Kalyan Karnataka: ಕಲ್ಯಾಣ ನಾಡಲ್ಲಿ ಅಭಿವೃದ್ಧಿ ಆಗೋದು ಯಾವಾಗ?

By Kannadaprabha NewsFirst Published Sep 17, 2022, 11:04 AM IST
Highlights
  • ಕಲ್ಯಾಣ ನಾಡಲ್ಲಿ ಅಭಿವೃದ್ಧಿ ಆಗೋದು ಯಾವಾಗ?
  • ನಂಜುಂಡಪ್ಪ ವರದಿ ಪರಿಷ್ಕರಣೆ ವಿಳಂಬ
  • ಪ್ರಗತಿಗೆ ಗ್ರಹಣ
  • ಚರ್ಚೆಯಲ್ಲೇ ಉಳಿದ ಸಂತೋಷ ಸೂಚ್ಯಂಕ ಸಮೀಕ್ಷೆ

ಶೇಷಮೂರ್ತಿ ಅವಧಾನಿ

 ಕಲಬುರಗಿ (ಸೆ.17) :

‘ನವ ಕಲ್ಯಾಣ ಕರ್ನಾಟಕದ ಮೂಲಕ ನವ ಕರ್ನಾಟಕ ಹಾಗೂ ನವ ಭಾರತದ ನಿರ್ಮಾಣವಾಗಬೇಕಾದರೆ ಜನರ ಸುತ್ತ ಅಭಿವೃದ್ಧಿಯಾಗಬೇಕು, ಅಭಿವೃದ್ಧಿ ಸುತ್ತ ಜನ ಸುತ್ತಬಾರದು’ 2021, ಸೆ. 17 ರಂದು ಸಿಎಂ ಬಸವರಾಜ ಬೊಮ್ಮಾಯಿ ವಿಮೋಚನಾ ದಿನಾಚರಣೆ ಧ್ವಜಾರೋಹಣಕ್ಕೆ ಕಲಬುರಗಿಗೆ ಬಂದಾಗ ಹೇಳಿದ್ದ ಈ ಮಾತಿಗೆ ಬರೋಬ್ಬರಿ 1 ವರ್ಷ, ಬೊಮ್ಮಾಯಿಯವರ ಈ ಆಶಯ ಕಲ್ಯಾಣ ನಾಡಲ್ಲಿ ಈಡೇರೋ ಮಾತಿರಲಿ, ಆ ನಿಟ್ಟಿನಲ್ಲಿ ಪ್ರಯತ್ನಗಳೂ ಶುರುವಾಗಿಲ್ಲ ಎಂಬುದು ಕಟು ವಾಸ್ತವ!

Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ

ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ವೇಗ ನೀಡಿ, ದೊಡ್ಡ ಉದ್ದಿಮೆಗಳನ್ನು ಆಹ್ವಾನಿಸಿ ಕಲಬುರಗಿ ಸೇರಿದಂತೆ 7 ಜಿಲ್ಲೆಗಳ ವ್ಯಾಪ್ತಿಯ ಕಲ್ಯಾಣ ನಾಡನ್ನು ಹಲವು ಸ್ತರಗಳಲ್ಲಿ ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಇದನ್ನೆಲ್ಲ ಸಾಧಿಸಲು ಕಿತ್ತೂರು ಕರ್ನಾಟಕ ಟಾಸ್‌್ಕ ಫೋರ್ಸ್‌ ಮಾದರಿಯಲ್ಲೇ ಕಲ್ಯಾಣ ಕರ್ನಾಟಕ ಟಾಸ್‌್ಕ ಪೋರ್ಸ್‌ ರಚನೆಯಾಗಲಿ, ಈ ಮೂಲಕ ಅವರು ‘ಹೆಸರಲ್ಲಷ್ಟೇ ಕಲ್ಯಾಣ’ ಎಂಬ ಕೊರಗಲ್ಲಿರುವ ಕಲ್ಯಾಣ ಕರ್ನಾಟಕದ ಜನರ ಬವಣೆ ನೀಗಿಸಬಹುದಾಗಿದೆ ಎಂಬುದು ಅನೇಕರ ಅಭಿಮತವಾಗಿದ್ದರೂ ವಾಸ್ತವದಲ್ಲಿ ಇಂತಹ ಸಂಗತಿಗಳು ಚರ್ಚೆಯ ಮುನ್ನೆಲೆಗೇ ಬರುತ್ತಿಲ್ಲ.

