
ನವದೆಹಲಿ: ಯುಪಿಎಸ್‌ಸಿ (UPSC) ಸಂದರ್ಶನ ಎಂದರೆ ಕೇವಲ ಸಾಮಾನ್ಯ ಜ್ಞಾನದ ಪರೀಕ್ಷೆಯಲ್ಲ. ಇದು ಅಭ್ಯರ್ಥಿಯ ತಾರ್ಕಿಕ ಆಲೋಚನೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸಮತೋಲಿತವಾಗಿ ಪ್ರತಿಕ್ರಿಯಿಸುವ ರೀತಿಯನ್ನು ಪರೀಕ್ಷಿಸುವ ವೇದಿಕೆ. ಕೆಲವೊಮ್ಮೆ ಇಲ್ಲಿ ಕೇಳಲಾಗುವ ಪ್ರಶ್ನೆಗಳು ತುಂಬಾ ಸರಳವಾಗಿ ಕಂಡರೂ ಅದರ ಹಿಂದೆ ಅಭ್ಯರ್ಥಿಯ ವ್ಯಕ್ತಿತ್ವವನ್ನು ಅಳೆಯುವ ಉದ್ದೇಶವಿರುತ್ತದೆ.
ಇತ್ತೀಚೆಗೆ ಯುಪಿಎಸ್‌ಸಿ ಮಾದರಿ ಸಂದರ್ಶನವೊಂದರಲ್ಲಿ (Mock Interview) ಅಭ್ಯರ್ಥಿಗೆ ಇಂತಹದ್ದೇ ಒಂದು ಪ್ರಶ್ನೆ ಕೇಳಲಾಗಿತ್ತು.ಎತ್ತರ ಇರುವ ವ್ಯಕ್ತಿಗಳು ಹೆಚ್ಚು ಆಹಾರ ಸೇವಿಸುತ್ತಾರೆಯೇ? ಎಂದು. ಈ ಪ್ರಶ್ನೆಗೆ ತಕ್ಷಣವೇ 'ಹೌದು' ಅಥವಾ 'ಇಲ್ಲ' ಎಂದು ಉತ್ತರಿಸುವುದು ಸರಿಯಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಆಹಾರದ ಪ್ರಮಾಣವು ಕೇವಲ ಎತ್ತರದ ಮೇಲೆ ಮಾತ್ರ ಅವಲಂಬಿತವಾಗಿಲ್ಲ ಎಂದು ವಿವರಿಸುವುದು ಜಾಣ್ಮೆಯ ಲಕ್ಷಣ.
ಸರ್/ಮೇಡಂ, ಎತ್ತರ ಇರುವ ವ್ಯಕ್ತಿಗಳು ಕಡ್ಡಾಯವಾಗಿ ಹೆಚ್ಚು ಆಹಾರ ಸೇವಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ದೇಹದ ಗಾತ್ರ ಮತ್ತು ತೂಕ ಹೆಚ್ಚಾದಂತೆ ದೇಹಕ್ಕೆ ಬೇಕಾದ ಶಕ್ತಿಯ ಪ್ರಮಾಣವೂ ಹೆಚ್ಚಾಗಬಹುದು. ಒಬ್ಬ ವ್ಯಕ್ತಿಗೆ ಬೇಕಾದ ಆಹಾರದ ಪ್ರಮಾಣವು ಕೇವಲ ಎತ್ತರವನ್ನಲ್ಲದೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
ಎತ್ತರವಾಗಿದ್ದು ದಿನವಿಡೀ ಯಾವುದೇ ದೈಹಿಕ ಕೆಲಸ ಮಾಡದ ವ್ಯಕ್ತಿಗಿಂತ, ಕುಳ್ಳಗಿದ್ದರೂ ದಿನವಿಡೀ ದೈಹಿಕವಾಗಿ ಹೆಚ್ಚು ಸಕ್ರಿಯವಾಗಿರುವ ವ್ಯಕ್ತಿಗೆ ಹೆಚ್ಚಿನ ಆಹಾರದ ಅಗತ್ಯವಿರುತ್ತದೆ. ಪ್ರತಿಯೊಬ್ಬರ ದೇಹದ ಮೆಟಬಾಲಿಸಂ ದರವು ವಿಭಿನ್ನವಾಗಿರುತ್ತದೆ. ಇದು ದೇಹವು ಎಷ್ಟು ವೇಗವಾಗಿ ಶಕ್ತಿಯನ್ನು ವ್ಯಯಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಬೆಳೆಯುವ ವಯಸ್ಸಿನ ಮಕ್ಕಳಿಗೆ ಮತ್ತು ಹೆಚ್ಚು ದೈಹಿಕ ಶ್ರಮ ಪಡುವ ಯುವಕರಿಗೆ ಹೆಚ್ಚಿನ ಕ್ಯಾಲೊರಿಗಳ ಅಗತ್ಯವಿರುತ್ತದೆ. ವ್ಯಕ್ತಿಯ ಆರೋಗ್ಯ ಮತ್ತು ಜೀವನಶೈಲಿಯೂ ಆಹಾರದ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ.
ಯುಪಿಎಸ್‌ಸಿ ಸಂದರ್ಶನ ಮಂಡಳಿಯು ಇಂತಹ ಪ್ರಶ್ನೆಗಳ ಮೂಲಕ ಅಭ್ಯರ್ಥಿಯು ಯಾವುದೇ ವಿಷಯವನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನೋಡದೆ ವೈಜ್ಞಾನಿಕ ಮತ್ತು ತಾರ್ಕಿಕವಾಗಿ ವಿಶ್ಲೇಷಿಸುತ್ತಾನೆಯೇ ಎಂದು ಗಮನಿಸುತ್ತದೆ. 'ಹೌದು' ಅಥವಾ 'ಇಲ್ಲ' ಎಂದು ನೇರವಾಗಿ ಹೇಳುವ ಬದಲು, ಅದರ ಹಿಂದಿನ ಕಾರಣಗಳನ್ನು ವಿವರಿಸುವುದು ಅಭ್ಯರ್ಥಿಯ ಆಳವಾದ ಆಲೋಚನಾ ಕ್ರಮವನ್ನು ತೋರಿಸುತ್ತದೆ.
ಯಾವುದೇ ವಿಷಯವನ್ನು ಅತಿಯಾಗಿ ಸಾಮಾನ್ಯೀಕರಿಸುವುದು ಸರಿಯಲ್ಲ. ಎತ್ತರವು ಆಹಾರದ ಅಗತ್ಯದ ಮೇಲೆ ಪ್ರಭಾವ ಬೀರಬಹುದಾದ ಒಂದು ಅಂಶ ಮಾತ್ರವೇ ಹೊರತು, ಅದೇ ಅಂತಿಮ ನಿರ್ಧಾರವಲ್ಲ ಎಂಬ ಸಮತೋಲಿತ ಉತ್ತರವು ನಿಮ್ಮನ್ನು ಒಬ್ಬ ಉತ್ತಮ ಆಡಳಿತಾಧಿಕಾರಿಯಾಗಿ ಬಿಂಬಿಸುತ್ತದೆ.