ್ನು ನೀಡಲು ಕಾಂಗ್ರೆಸ್ ನಾಯಕತ್ವ ಹಿಂಜರಿದರೆ ಸಾಮೂಹಿಕ ರಾಜೀನಾಮೆ ನೀಡುವ ಒತ್ತಡ ತಂತ್ರ ಅನುಸರಿಸಲು ನಿರ್ಧರಿ ಸಿದರು ಎಂದು ಮೂಲಗಳು ಹೇಳಿವೆ. 

ವೀರಶೈವ ಲಿಂಗಾಯತರಿಗೆ ಡಿಸಿಎಂ ಹುದ್ದೆ ಬೇಕು: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಕ್ಕೂಟ ಆಗ್ರಹಿಸಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಸವರಾಜ ದಿಂಡೂರು, ರಾಜ್ಯದಲ್ಲಿ 1.5ಕೋಟಿ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳಿಂದ 58  ಮಂದಿ ಶಾಸಕರು ಚುನಾಯಿತರಾಗಿದ್ದಾರೆ. ಹೀಗಾಗಿ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಶಾಸಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.

click me!