ರಾಮನವಮಿ ಆಚರಣೆ ಮಾಡಿದ ವಿದ್ಯಾರ್ಥಿಗಳ ಮೇಲೆ ವಿವಿಯ ಇನ್ನೊಂದು ವಿದ್ಯಾರ್ಥಿಗಳ ತಂಡ ದಾಳಿ ನಡೆಸಿದ ಪರಿಣಾಮ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಘರ್ಷ ಉಂಟಾಗಿದೆ.
ವರದಿ : ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್
ಕಲಬುರಗಿ(ಏ.11): ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (Central University of Karnataka) ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯ ಕನಸ್ಸಿನೊಂದಿಗೆ ಹುಟ್ಟಿಕೊಂಡ ವಿಶ್ವವಿದ್ಯಾಲಯ, ಮತ್ತೊಂದು ಜೆಎನ್ ಯು ದಿಕ್ಕಿನಲ್ಲಿ ಸಾಗುತ್ತಿದೆ. ರಾಮನವಮಿ (Rama Navami) ಆಚರಣೆ ಮಾಡಿದ ವಿದ್ಯಾರ್ಥಿಗಳ ಮೇಲೆ ವಿವಿಯ ಇನ್ನೊಂದು ವಿದ್ಯಾರ್ಥಿಗಳ ತಂಡ ದಾಳಿ ನಡೆಸಿದ್ದೇ ಸಂಘರ್ಷದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಕಲಬುರಗಿ ಜಿಲ್ಲೆ (Kalaburagi District) ಆಳಂದ ತಾಲೂಕಿನ ಕಡಗಂಚಿ ಬಳಿ ಇರುವ ವಿಶ್ವ ವಿದ್ಯಾಲಯವಿದು. ಹಿಂದುಳಿದ ಕಲಬುರಗಿಯಲ್ಲಿ ಕೇಂದ್ರೀಯ ವಿವಿ ಬಂದಾಗ ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ. ಶೈಕ್ಷಣಿಕ ಕ್ರಾಂತಿಗೆ ಈ ವಿವಿ ಮುನ್ನುಡಿ ಬರೆಯಲಿದೆ ಎನ್ನುವ ಕನಸ್ಸುಗಳು ಹುಟ್ಟಿಕೊಂಡಿದ್ದವು. ಆದ್ರೆ ಈ ಆಶಾಭಾವನೆ ಕಮರುತ್ತಿದೆ. ಬರೀ ವಿವಾದಗಳಿಂದಾಗಿಯೇ ಈ ವಿವಿ ಸದ್ದು ಮಾಡುತ್ತಿದೆ. ಇದರಲ್ಲಿ ಹೊಸ ಸೇರ್ಪಡೆಯೇ ರಾಮನವಮಿ ಆಚರಣೆಯ ಸಂಘರ್ಷ.
ಹೌದು.. ವಿವಿಯ ಆವರಣದಲ್ಲಿ ಒಂದು ಪುಟ್ಟ ಲಕ್ಷ್ಮಿ ಗುಡಿ ಇದೆ. ಈ ಗುಡಿಯಲ್ಲಿ ನಿನ್ನೆ ಕೆಲ ವಿದ್ಯಾರ್ಥಿಗಳು ಶ್ರೀರಾಮ ನವಮಿ ಆಚರಿಸಿದ್ದಾರೆ. ಈ ಆಚರಣೆ ಮುಗಿಯುತ್ತಿದ್ದಂತೆಯೇ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಎಬಿವಿಪಿಯ ಇಬ್ಬರು ಕಾರ್ಯಕರ್ತರನ್ನು ಅಡ್ಡಗಟ್ಟಿ ಹಲ್ಲೆಗೈದಿದ್ದಾರೆ. ಕಲ್ಲು ಮತ್ತು ಬ್ಲೇಡನಿಂದ ಹಲ್ಲೆಗೈದ ಪರಿಣಾಮ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಕಲಬುರಗಿಯ ವಿಶ್ವನಾಥ ಮತ್ತು ರಾಜಸ್ಥಾನ ಮೂಲದ ನರೇಂದ್ರಕುಮಾರ ಎನ್ನುವವರಿಗೆ ಗಾಯಗಳಾಗಿದ್ದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ಎಬಿವಿಪಿಯ ಸಕ್ರೀಯ ಕಾರ್ಯಕರ್ತರು. ವಿವಿಯಲ್ಲಿ ಎಬಿವಿಪಿ ಬೆಳೆಸುತ್ತಿರುವುದನ್ನು ಸಹಿಸದೇ ಹಲ್ಲೆ ಮಾಡಿದ್ದಾರೆ ಎನ್ನುತ್ತಾರೆ ಗಾಯಾಳು ವಿಶ್ವನಾಥ್.
