
ನವದೆಹಲಿ: ಕೈಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ, ಅದೂ ಫಸ್ಟ್ ಕ್ಲಾಸ್‌ನಲ್ಲಿ ಪಾಸಾದ ಸರ್ಟಿಫಿಕೇಟ್. ಐಟಿ ಕಂಪನಿಯಲ್ಲಿ ಕೈತುಂಬಾ ಸಂಬಳ ಸಿಗಬಹುದು ಎಂಬ ಕನಸು. ಆದರೆ, ವಾಸ್ತವ ಮಾತ್ರ ಅಂದುಕೊಂಡಿದ್ದಕ್ಕಿಂತ ಭಿನ್ನ. ಇದು 500ಕ್ಕೂ ಹೆಚ್ಚು ಕಡೆ ಕೆಲಸಕ್ಕಾಗಿ
ಅರ್ಜಿ ಸಲ್ಲಿಸಿದರೂ ಎಲ್ಲೂ ಕೆಲಸ ಸಿಗದೆ ಅಂತಿಮವಾಗಿ ಜೀವನ ನಿರ್ವಹಣೆಗಾಗಿ ರಾಪಿಡೋ (Rapido) ಬೈಕ್ ಟ್ಯಾಕ್ಸಿ ಓಡಿಸುತ್ತಿರುವ ಒಬ್ಬ ಎಂಜಿನಿಯರಿಂಗ್ ಪದವೀಧರನ ಕರುಣಾಜನಕ ಕಥೆ ಇದು.
ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ 'ನೀರಜ್' ಎಂಬುವವರು ಹಂಚಿಕೊಂಡ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೀರಜ್ ಅವರು ಇತ್ತೀಚೆಗೆ ರಾಪಿಡೋ ಬುಕ್ ಮಾಡಿದಾಗ ಬಂದ ರೈಡರ್‌ನ ಹೆಲ್ಮೆಟ್ ಮೇಲೆ ಕಾಲೇಜು ಸ್ಟಿಕ್ಕರ್ ಒಂದು ಅವರ ಗಮನ ಸೆಳೆಯಿತು. ಆಗ ವಿಚಾರಿಸಿದಾಗ ರೈಡರ್ ತನ್ನ ಜೀವನದ ಕಹಿಸತ್ಯವನ್ನು ಬಿಚ್ಚಿಟ್ಟಿದ್ದಾನೆ.
ಆ ಯುವಕ ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾನೆ. ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆತ ಇದುವರೆಗೆ
ಬರೋಬ್ಬರಿ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ದುರಾದೃಷ್ಟವಶಾತ್ ಒಂದೇ ಒಂದು ಕಂಪನಿಯಿಂದಲೂ ಆತನಿಗೆ ಕೆಲಸದ ಆಫರ್ ಬಂದಿಲ್ಲ. ಕೈಯಲ್ಲಿದ್ದ ಉಳಿತಾಯದ ಹಣವೆಲ್ಲ ಖಾಲಿಯಾದ ಮೇಲೆ, ಜೀವನ ನಡೆಸಲು ದಾರಿಯಿಲ್ಲದೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದಲೇ ರಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಆಘಾತಕಾರಿ ಮತ್ತು ಬೇಸರದ ಸಂಗತಿಯೆಂದರೆ ಆತ ಬೈಕ್ ಟ್ಯಾಕ್ಸಿ ಓಡಿಸುತ್ತಿರುವ ವಿಷಯ ಆತನ ತಂದೆ-ತಾಯಿಗೆ ತಿಳಿದೇ ಇಲ್ಲ. ಮಗ ಮನೆಯಲ್ಲೇ ಕುಳಿತು ಇಂಟರ್ವ್ಯೂಗಳಿಗೆ ತಯಾರಿ ನಡೆಸುತ್ತಿದ್ದಾನೆಂದೇ ಅವರು ಭಾವಿಸಿದ್ದಾರೆ. ಈ ವಿಷಯ ತಿಳಿದರೆ ಬೇಸರವಾಗುತ್ತದೆ, ಅದನ್ನು ವಿವರಿಸುವುದು ಕೂಡ ಕಷ್ಟ. ಅದಕ್ಕೇ ಸತ್ಯ ಹೇಳಿಲ್ಲ ಎಂದು ಆ ಯುವಕ ನೀರಜ್ ಬಳಿ ಹೇಳಿಕೊಂಡಿದ್ದಾನೆ. ಇನ್ನು, ಯುವಕನ ಮಾತುಗಳಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶವಿರಲಿಲ್ಲ, ಬದಲಾಗಿ ವಾಸ್ತವದ ಒಪ್ಪಿಗೆಯಿತ್ತು. ಈಗ ಮಾರ್ಕೆಟ್ ಹೀಗೆಯೇ ಇದೆ ಎಂದು ಆತ ಸರಳವಾಗಿ ಹೇಳಿ ತನ್ನ ಕೆಲಸ ಮುಂದುವರಿಸಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ನಮಗೂ ಇಂತಹ ಅನುಭವವಾಗಿದೆ, ನೂರಾರು ಕಡೆ ಅರ್ಜಿ ಹಾಕಿದ್ರೂ ಕನಿಷ್ಠ ಒಂದು ಇಂಟರ್ವ್ಯೂ ಕಾಲ್ ಕೂಡ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಪದವೀಧರನ ಕಥೆ ಇಂದಿನ ಶಿಕ್ಷಣ ಮತ್ತು ಉದ್ಯೋಗದ ನಡುವೆ ಇರುವ ದೊಡ್ಡ ಕಂದಕಕ್ಕೆ ಸಾಕ್ಷಿಯಾಗಿದೆ. ಉತ್ತಮ ಅಂಕಗಳನ್ನು ಪಡೆದರೂ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳಿಲ್ಲದೆ ಯುವಕರು ಇಂತಹ ಅನಿವಾರ್ಯ ಕೆಲಸಗಳನ್ನು ಮಾಡುತ್ತಿರುವುದು ದೇಶದ ನಿರುದ್ಯೋಗದ ಕರಾಳ ಮುಖವನ್ನು ತೋರಿಸುತ್ತಿದೆ.