ಕಲ್ಯಾಣದ ಅಭಿವೃದ್ಧಿ ವಿಚಾರದಲ್ಲಿ ಹ್ಯಾಪಿನೆಸ್‌ ಇಂಡೆಕ್ಸ್‌ ಸಮೀಕ್ಷೆ:

ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಆದಾಯದ ಆಧಾರದಲ್ಲಿ ಮಾನವಾಭಿವೃದ್ಧಿ ಸೂಚ್ಯಂಕ ಈಗ ನಿರ್ಧಾರ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಎಲ್ಲಾ ಮಾನದಂಡಗಳಲ್ಲಿಯೂ ಹಿಂದಿವೆ. ಹೀಗಾಗಿ ತಲಾ ಆದಾಯ ಸೇರಿದಂತೆ ಯಾವುದೇ ಮಾನದಂಡದಲ್ಲಿ ಈ ಭಾಗದ ಮಾನವಾಭಿವೃದ್ಧಿ ನಿರ್ಧರಿಸೋದನ್ನ ಬಿಟ್ಟು ಸಂತೋಷದ ಸೂಚ್ಯಂಕ (ಹ್ಯಾಪಿನೆಸ್‌ ಇಂಡೆಕ್ಸ್‌) ಆಧಾರದಲ್ಲಿ ಕಲ್ಯಾಣ ನಾಡಿನ ಸಮೀಕ್ಷೆ ನಡೆಸುವ ಅಗತ್ಯವಿದೆ ಎಂದು ಬೊಮ್ಮಾಯಿಯವರೇ ಪ್ರತಿಪಾದಿಸಿದ್ದರೂ ಈ ದಿಶೆಯೆಲ್ಲಿಯೂ ಪ್ರಗತಿ ಶೂನ್ಯ.

ಕಲ್ಯಾಣ ನಾಡಲ್ಲಿರುವ ಕುಟುಂಬಗಳ ಸಂತೋಷದ ಸೂಚ್ಯಂಕ ಆಧರಿಸಿ ಈ ನೆಲದ ಮಾನವಾಭಿವೃದ್ಧಿ ಪ್ರಗತಿ ಅರಿಯುವ ಕೆಲಸವಾಗಬೇಕಿದೆ. ಇದು ಪ್ರದೇಶ ಒಂದರ ಪ್ರಗತಿ ವಿಗತಿಗಳ ಪರಾಮರ್ಶೆಗಿರುವ ವೈಜ್ಞಾನಿಕ ಮಾನದಂಡ, ಈ ವಿಚಾರದಲ್ಲಿ ಹೇಗೆಲ್ಲಾ ಕಾರ್ಯಯೋಜನೆ ರೂಪಿಸಬೇಕು. ಅದನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬ ಬಗ್ಗೆ ಯೋಜನಾ ಇಲಾಖೆ ಮಾನದಂಡಗಳನ್ನು, ನಿಯಮಗಳನ್ನು ರೂಪಿಸಬೇಕಿತ್ತು. ಆದರಿಲ್ಲಿ ಎಲ್ಲವೂ ಎಂಎಲ್‌ಎಗಳು, ಮಂಡಳಿ ಅಧ್ಯಕ್ಷರ ಮರ್ಜಿಗೆ ಬಿಟ್ಟು ಬಿಡಲಾಗಿದೆ. ಹೀಗಾಗಿ ಕೆಕೆಆರ್‌ಡಿಬಿಗೆ 3 ಸಾವಿರ ಕೋಟಿ ಅನುದಾನ ಹರಿದು ಬಂದರೂ ಫಲಿತಾಂಶ ಅಗೋಚರ!