UGC NET 2022 EXAM ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ
ರಾಮನವಮಿ ಆಚರಣೆ ಮುಗಿದ ನಂತರ ವಿಶ್ವನಾಥ ಮತ್ತು ನರೇಂದ್ರಕುಮಾರ ಬೈಕ್ ಮೇಲೆ ತೆರಳುತ್ತಿದ್ದಾಗ, ಅಡ್ಡಗಟ್ಟಿದ ತೆಲಂಗಾಣ ಮೂಲದ ಸಾಧಿಕ್, ಆಂದ್ರಪ್ರದೇಶ ಮೂಲದ ರಾಹುಲ್ ಮತ್ತು ಕಲಬುರಗಿಯ ರಾಹುಲ್ ಆರ್ಯಾ ಎನ್ನುವ ಮೂವರು ವಿದ್ಯಾರ್ಥಿಗಳೇ ಹಲ್ಲೆ ಮಾಡಿದವರು ಎಂದು ಗಾಯಾಳುಗಳು ನರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ಎಡಪಂಥಿಯ ವಿಚಾರಧಾರೆಯವರೆಂದು ಹೇಳಲಾಗಿದೆ, ವಿವಿಯಲ್ಲಿ ಹಿಂದೂಪರ ಸಂಘಟನೆಗಳು ಬೆಳೆಯುವುದನ್ನು ಸಹಿಸುತ್ತಿರಲಿಲ್ಲ ಎಂಬ ಆರೋಪವಿದೆ. ಈ ಮೊದಲೂ ಕೂಡ ಇದೇ ರೀತಿಯ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿಯ ಮುಂದೆ ಪ್ರತಿಭಟನೆ ನಡೆಸಿ ಈ ವಿದ್ಯಾರ್ಥಿಗಳ ಬಂಧನಕ್ಕೆ ಆಗ್ರಹಿಸಿದರು. ಕಲಬುರಗಿ ಕೇಂದ್ರೀಯ ವಿವಿಯನ್ನು ಮತ್ತೊಂದು ಜೆ.ಎನ್. ಯು ಮಾಡಲು ಹೊರಟಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಮತ್ತು ಶ್ರೀರಾಮಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BANK OF BARODA RECRUITMENT 2022 ಕೃಷಿ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ನೇಮಕಾತಿ
ಒಂದೆಡೆ ಕೇಂದ್ರೀಯ ವಿವಿಯ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಾಗಲೇ ಇತ್ತ ದಲಿತ ಸೇನೆ ಕಾರ್ಯಕರ್ತರೂ ಸಹ ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ಶುರು ಮಾಡಿ ಗಮನ ಸೆಳೆದರು. ದಲಿತ ಯುವಕ ರಾಹುಲ್ ಮೇಲೆ ಅನ್ಯಾಯವಾಗಿ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗೆ ಕಸಗುಡಿಸಲು ಎಬಿವಿಪಿ ಕಾರ್ಯಕರ್ತರೇ ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅವರೇ ಹಲ್ಲೆ ಮಾಡಿ ನಕಲಿ ವಿಡಿಯೋಗಳ ಮೂಲಕ ರಾಹುಲ್ ಮತ್ತು ಸಾದಿಕ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಿವಿಯಲ್ಲಿ ಕೋಮುವಾದಿಗಳು ಶಾಂತಿ ಕದಡುತ್ತಿದ್ದಾರೆ ಎಂದು ದಲಿತ ಸೇನೆ ಆರೋಪಿಸಿದೆ.
ಹಲ್ಲೆ ಮಾಡಿರುವ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಒಟ್ಟಿನಲ್ಲಿ ಕಲಬುರಗಿ ಕೇಂದ್ರೀಯ ವಿವಿ ಶಿಕ್ಷಣಕ್ಕಿಂತ ಇತರೇ ಕಾರಣದಿಂದಾಗಿಯೇ ಸುದ್ದಿಯಾಗುತ್ತಿದ್ದು, ಈಗಲೂ ವಿದ್ಯಾರ್ಥಿಗಳ ಸಂಘರ್ಷದಿಂದ ಗಮನ ಸೆಳೆದಿದೆ. ಅಷ್ಟೇ ಅಲ್ಲ ಒಂದೆಡೆ ಎಬಿವಿಪಿ, ಮತ್ತೊಂದೆಡೆ ದಲಿತ ಸೇನೆಯ ಪ್ರತಿಭಟನೆ ಇನ್ನೊಂದೆಡೆ ಎಡಪಂಥಿಯ ವಿಚಾರ ಥಾರೆಯ ವಿದ್ಯಾರ್ಥಿಗಳು ಹೀಗೆ ವಿವಿ ಮತ್ತೊಂದು ಜೆ.ಎನ್.ಯು ಆಗುವತ್ತ ದಾಪುಗಾಲು ಇಡುತ್ತಿರುವುದಂತೂ ಸುಳ್ಳಲ್ಲ.