ಅಭಿವೃದ್ಧಿ ಕಾಣದ ಕಲ್ಯಾಣ:

ಜನರ ಜೀವನ ಮಟ್ಟಅಳೆಯುವ 10 ಮಾನದಂಡಗಳನ್ನು ಇಟ್ಟುಕೊಂಡು ನೀತಿ ಆಯೋಗÜ 2021ನೇ ಸಾಲಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಬಡವರ ಸಂಖ್ಯೆ (ಹೆಡ್‌ ಕೌಂಟ್‌ ರೇಶ್ಯೂ) ಶೇ. 19 ರಷ್ಟಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ. 49ರಷ್ಟಿದೆ. ಹೀಗಾಗಿ ಯಾದಗಿರಿ ಬಡವರ ಜಿಲ್ಲೆಯಾಗಿದೆ. ನಂತರದ ಸ್ಥಾನಗಳಲ್ಲಿ ಕಲಬುರಗಿ (ಶೇ. 29. 7), ಬೀದರ್‌ (25. 5), ರಾಯಚೂರು (36. 1), ಕೊಪ್ಪಳ (30. 8), ಬಳ್ಳಾರಿ (28. 8) ಎಲ್ಲಾ ಜಿಲ್ಲೆಗಳು ಹೀಗೆಯೇ ಬಡತನದಲ್ಲಿ ಸಾಲಾಗಿಯೇ ಸರತಿಯಲ್ಲಿವೆ. ಸಾವಿರಾರು ಕೋಟಿ ಹಣ ಹರಿದು ಬಂದಿದೆ ಎಂದರೆ ಪ್ರಗತಿ ಯಾಕಿಲ್ಲ. ಹಣ ಹೋಗುತ್ತಿರೋದಾದರೂ ಎಲ್ಲಿಗೆ?

'ಕ​-ಕ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಿ'

ಮಕ್ಕಳ ಬೆಳವಣಿಗೆ ಕುಂಠಿತ:

ಬೆಳವಣಿಗೆ ಕುಂಠಿತ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಶೇ. 35 ರಷ್ಟಿದ್ದರೆ ಕಲ್ಯಾಣ ನಾಡಲ್ಲಿ ಶೇ. 36. 4ರಷ್ಟಿದೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಶೇ. 19.5ರಷ್ಟಿದ್ದರೆ ಈ ಸಂಖ್ಯಾಬಲ ಕಲ್ಯಾಣ ನಾಡಲ್ಲಿ ಶೇ. 26.1ರಷ್ಟಿದೆ. ಇನ್ನು ತೀವ್ರ ತರಹದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಶೇ.84ರಷ್ಟಿದ್ದರೆ, ಕಲ್ಯಾಣ ನಾಡಲ್ಲಿ ಇದರ ಪ್ರಮಾಣ ಶೇ. 10.5ರಷ್ಟಿದೆ. ಕಡಿಮೆ ತೂಕದ ಮಕ್ಕಳು ರಾಜ್ಯದಲ್ಲಿ ಶೇ.32.9ರಷ್ಟಿದ್ದರೆ, ಕಲ್ಯಾಣದಲ್ಲಿ ಈ ಪ್ರಮಾಣ ಶೇ.35.2ರಷ್ಟಿದೆ. ಇನ್ನು ಹೆಚ್ಚು ತೂಕದ ಮಕ್ಕಳ ಪ್ರಮಾಣ ರಾಜ್ಯದಲ್ಲಿ ಶೇ. 3.2 ರಷ್ಟಿದ್ದರೆ ಕಲ್ಯಾಣದಲ್ಲಿ ಶೇ. 26 ರಷ್ಟಿದೆ.

click me!